ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್
ತುಮಕೂರು ನಗರದ ನಾಗರಿಕರಿಗೆ ಕುಡಿಯಲು ಹೇಮಾವತಿ ನೀರು ಪೂರೈಸುವ ಏಕೈಕ ತಾಣವೆನಿಸಿರುವ ಬುಗುಡನಹಳ್ಳಿಯ `ಹೇಮಾವತಿ ಜಲಸಂಗ್ರಹಾಗಾರ’ದ ಏರಿಯು ಅಪಾಯದ ಅಂಚಿನಲ್ಲಿದೆಯೆಂಬುದು ಖಚಿತವಾಗಿದ್ದರೂ, ಏರಿಯನ್ನು ದುರಸ್ತಿಗೊಳಿಸುವ ವಿಷಯದಲ್ಲಿ `ನಿರಾಸಕ್ತಿ’ ತಾಳಿ, ಕೇವಲ ಜಲಸಂಗ್ರಹಾಗಾರದ ಅಂಗಳದಲ್ಲಿ 56 ಕೋಟಿ ರೂ. ಅಂದಾಜುವೆಚ್ಚದಲ್ಲಿ ಹೂಳೆತ್ತಬೇಕೆಂಬ ವಿಷಯದಲ್ಲಿ ಮಾತ್ರ `ಆಸಕ್ತಿ’ ವ್ಯಕ್ತವಾಗುತ್ತಿದೆಯೆಂಬ ಗಂಭೀರ ಸಂಗತಿಯೊಂದು ಬೆಳಕಿಗೆ ಬಂದಿದೆ.
ಈ ಜಲಸಂಗ್ರಹಾಗಾರದ ನಿರ್ವಹಣೆಯ ಹೊಣೆ ಹೊತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಇತ್ತೀಚೆಗೆ ತುಮಕೂರು ಮಹಾನಗರ ಪಾಲಿಕೆಯು ಬರೆದಿರುವ ಪತ್ರವೊಂದರಲ್ಲಿ ಚರ್ಚಾರ್ಹವಾದ ಹಾಗೂ ಗಂಭೀರವೆನಿಸಿರುವ ಈ ಸಂಗತಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಅವಶ್ಯಕ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳದೆ ಕೇವಲ ಕೆರೆಯಲ್ಲಿ ಹೂಳು ತೆಗೆಯುವುದು ಅವೈಜ್ಞಾನಿಕ ಕ್ರಮವಾಗಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕೆರೆಯ ಏರಿ ಒಡೆದು ಭಾರಿ ಅನಾಹುತವಾಗುವ ಸಂಭವನೀಯತೆ ಇರುತ್ತದೆ” ಎಂಬ ಅಪಾಯದ ಮುನ್ಸೂಚನೆಯನ್ನು ಪಾಲಿಕೆಯ ಆಯುಕ್ತ ಟಿ.ಭೂಪಾಲನ್ ಅವರು ಮಂಡಲಿಯ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಬರೆದಿರುವ ಪತ್ರ (ಸಂಖ್ಯೆ: ತುಮಪಾ/ನೀಸಶಾ/ಸಿಆರ್/131/2018-19, ದಿನಾಂಕ 23-01-2019)ದಲ್ಲಿ ಪ್ರಸ್ತಾಪಿಸಿದ್ದು, ಈ ವಿಷಯವು ಪ್ರಸ್ತುತ ಜಲಸಂಗ್ರಹಾಗಾರದ ನೈಜ ಪರಿಸ್ಥಿತಿಯತ್ತ ಬೆಳಕು ಚೆಲ್ಲಿದೆ.
