ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು :ಡಿಸಿ

ತುಮಕೂರು
       ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಅಲೆಮಾರಿ ಜನರ ಕ್ಯಾಂಪ್‍ಗಳಲ್ಲಿರುವ ಜನರಿಗೆ ಆಹಾರ, ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದ್ದು, ಇವರ ನಿಗಾವಣೆಗಾಗಿ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಸೂಚಿಸಿದ್ದಾರೆ. 
      ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಅತ್ಯಗತ್ಯ ಸೇವೆಗಳ ಇಲಾಖೆಗಳ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ತಾಲ್ಲೂಕಿಗೆ ಕನಿಷ್ಠ 2 ರಿಂದ ಗರಿಷ್ಠ 5 ರವರೆಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದ್ದು, ಈ ಅಧಿಕಾರಿಗಳು ಕಛೇರಿಯಲ್ಲಿ ಕೂತು ಕೆಲಸ ಮಾಡುವ ಬದಲು ಪ್ರತಿ ತಾಲ್ಲೂಕುಗಳಿಗೆ ಪ್ರತಿ ದಿನ ಭೇಟಿ ನೀಡಿ ಜಿಲ್ಲೆಯಲ್ಲಿ ಸರ್ಕಾರದಿಂದ ಕೂಲಿ ಕಾರ್ಮಿಕರಿಗೆ ಮಾಡಲಾಗಿರುವ ವಸತಿ ಕೇಂದ್ರಗಳಿಗೆ, ಗುತ್ತಿಗೆದಾರರು ಹಾಗೂ ಮಾಲೀಕರು ಮಾಡಿರುವ ವಸತಿ ಕೇಂದ್ರಗಳಿಗೆ ಮತ್ತು ಅಲೆಮಾರಿ ಕ್ಯಾಂಪ್‍ಗಳಲ್ಲಿ ವಸತಿ, ಊಟ, ವೈದ್ಯಕೀಯ ನೆರವು ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಛಾಯಾಚಿತ್ರದೊಂದಿಗೆ ವರದಿಯನ್ನು ಜಿಲ್ಲಾಡಳಿತಕ್ಕೆ ಪ್ರತಿ ದಿನ ನೀಡುವಂತೆ ಅವರು ತಾಕೀತು ಮಾಡಿದರು. 
     ಈವರೆವಿಗೂ ಜಿಲ್ಲಾಡಳಿತದಿಂದ, ಖಾಸಗಿಯವರಿಂದ ಕೂಲಿಕಾರ್ಮಿಕರಿಗೆ ನೀಡುತ್ತಿರುವ ಸೌಕರ್ಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಚಾಚು ತಪ್ಪದೆ ನೋಡಲ್ ಅಧಿಕಾರಿಗಳು ನೀಡಬೇಕಾಗಿದೆ. ಇದು ತುರ್ತು ಮತ್ತು ಅನಿವಾರ್ಯವಾಗಿರುವುದರಿಂದ ಇಂದಿನಿಂದಲೇ ನಿಯೋಜಿತ ಅಧಿಕಾರಿಗಳು ನಿಗಧಿತ ತಾಲ್ಲೂಕುಗಳಿಗೆ ಭೇಟಿ ನೀಡುವ ಕಾರ್ಯ ಮಾಡಬೇಕೆಂದು ಅವರು ಸೂಚನೆ ನೀಡಿದರು. 
     ಕೋವಿಡ್-19 ತಡೆಗಟ್ಟುವುದರ ಜೊತೆಗೆ ಬೇರೆ ಜಿಲ್ಲೆ, ರಾಜ್ಯಗಳಿಂದ ಕೂಲಿಗಾಗಿ ಬಂದಿರುವ ಕಾರ್ಮಿಕರ ಯೋಗಕ್ಷೇಮವನ್ನೂ ನೋಡಿಕೊಳ್ಳುವುದು ಎಲ್ಲಾ ಅಧಿಕಾರಿಗಳ ಆಧ್ಯ ಕರ್ತವ್ಯವಾಗಿದೆ. ಇದಕ್ಕೆ ಸನ್ನದ್ಧರಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಜೊತೆಗೆ ಸ್ವರಕ್ಷಣೆಯ ಬಗ್ಗೆಯೂ ಸಹ ಗಮನ ಹರಿಸಬೇಕಾಗಿದೆ ಎಂದು ಅವರು ಸೂಚನೆ ನೀಡಿದರು. 
      ವಸತಿ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿ ಮಹಿಳೆಯರು, ವಯೋವೃದ್ಧರು ಇರುವುದರಿಂದ ಅವರಿಗೆ ಊಟ, ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಿ ಅಗತ್ಯವಿದ್ದವರಿಗೆ ಔಷಧೋಪಚಾರ ನೀಡುವುದರ ಜೊತೆಗೆ ಅವರು ತಂಗಿರುವ ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಸ್ನಾನಗೃಹ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆಯ ಬಗ್ಗೆಯೂ ಸಹ ಖಚಿತಪಡಿಸಿಕೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
      ಜಿಲ್ಲೆಯಿಂದ ಈವರೆಗೆ 953 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದ್ದು, ಗುತ್ತಿಗೆದಾರರು ಮತ್ತು ಮಾಲೀಕರುಗಳ ಹತ್ತಿರ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ 3377 ರಷ್ಟಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 
       ಯಾವುದೇ ಸೌಕರ್ಯಗಳನ್ನು ನೀಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಆದ್ಯ ಗಮನ ಹರಿಸಬೇಕು. ಹಾಗೂ ಕೋವಿಡ್-19 ತಡೆಗಟ್ಟಲು ಮುಂಜಾಗ್ರತೆವಹಿಸಬೇಕು.  ಜಿಲ್ಲೆಯ ಅಧಿಕಾರಿಗಳು ಕೊರೋನಾ ವೈರಸ್ ಹರಡುವಿಕೆಯನ್ನು ಸರಿಯಾಗಿ ತಡೆಗಟ್ಟದಿದ್ದರೆ ಅದು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.ಹಣ್ಣು, ತರಕಾರಿ, ಕೃಷಿ ಉತ್ಪನ್ನ, ಅಗತ್ಯ ದಿನಸಿ ಮತ್ತು ಅತ್ಯಗತ್ಯ ಸಲಕರಣೆಗಳ ಸಾಗಾಣಿಕೆಗೆ ಯಾವುದೇ ಅಡೆ ತಡೆ ಹಾಕದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. 
 
       ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಿಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link