ಎಂಜನಿಯರ್‍ಗಳಿಗೆ ನೀರು ನಿರ್ವಹಣೆ ಕುರಿತು ತರಬೇತಿ ಅಗತ್ಯ: ಆರ್‍ಸಿ ಯಾದವ್

ಬಳ್ಳಾರಿ

    ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿರುವ ಎಂಜನಿಯರ್‍ಗಳಿಗೆ ನೀರು ಸರಬರಾಜು ನಿರ್ವಹಣೆ ಬಗ್ಗೆ ಕಿಂಚಿತ್ತು ಜ್ಞಾನವೇ ಇಲ್ಲ; ಮೊದಲು ಇಲ್ಲಿನ ಎಂಜನಿಯರ್‍ಗಳಿಗೆ ಸೂಕ್ತ ತರಬೇತಿ ಕೊಡಿಸುವ ಕೆಲಸ ಮಾಡಿ ಎಂದು ಕೆಕೆಆರ್‍ಡಿಬಿ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಖಡಕ್ ಸೂಚನೆ ನೀಡಿದರು.

    ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಪಾಲಿಕೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನೀರು ಸರಬರಾಜು ನಿರ್ವಹಣೆ ಕುರಿತು ಈ ಪಾಲಿಕೆಯಲ್ಲಿರುವ ಎಂಜನಿಯರ್‍ಗಳಿಗೆ ಸ್ಪಷ್ಟಜ್ಞಾನ ಇರದಿರುವುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ನೋಡಿದರೇ ಗೊತ್ತಾಗುತ್ತದೆ ಎಂದು ಹೇಳಿದ ಅವರು, ನಗರದಲ್ಲಿ ಎಲ್ಲಾದರೂ ಸಮಸ್ಯೆ ಕಂಡುಬಂದ್ರೆ ಅದಕ್ಕೆ ಅಲ್ಪಸ್ವಲ್ಪ ರಿಪೇರಿ ಮಾಡಿ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಾರೆಯೇ ವಿನಃ ಮೂಲ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಕೆಲಸ ಇಲ್ಲಿನ ತಾಂತ್ರಿಕ ಪರಿಣಿತರಾದ ಎಂಜನಿಯರ್‍ಗಳು ಮಾಡುತ್ತಿಲ್ಲ. ಇದರ ಅನುಭವವೇ ಅವರಿಗಿಲ್ಲ. ಆದ ಕಾರಣ ಅವರಿಗೆ ಬೆಂಗಳೂರಿನ ಬಿಬಿಎಂಪಿ, ಕೆಡಬ್ಲ್ಯೂಎಸ್‍ಎಸ್‍ಬಿ ಅಥವಾ ಇನ್ನೀತರೆಡೆ ಪರಿಣಾಮಕಾರಿಯಾದ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಬೇಕಿದ್ದು, ಅದನ್ನು ಕೂಡಲೇ ಮಾಡಿ ಎಂದು ಸೂಚಿಸಿದರು.

     ಇಷ್ಟು ದಿನಗಳ ಕಾಲ ಡಿಸ್ಟ್ರೀಬ್ಯೂಷನ್ ಪಾಯಿಂಟ್‍ಗಳಿಲ್ಲದೇ ಅದ್ಹೇಗೆ ನಗರಕ್ಕೆ ನೀರು ಸರಬರಾಜು ಮಾಡಿದ್ದೀರಿ ಮತ್ತು ಒಳಚರಂಡಿ ವ್ಯವಸ್ಥೆ ಹೇಗೆ ನಿರ್ವಹಣೆ ಮಾಡಿದ್ದೀರಿ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

     ಪಾಲಿಕೆಯು ನಗರದ ವಾರ್ಡ್‍ಗಳಿಗೆ ನೀರು ಸರಬರಾಜು ಮಾಡಿದ ಸಂದರ್ಭದಲ್ಲಿ ನೀರು ಮತ್ತು ಒಳಚರಂಡಿ ನೀರು ಮಿಶ್ರಣವಾಗುತ್ತಿರುವ ಕುರಿತು ಬರುವ ದೂರುಗಳಿಗೆ ಸ್ಪಂದಿಸುವುದರ ಜತೆಗೆ ಶಾಶ್ವತ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೇಳಿದ ಅವರು, ಈಗ ತಾವು ನೀರು ಸರಬರಾಜು ಮಾಡಿದ ಸಂದರ್ಭದಲ್ಲಿ ಜನರು ಮೊದಲು ಒಂದು ಗಂಟೆ ನೀರನ್ನು ತುಂಬದೇ ಹಾಗೆಯೇ ಬಿಡುತ್ತಾರೆ; ಅದರರ್ಥ ಏನಾದರೂ ಮಿಶ್ರಣವಾಗಿದ್ದರೇ ಮೊದಲು ಅದು ಹೋಗಲಿ, ನಂತರ ತುಂಬಿದರಾಯ್ತು ಅಂತ. ಆ ಸಮಸ್ಯೆಯನ್ನು ಪರಿಹರಿಸಿದರೇ ಆ ನೀರು ಕೂಡ ನಾವು ಉಳಿಸಿದಂತಾಗುತ್ತದೆ ಎಂದು ಅವರು ವಿವರಿಸಿದರು.