2019 ರ ಜನವರಿ 23 ರಂದೇ ಪಾಲಿಕೆಯು ಇಂಥದ್ದೊಂದು ಪತ್ರವನ್ನು ಬರೆದಿದ್ದರೂ, ಮಂಡಲಿಯು ಮಾರ್ಚ್ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಸಹ ಇದರತ್ತ ತಲೆಕೆಡಿಸಿಕೊಂಡಿಲ್ಲವೆಂಬುದು ಹುಬ್ಬೇರಿಸುವಂತೆ ಮಾಡುತ್ತಿದೆ.
56 ಕೋಟಿ ರೂ. ಯೋಜನೆ
2031 ನೇ ಇಸವಿಯಲ್ಲಿ ತುಮಕೂರು ನಗರದಲ್ಲಿ ಆಗಬಹುದಾದ ಜನಸಂಖ್ಯೆಯನ್ನು ಊಹಿಸಿಕೊಂಡು ಪ್ರಸ್ತುತ ಈ ಜಲಸಂಗ್ರಹಾಗಾರದಲ್ಲಿ 39.61 ಲಕ್ಷ ಘನ ಅಡಿಗಳಷ್ಟು ಪ್ರಮಾಣದಲ್ಲಿ ಹೂಳು ತೆಗೆಯಲು ಯೋಜಿಸಲಾಗಿದೆ. 56 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಇದಾಗಿದೆ.
ಮಂಡಲಿಯು ಇದರ ಹೊಣೆ ಹೊತ್ತಿದೆ. ಇಲ್ಲಿ ತೆಗೆದ ಮಣ್ಣನ್ನು ಹೊರಗೆ ಸಾಗಿಸಿ, ಸರ್ಕಾರಿ ಖಾಲಿ ಜಾಗ ಹಾಗೂ ಹಳ್ಳ-ಕೊಳ್ಳಗಳಲ್ಲಿ ತುಂಬಿಸಬೇಕಾಗುತ್ತದೆ. ಹೂಳು ತೆಗೆಯುವ ಕಾಮಗಾರಿಯ ಗುತ್ತಿಗೆಯನ್ನೂ ಈಗಾಗಲೇ ನೀಡಲಾಗಿದೆ. ಈ ಮಣ್ಣನ್ನು ತುಂಬಲು ಇರುವ ಸ್ಥಳಗಳ ಬಗ್ಗೆ ತಿಳಿಸುವಂತೆ ಮಂಡಲಿಯು ಪತ್ರಗಳ ಮುಖೇನ ಪಾಲಿಕೆಯನ್ನು ಕೋರಿಕೊಂಡಿದೆ.
ಮಂಡಲಿಯ ಪತ್ರದಲ್ಲಿ ಹೂಳು ತೆಗೆಯುವ ವಿಷಯ ಇದೆಯೇ ವಿನಃ, ಜಲಸಂಗ್ರಹಾಗಾರದ ಏರಿಯ ದುರಸ್ತಿಯ ಪ್ರಸ್ತಾಪವೇ ಇಲ್ಲ. ಈ ಸಂಗತಿಯನ್ನೇ ನೆನಪಿಸುತ್ತ ಪಾಲಿಕೆಯು ಮಂಡಲಿಗೆ ಪತ್ರ ಬರೆದಿದ್ದು, ಈ ವಿಷಯವು ಬಹಿರಂಗ ಚರ್ಚೆಗೆ ಎಡೆಮಾಡಿಕೊಡುವಂತಿದೆ.
ಕೆರೆಯ ನಿರ್ವಹಣೆಯನ್ನು ಮಂಡಲಿಯು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿರುವುದಾಗಿ ಹೇಳಿರುವುದಕ್ಕೂ ಪಾಲಿಕೆಯು ಬಲವಾಗಿ ಆಕ್ಷೇಪಿಸಿದೆ.
