ದುಡಿಮೆಯೇ ಸಾರ್ಥಕ ಜೀವನದ ಸತ್ಯ : ವಿಶ್ವನಾಥ ಹಿರೇಮಠ

ಹಾನಗಲ್ಲ :

    ದುಡಿಮೆಯೇ ಸಾರ್ಥಕ ಜೀವನದ ಸತ್ಯವಾಗಿದ್ದು ಕಾಯಕ ಧರ್ಮದಿಂದಲೇ ನಿಜವಾದ ಮುಕ್ತಿ ಎಂಬ ಅರಿವು ನೀಡಿದ ವಚನಕಾರರ ಹಿತವಚನದಂತೆ ಕಾರ್ಮಿಕರು ತಮ್ಮ ಹಕ್ಕಿನ ಜೊತೆಗೆ ಕರ್ತವ್ಯವನ್ನು ಮರೆಯದಂತೆ ಬದುಕಬೇಕು ಎಂದು ಕರ್ನಾಟಕ ಸರಕಾರದ ಇಂಧನ ಇಲಾಖೆಯ ಉಪ ಕಾರ್ಯದರ್ಶಿ ವಿಶ್ವನಾಥ ಹಿರೇಮಠ ಕರೆ ನೀಡಿದರು.

     ಬುಧವಾರ ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಹಾನಗಲ್ಲ ತಾಲೂಕು ಘಟಕ, ಲೋಕಮಂಚ ಸಂಯುಕ್ತವಾಗಿ ಆಯೋಜಿಸಿದ “ಕಾರ್ಮಿಕ-ಕಾಯಕ ದಿನ” ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲವೂ ಕಾನೂನಿನಿಂದಲೇ ಸಾಧ್ಯವಿಲ್ಲ. ಮಾನವೀಯತೆಗೆ ಬರಗಾಗಲ ಬಂದಿದೆ. ಮೌಲ್ಯಗಳು ಸಾಯುತ್ತಿವೆ.

      ದುಡಿಮೆಯೇ ದೇವರು ಎಂಬುದನ್ನು ಮರೆತಿದ್ದೇವೆ. ನನ್ನ ಸ್ವಂತ ಹಿತದ ಜೊತೆಗೆ ರಾಷ್ಟ್ರೀಯ ಧರ್ಮವನ್ನು ಮರೆಯುವುದು ಬೇಡ. ಎಲ್ಲವನ್ನೂ ದೂರುವುದು ಬೇಡ. ಒಳ್ಳೆಯದನ್ನು ಸ್ವೀಕರಿಸುವ ಮನಸ್ಸು ಎಲ್ಲರದಾಗಬೇಕು. ಮಕ್ಕಳಿಗೆ ದುಡಿಯುವುದನ್ನು ರೂಢಿ ಮಾಡದಿದ್ದರೆ ನಾಳೆ ದೊಡ್ಡ ಅಪಾಯವನ್ನು ನೋಡಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ದುಡಿಮೇ ಸಂಪತ್ತು ಎಂಬುದನ್ನು ಬಾಲ್ಯದಲ್ಲಿಯೇ ಅರಿವಾಗಿ ಮೂಡಿಸಿದರೆ ಕಾರ್ಮಿಕ-ಕಾಯಕ ದಿನ ಸಾರ್ಥಕವಾಗುತ್ತದೆ. ಉಳ್ಳವರು ಕಾರ್ಮಿಕರು, ಶ್ರಮಜೀವಿಗಳನ್ನು ಗೌರವಿಸುವಂತಾಗಬೇಕು ಎಂದರು.

       ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಡಾ.ಪ್ರಕಾಶ ಹೊಳೇರ ಕಾಯಕ ಧರ್ಮ ಕುರಿತು ಉಪನ್ಯಾಸಕರಾಗಿ ಮಾತನಾಡಿ, ಕಟ್ಟುವುದು, ಬೆಳೆಸುವುದು ಕಾರ್ಮಿಕ ಕಾಯಕದ ಕಾರ್ಯ, ಊರಿ ಕೇರಿ ದೇಶದ ಹಿತಕ್ಕಾಗಿ ಬದುಕಿನ ಕಾರ್ಮಿಕರೊಂದಿಗೆ ಸೈನಿಕರು, ರೈತ ಸಮುದಾಯವನ್ನು ಗೌರವಿಸುವುದು ಅತ್ಯಂತ ಆವಶ್ಯಕ ಎಂದರು.

       ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪುರ, ಕಾಯಕದಲ್ಲಿ ಕೈಲಾಸ ಕಾಣಬೇಕೆಂಬ ತತ್ವದಲ್ಲಿ ನಿಜವಾದ ಜೀವನ ಮೌಲ್ಯವಿದೆ. ಜಾತಿ ಮತ ಪಂಥ ಮೀರಿದ ಕಾಯಕ ಧರ್ಮ ಪಾಲಿಸಿದವರು, ಸಂದೇಶ ನೀಡಿದವರು ಶರಣರು. ಶರಣರ ಕಾಲ ನಿಜವಾದ ಮಾನವೀಯ ಮೌಲ್ಯಗಳ ಕಾಲ ಎಂದರು.

      ರೋಶನಿ ಸಮಾಜಸೇವಾ ಸಂಸ್ಥೆಯ ಸಹಾಯಕ ನಿರ್ದೇಶಕಿ ಸಿಸ್ಟರ್ ಸಿಂಥಿಯಾ ಡಿ.ಮೆಲ್ಲೋ ಮಾತನಾಡಿ, ಶ್ರಮ ಜೀವನಕ್ಕೆ ಫಲ ದೊರೆಯುವಂತಾಗಬೇಕು. ಕಾರ್ಮಿಕರು ಎಲ್ಲವನ್ನೂ ಹೋರಾಟದಿಂದಲೇ ಪಡೆಯುವಂತಾಗಿರುವುದು ವಿಷಾದದ ಸಂಗತಿ. ಸರಕಾರ ಕಾರ್ಮಿಕರನ್ನು ರಕ್ಷಿಸಲು ಮುಂದಾಗಬೇಕು ಎಂದರು.

       ಇದೇ ಸಂದರ್ಭದಲ್ಲಿ ಡೊಳ್ಳೇಶ್ವರ ಗ್ರಾಮದ ಕಾರ್ಮಿಕ ಭರಮಪ್ಪ ಹನುಮಂತಪ್ಪ ಸವೂರ ಅವರನ್ನು ಶರಣ ಸಾಹಿತ್ಯ ಪರಿಷತ್ತಿನ ಕಾಯಕ ದಿನದ ಅಂಗವಾಗಿ ಗೌರವಿಸಲಾಯಿತು. ಶಸಾಪ ತಾಲೂಕು ಘಟಕದ ಅಧ್ಯಕ್ಷ ಪ್ರೊ.ಸಿ.ಮಂಜುನಾಥ ಅಧ್ಯಕ್ಷತೆವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ ಆಶಯ ಮಾತುಗಳನ್ನಾಡಿದರು.

       ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಶಂಭು ಹೀರೂರ, ಸಂತೋಷ ಅಪ್ಪಾಜಿ, ಸಿದ್ದಲಿಂಗೇಶ ತುಪ್ಪದ, ಜಗದೀಶ ಸಿಂಧೂರ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ರಾಮು ಯಳ್ಳೂರ, ವಿಶ್ವನಾಥ ಬಿಕ್ಷಾವರ್ತಿಮಠ, ಕಲ್ಲಪ್ಪ ನಾಯಕ, ಲೋಕಮಂಚ ಸಂಚಾಲಕ ಮಂಜುನಾಥ ಕುದರಿ, ಚನ್ನಬಸನಗೌಡ ಪಾಟೀಲ, ರಾಮಚಂದ್ರ ಶಿಡ್ಲಾಪುರ, ತಿಪ್ಪೇಸ್ವಾಮಿ ಕೊಪ್ಪದ, ಪಾಲಾಕ್ಷಯ್ಯ ಹಿರೇಮಠ, ರಾಮಣ್ಣ ಬುಡ್ಡನವರ, ನಾಗರಜ ಅಂಗಡಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಸಂಗೀತ ಶಿಕ್ಷಕಿ ಸುಧಾ ಹೊಸಮನಿ ವಚನ ಪ್ರಾರ್ಥನೆ ಹಾಡಿದರು. ತಾಲೂಕು ಕಾರ್ಯದರ್ಶಿ ಎಸ್.ವಿ.ಹೊಸಮನಿ ಸ್ವಾಗತಿಸಿದರು. ನಗರ ಕಾರ್ಯದರ್ಶಿ ಪ್ರವೀಣ ಬ್ಯಾತನಾಳ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ನಂದೀಶ ಲಮಾಣಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link