ಆಸ್ತಿ ತೆರಿಗೆ ಪಾವತಿ ನಿರ್ವಹಣೆಗೆ ಸಾಪ್ಟವೇರ್ ಅಭಿವೃದ್ಧಿ:

     ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನಿರ್ವಹಣೆ ಮಾಡಲು ಮತ್ತು ಹೆಚ್ಚಿನ ಆದಾಯ ಪಾಲಿಕೆಗೆ ಬರುವ ನಿಟ್ಟಿನಲ್ಲಿ ಸಾಪ್ಟವೇರ್ ಅಭಿವೃದ್ಧಿಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರು ಬಿಬಿಎಂಪಿಯಲ್ಲಿ ಎಷ್ಟು ವಾರ್ಡ್‍ಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ ಮತ್ತು ಇದರ ಕುರಿತ ಸ್ಪಂದನೆ ಹೇಗಿದೆ ಎಂಬುದರ ವರದಿ ತರಿಸಿಕೊಂಡು ಮುಂದಡಿ ಹಿಡಿ ಎಂದು ಅವರು ಸಲಹೆ ನೀಡಿದರು.

     ಆ ಸಾಪ್ಟವೇರ್‍ನಲ್ಲಿ ಸರಿಯಾದ ಮಾಹಿತಿ ಅಪ್ಲೋಡ್ ಮಾಡಿ ಮತ್ತು ಅದರ ಕಾಯನಿರ್ವಹಣೆ ಕುರಿತು ಸದಾ ಪರಿಶೀಲಿಸಿ ಹಾಗೂ ಇದರ ನಿರ್ವಹಣೆ ಕುರಿತು ಪಾಲಿಕೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರು ಪಾಲಿಕೆ ಆದಾಯವೃದ್ಧಿಗೆ ಕ್ರಮಕೈಗೊಳ್ಳಿ ಎಂದರು.

    ಕರವಸೂಲಾತಿ ವಿಷಯದಲ್ಲಿ ಮಹಾನಗರ ಪಾಲಿಕೆ ಇನ್ನಷ್ಟು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ನೀರು ಸರಬರಾಜು ಮತ್ತು ಒಳಚರಂಡಿ ವಿಷಯದಲ್ಲಿ ಸಮಸ್ಯೆಯಿರುವ ಏರಿಯಾಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಕುರಿತ ಸಲಹೆಗಳನ್ನು ನೀಡಿ ಎಂದರು.

ಪಿಪಿಪಿ ಅಡಿ ಎರಡು ಬಸ್ ತಂಗುದಾಣ ನಿರ್ಮಾಣ:

    ಬಳ್ಳಾರಿಯ ದುರ್ಗಮ್ಮ ದೇವಸ್ಥಾನದ ಬಳಿ ಹಾಗೂ ಸುಧಾ ಸರ್ಕಲ್ ಬಳಿ ಖಾಸಗಿ ಸಹಭಾಗಿತ್ವದ ಅಡಿ ಎರಡು ಬಸ್ ತಂಗುದಾಣಗಳನ್ನು ಜಾಹೀರಾತು ಪ್ರದರ್ಶಿಸುವ ಷರತ್ತಿನೊಂದಿಗೆ ಅನುಮೋದನೆ ನೀಡುವ ಮತ್ತು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ತುಷಾರಮಣಿ ಹೇಳಿದರು.

    ಇದನ್ನು ಟೆಂಡರ್ ಕರೆದು ನಿಯಮಾನುಸಾರ ಕ್ರಮಕೈಗೊಳ್ಳಿ ಎಂದು ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರು ಸೂಚಿಸಿದರು.ಘನತ್ಯಾಜ್ಯ ವಿಲೇವಾರಿ, ಕರ ವಸೂಲಿ, ಯುಜಿಡಿ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.

     ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಪಾಲಿಕೆ ಆಯುಕ್ತೆ ತುಷಾರಮಣಿ ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link