ಮಂಡಲಿಯು ಈ ರೀತಿ ಏಕಪಕ್ಷೀಯವಾಗಿ ಹೇಳುವುದು ಜವಾಬ್ದಾರಿಯಿಂದ ಹಿಂದೆ ಸರಿಯುವಂತಾಗುತ್ತದೆ ಹಾಗೂ ಸರ್ಕಾರಿ ಇಲಾಖೆಗಳ ನಡುವೆ ಉಚಿತಯೋಗ್ಯ ನಡವಳಿಕೆಗಳಾಗುವುದಿಲ್ಲ ಎಂದು ಪಾಲಿಕೆಯು ಸದರಿ ಪತ್ರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದೆಯೆಂಬುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಮಳೆ ಹಾಗೂ ಗಾಳಿಯಿಂದ ಮಣ್ಣಿನ ಸವೆತ ಉಂಟಾದ ಪರಿಣಾಮ ಕೆರೆಯ ಮುಖ್ಯ ಏರಿಯ ಮೇಲ್ಭಾಗದ ಅಗಲವು 4 ಮೀಟರ್‍ಗಳಿಂದ ಕೇವಲ 1.5 ಮೀಟರ್‍ಗಳಷ್ಟು ಅಗಲಕ್ಕೆ ಕುಸಿದಿದೆ. ಕೆಲವೆಡೆ ರಿವೀಟ್‍ಮೆಂಟ್ ಕುಸಿದಿದೆ. ಜಲಸಂಗ್ರಹಾಗಾರದ ಮುಖ್ಯ ಏರಿ ಮತ್ತು ಸುತ್ತಲಿನ ಏರಿಯ ಸುತ್ತಲೂ 10-15 ವರ್ಷಗಳಷ್ಟು ಹಳೆಯದಾದ ಮರಗಳು ಮತ್ತು ಗಿಡಗಳು ತುಂಬಿವೆ ಎಂದು ಪಾಲಿಕೆಯು ಪ್ರಸ್ತಾಪಿಸಿದ್ದು, ಇದು ಈ ಜಲಸಂಗ್ರಹಾಗಾರವು ಅಪಾಯದಂಚಿನಲ್ಲಿರುವುದನ್ನು ಸ್ಪಷ್ಟಪಡಿಸಿದೆ.
ಕೆರೆಯ ಏರಿ ಬಲಪಡಿಸಿ
ಇವೆಲ್ಲದರ ಹಿನ್ನೆಲೆಯಲ್ಲಿ ಜಲಸಂಗ್ರಹಾಗಾರದ ಹೂಳು ತೆಗೆಯುವ ಮೊದಲು ಜಲಸಂಗ್ರಹಾಗಾರದ ಮುಖ್ಯ ಏರಿ (ಮೈನ್ ಬಂಡ್) ಹಾಗೂ ಇದಕ್ಕೆ ಹೊಂದಿಕೊಂಡ ಸುತ್ತಲಿನ ಏರಿ (ಕಾಂಟೂರ್ ಬಂಡ್)ಯನ್ನು ಸಂಪೂರ್ಣವಾಗಿ ತಾಂತ್ರಿಕವಾಗಿ ಬಲಪಡಿಸಬೇಕು ಎಂದು ಪಾಲಿಕೆಯು ಆಗ್ರಹಿಸಿದೆ.
