ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪ್ರೇರಣಾ ಶಕ್ತಿ :ಶಾಸಕ

ಚಳ್ಳಕೆರೆ

    ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ. 94.92 ಫಲಿತಾಂಶ ಪಡೆಯುವ ಮೂಲಕ ಚಳ್ಳಕೆರೆ ತಾಲ್ಲೂಕು ಶೈಕ್ಷಣಿಕ ಕ್ಷೇತ್ರದಲ್ಲೂ ಮುನ್ನಡೆಸಾಧಿಸಿದೆ ಎಂಬ ಸಂದೇಶವನ್ನು ಜನತೆಗೆ ನೀಡಿದ್ದೀರ. ಶಿಕ್ಷಕ ವರ್ಗದ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಶಿಕ್ಷಕರು ಅಭಿನಂದನಾರ್ಹರು. ಮುಂಬರುವ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಹೆಚ್ಚು ಆದ್ಯತೆ ನೀಡುವಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಿವಿ ಮಾತು ಹೇಳಿದರು.

    ಅವರು, ಶನಿವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ನೂತನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು, ಅಂಗವಿಕಲ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ಸಲ್ಲಿಸಿ ನಂತರ ಮಾತನಾಡಿದರು. ಹಲವಾರು ದೃಷ್ಠಿಕೋನಗಳಿಂದ ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶಿಕ್ಷಣ ಕ್ಷೇತ್ರದ ಸರ್ವತೋಮುಖ ಸಾಧನೆಗೆ ಮುನ್ನಡೆಯಾಗಲಿದೆ. ಇಂದು ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ.

    ಶಿಕ್ಷಣ ಎಲ್ಲಿ ಅಭಿವೃದ್ಧಿಯಾಗುತ್ತದೆಯೋ ಅಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನ ನಾವು ಕಾಣಬಹುದಾಗಿದೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಎಂಟನೇ ವರ್ಷದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂತೋಷವೆನ್ನಿಸುತ್ತದೆ. ನನ್ನ ಮೊಟ್ಟಮೊದಲ ಆದ್ಯತೆ ಶಿಕ್ಷಣ ಕ್ಷೇತ್ರ. ಈ ಕ್ಷೇತ್ರದ ಪ್ರಗತಿಗೆ ಸದಾಬೆಂಗಾವಲಾಗಿ ನಿಲ್ಲುತ್ತೇನ್ನಲ್ಲದೆ ಶಿಕ್ಷಣ ಇಲಾಖೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

   ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಕೊರೋನಾ ವೈರಾಣು ಹಿನ್ನೆಲೆಯಲ್ಲಿ ಸರ್ಕಾರಿ ನಿಯಮ ಪಾಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆಡಂಭರವಿಲ್ಲದೆ ಕೇವಲ ಸರ್ವಪಲ್ಲಿ ರಾಧಕೃಷ್ಣನ್‍ರವರ ಮಹೋನ್ನತ್ತ ಸೇವೆಯನ್ನು ಸ್ಮರಿಸುವ ದಿನವಾಗಿದೆ. ಶಿಕ್ಷಕರು ಸದಾ ಸ್ಪೂರ್ತಿಯಾಗಿ ಕಾರ್ಯನಿರ್ವಹಿಸಲು ರಾಧಕೃಷ್ಣನ್‍ರವರ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಬೇಕು. ಗುಣಾತ್ಮಕ ಶಿಕ್ಷಣದಿಂದ ಮಾತ್ರ ನಾವು ಮುನ್ನಡೆಗಳಿಸಲು ಸಾಧ್ಯವೆಂದರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರವನ್ನು ಶಿಕ್ಷಕರ ಸಮೂಹದಿಂದ ನಿರೀಕ್ಷಿಸುತ್ತಿದ್ದೇನೆಂದರು.

    ಉಪನ್ಯಾಸ ನೀಡಿದ ಎಚ್‍ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಶಿವಲಿಂಗಪ್ಪ, ಇಂದಿನ ಎಲ್ಲಾ ರೀತಿಯ ಅಭಿವೃದ್ಧಿಗೆ ಪ್ರೇರಣಾ ಶಕ್ತಿಯೇ ಶಿಕ್ಷಣ. ಶಿಕ್ಷಣವನ್ನು ಹೊರತುಪಡಿಸಿ ಯಾವುದೇ ಸಾಧನೆ ಸಾಧ್ಯವಿಲ್ಲವೆಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ನಿವೃತ್ತ ಶಿಕ್ಷಕ ಶಿವಣ್ಣ ಮಾತನಾಡಿದರು.

    ಬಿಆರ್‍ಸಿ ಮಂಜಪ್ಪ, ಅಕ್ಷರದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಮರ್ಥರಾಯ, ರತ್ನಮ್ಮ, ತಿಪ್ಪಮ್ಮ, ಎಪಿಎಂಸಿ ಉಪಾಧ್ಯಕ್ಷ ಸಿ.ಬಿ.ಮೋಹನ್, ನಗರಸಭಾ ಸದಸ್ಯೆ ಆರ್.ಮಂಜುಳಾ, ಆರ್.ಮಾರುತೇಶ್, ಭೀಮಣ್ಣ, ಸಣ್ಣಸೂರಮ್ಮ, ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸಿ.ಟಿ.ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link