ಜೊತೆಗೆ ಕೆರೆಯಲ್ಲಿ ರಿವೀಟ್‍ಮೆಂಟ್ ವ್ಯವಸ್ಥಿತವಾಗಿ ಮರುಜೋಡಣೆಗೊಳ್ಳಬೇಕು ಎಂದೂ ಸೂಚಿಸಿದೆ.ಜಲಸಂಗ್ರಹಾಗಾರದ ಏರಿಯ ಮೇಲ್ಭಾಗವನ್ನು ಕನಿಷ್ಟ 4.5 ಮೀಟರ್‍ಗಳಿಂದ 5 ಮೀಟರ್‍ಗಳಷ್ಟು ಅಗಲಗೊಳಿಸಬೇಕು. ಏರಿಯ ಪರಿವೀಕ್ಷಣೆ ಮಾಡಲು ಮತ್ತು ಏರಿಯ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಏರಿಯ ಮೇಲೆ ವಾಹನ ಓಡಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಮುಖ್ಯ ಏರಿ ಮತ್ತು ಸುತ್ತಲಿನ ಏರಿಯಲ್ಲಿ ವ್ಯಾಪಿಸಿರುವ ಮುಳ್ಳುಪೊದೆಗಳನ್ನು ತೆರವುಗೊಳಿಸಿ, ಮುಖ್ಯಏರಿಗೆ ಹುಲ್ಲುಹಾಸನ್ನು ಹೊದಿಸಬೇಕು ಎಂದು ಪಾಲಿಕೆಯು ಸ್ಪಷ್ಟ ಸೂಚನೆಗಳನ್ನು ಮುಂದಿಡುತ್ತ, ಹೂಳು ತೆಗೆಯುವುದಕ್ಕಿಂತ ಮೊದಲು ಮಂಡಲಿ ವತಿಯಿಂದ ಇವೆಲ್ಲ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ವಿಸ್ತೃತ ವರದಿ ಸಲ್ಲಿಸಿ
ಈ ವಿಷಯವಾಗಿ ಸಿದ್ಧಪಡಿಸಲಾಗಿರುವ `ವಿಸ್ತೃತ ಯೋಜನಾ ವರದಿ’ (ಡಿ.ಪಿ.ಆರ್.)ಯನ್ನು ಹಾಗೂ ಈ ಬಗೆಗಿನ ತಾಂತ್ರಿಕ ಉಪಕ್ರಮ ಕುರಿತಾದ ಯೋಜನಾ ವರದಿಯನ್ನು ಪಾಲಿಕೆಗೆ ಸಲ್ಲಿಸುವಂತೆ ಮಂಡಲಿಗೆ ಆಯುಕ್ತರು ಸೂಚಿಸಿದ್ದರೂ, ಮಾರ್ಚ್ ತಿಂಗಳು ಕೊನೆಗೊಳ್ಳುತ್ತಿದ್ದರೂ ಮಂಡಲಿಯು ಇನ್ನೂ ಸಹ ಇದನ್ನು ಸಲ್ಲಿಸುವ ಗೊಡವೆಗೇ ಹೋಗಿಲ್ಲವೆಂಬುದು ಅಚ್ಚರಿದಾಯಕವಾಗಿದೆ.
ಸಭೆಯಲ್ಲಿ ಚರ್ಚಿಸಿದ ಬಳಿಕ
ಹೂಳು ತೆಗೆಯಲು ಅನುಮತಿ
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಅಲ್ಲಿ ಕೈಗೊಳ್ಳುವ ತೀರ್ಮಾನ ಆಧರಿಸಿ ಬಳಿಕ ಜಲಸಂಗ್ರಹಾಗಾರದಲ್ಲಿ ಹೂಳು ತೆಗೆಯಲು ಅನುಮತಿ ನೀಡಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನೂ ಪಾಲಿಕೆ ಆಯುಕ್ತರು ಮಂಡಲಿಗೆ ಈ ಪತ್ರದಲ್ಲಿ ರವಾನಿಸಿದ್ದಾರೆ.
ಮಹಾನಗರ ಪಾಲಿಕೆಯು ಡಿ.ಪಿ.ಆರ್. ಕೇಳುತ್ತಿದೆ. ಆದರೆ ಅದನ್ನು ನೀಡಲು ಮಂಡಲಿ ಹಿಂಜರಿಯುತ್ತಿದೆ. ಜಲಸಂಗ್ರಹಾಗಾರದ ಏರಿಯನ್ನು ಹಾಗೂ ರಿವೀಟ್‍ಮೆಂಟನ್ನು ಬಲಗೊಳಿಸುವಂತೆ ಪಾಲಿಕೆಯು ಕೇಳುತ್ತಿದೆ. ಆದರೆ ಮಂಡಲಿಯು ಆ ಬಗ್ಗೆ ಮೌನವಾಗುತ್ತಿದೆ. ಇದನ್ನು ಬಿಟ್ಟು ಮಂಡಲಿಯು ಕೆರೆಯ ಹೂಳನ್ನು ತೆಗೆದರೆ ಆ ಮಣ್ಣನ್ನು ಎಲ್ಲಿಗೆ ಹಾಕಬೇಕೆಂದು ಮಾತ್ರ ಕೇಳುತ್ತಿದೆ! ಒಟ್ಟು 56 ಕೋಟಿ ರೂ. ಅಂದಾಜಿನ ಈ ಯೋಜನೆಯಲ್ಲಿ ಕೇವಲ ಹೂಳನ್ನು ಮಾತ್ರ ತೆಗೆಯುವ ಬದಲು, ಅದರ ಜೊತೆಯಲ್ಲೇ ಏರಿಯನ್ನು ಅಭಿವೃದ್ಧಿಪಡಿಸಬೇಕೆಂಬ ಪಾಲಿಕೆಯ ಬೇಡಿಕೆಯು ಗಾಳಿಯಲ್ಲಿ ತೇಲಿ ಹೋಗುತ್ತಿದೆ! ಇದೇ ಈಗ ಊಹಾಪೋಹಗಳಿಗೆ ಎಡೆ ಮಾಡಿಕೊಡುತ್ತಿರುವ ಸಂಗತಿ.
2031 ನೇ ಇಸವಿಯಲ್ಲಿ ತುಮಕೂರು ನಗರದಲ್ಲಿ ಆಗಬಹುದಾದ ಜನಸಂಖ್ಯೆಯನ್ನು ಊಹಿಸಿಕೊಂಡು ಪ್ರಸ್ತುತ ಈ ಜಲಸಂಗ್ರಹಾಗಾರದಲ್ಲಿ 39.61 ಲಕ್ಷ ಘನ ಅಡಿಗಳಷ್ಟು ಪ್ರಮಾಣದಲ್ಲಿ ಹೂಳು ತೆಗೆಯಲು ಯೋಜಿಸಲಾಗಿದೆ. 56 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಇದಾಗಿದೆ.
`ಅವಶ್ಯಕ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳದೆ ಕೇವಲ ಕೆರೆಯಲ್ಲಿ ಹೂಳು ತೆಗೆಯುವುದು ಅವೈಜ್ಞಾನಿಕ ಕ್ರಮವಾಗಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕೆರೆಯ ಏರಿ ಒಡೆದು ಭಾರಿ ಅನಾಹುತವಾಗುವ ಸಂಭವನೀಯತೆ ಇರುತ್ತದೆ’.
ಮಳೆ ಹಾಗೂ ಗಾಳಿಯಿಂದ ಮಣ್ಣಿನ ಸವೆತ ಉಂಟಾದ ಪರಿಣಾಮ ಕೆರೆಯ ಮುಖ್ಯ ಏರಿಯ ಮೇಲ್ಭಾಗದ ಅಗಲವು 4 ಮೀಟರ್‍ಗಳಿಂದ ಕೇವಲ 1.5 ಮೀಟರ್‍ಗಳಷ್ಟು ಅಗಲಕ್ಕೆ ಕುಸಿದಿದೆ. ಕೆಲವೆಡೆ ರಿವೀಟ್‍ಮೆಂಟ್ ಕುಸಿದಿದೆ. ಜಲಸಂಗ್ರಹಾಗಾರದ ಮುಖ್ಯ ಏರಿ ಮತ್ತು ಸುತ್ತಲಿನ ಏರಿಯ ಸುತ್ತಲೂ 10-15 ವರ್ಷಗಳಷ್ಟು ಹಳೆಯದಾದ ಮರಗಳು ಮತ್ತು ಗಿಡಗಳು ತುಂಬಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








