ತುರುವೇಕೆರೆ
ತಾಲ್ಲೂಕಿನ ಕೆ. ಹೊಸಹಳ್ಳಿಯಲ್ಲಿ ಕುರಿಗಳಿಗೆ ನೀಲಿ ನಾಲಗೆ ರೋಗ (ಬ್ಲೂಟನ್) ಹಾಗೂ ಪಿಪಿಆರ್ ರೋಗದಿಂದ ರೈತರ ಎಂಟು 8 ಕುರಿಗಳು ಸಾವನ್ನಪ್ಪಿದ್ದು ಪಶು ಇಲಾಖಾಧಿಕಾರಿಗಳು ಮಾತ್ರ ಯಾವುದೇ ಹತೋಟಿ ಕ್ರಮ ಕೈಗೊಳ್ಳದೆ ನಮ್ಮಲ್ಲಿ ಔಷಧಿ ಇಲ್ಲ ಎಂಬ ದಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ತಾಲ್ಲೂಕಿನಾದ್ಯಂತ ಕುರಿಗಳಿಗೆ ನೀಲಿ ನಾಲಗೆ ರೋಗ (ಬ್ಲೂಟನ್) ಹಾಗೂ ಪಿಪಿಆರ್ ರೋಗ ವ್ಯಾಪಕವಾಗಿ ಹರಡಿದ್ದು ಕುರಿಗಾಯಿ ರೈತರಿಗೆ ಆತಂಕ ಮಾಡಿದೆ. ತಾಲ್ಲೂಕಿನಲ್ಲಿ ರೈತರು ಸುಮಾರು 54000 ಕುರಿ ಸಾಕಾಣೆ ಮಾಡುತ್ತಿದ್ದು ಇತ್ತೀಚಿಗೆ ಕುರಿಗಳಿಗೆ ನೀಲಿ ನಾಲಗೆ ರೋಗ ಹಾಗೂ ಪಿಪಿಆರ್ ರೋಗ ಉಲ್ಬಣಗೊಂಡು ಹಲವಾರು ಕುರಿಗಳು ಸಾವನ್ನಪ್ಪಿವೆ. ಈಗಾಗಲೇ ತಾಲ್ಲೂಕಿನ ಕೆ. ಹೊಸಹಳ್ಳಿ ರೈತ ಮಂಜು ಎಂಬುವರ 5 ಕುರಿ ಹಾಗೂ ರಮೇಶ್ ಎಂಬುವರ 3 ಕುರಿಗಳು ಸಾವನ್ನಪ್ಪಿದ್ದರೂ ಪಶು ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಹತೋಟಿ ಕ್ರಮ ಕೈಗೊಳ್ಳದೆ ನಮ್ಮಲ್ಲಿ ಔಷದಿ ಇಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕುರಿಗಳಲ್ಲಿ ಈ ರೋಗ ಕಾಣಿಸಿಕೊಂಡಾಗ ಬಾಯಿ ದಪ್ಪವಾಗುವುದು, ಮೂಗಿನಲ್ಲಿ ಗೊಣ್ಣೆ ಸರಿಸುತ್ತದೆ, ಬಾಯಿಗಳಲ್ಲಿ ಹುಣ್ಣುಗಳಾಗಿ, ಜ್ವರ ಭಾದಿಸಿ ಮೇವು ತಿನ್ನುವುದಿಲ್ಲ. ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾತ್ರ ಕುರಿಗಳು ಗುಣಮುಖವಾಗುತ್ತದೆ, ಇಲ್ಲದಿದ್ದರೆ ಕೂಡಲೇ ಸಾವನ್ನಪ್ಪಲಿವೆ. ಪಶು ಇಲಾಖೆಗಳ ಮೂಲಕ ಈ ರೋಗ ಹತೋಟಿಗಾಗಿ ಸರ್ಕಾರ ಚುಚ್ಚು ಮದ್ದು ಕಾರ್ಯಕ್ರಮ ಕೈಗೊಳ್ಳುತ್ತಿದೆ. ಆದರೆ ಪಶು ಇಲಾಖೆ ತಾಲ್ಲೂಕಿನಲ್ಲಿ ಮೇ ಮತ್ತು ನವಂಬರ್ ತಿಂಗಳಲ್ಲಿ ಕುರಿ ಸಾಕಾಣೆ ಗ್ರಾಮಗಳಿಗೆ ಭೇಟಿ ನೀಡಿ ಚುಚ್ಚುಮದ್ದು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ಆದರೆ ಇಂತಹ ಯಾವುದೇ ಚುಚ್ಚು ಮದ್ದು ಕಾರ್ಯಕ್ರಮ ನಡೆಸುವಲ್ಲಿ ಇಲಾಖೆ ವಿಫಲವಾಗಿದೆ ಎಂದು ದೂರಿದ್ದಾರೆ. ಪಶು ಇಲಾಖೆಯಲ್ಲಿ ಔಷಧಿ ದೊರಕದ ಕಾರಣ ರೈತರು ಖಾಸಗಿ ಮೆಡಿಕಲ್ ಶಾಪ್‍ಗಳಲ್ಲಿ ಸಾವಿರಾರು ಖರ್ಚು ಮಾಡಿ ಔಷಧಿ ಖರೀದಿ ಮಾಡಿಕೊಂಡು ಕುರಿಗಳನ್ನು ಉಳಿಸಿಕೊಳ್ಳುವಂತಾಗಿದೆ. ಕೂಡಲೇ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಔಷಧಿ ನೀಡಿ ರೋಗ ಹತೋಟಿ ಮಾಡಬೇಕಿದೆ ಎಂಬುದು ರೈತರ ಆಗ್ರಹ.
ತಾಲ್ಲೂಕಿನಾದ್ಯಂತ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ರೀತಿಯಲ್ಲಿ ಕುರಿಗಳಿಗೆ ಪಿಪಿಆರ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನೀಲಿ ನಾಲಗೆ ರೋಗ ಹಾಗೂ ಪಿಪಿಆರ್ ರೋಗಗಳ ಬಗ್ಗೆ ಜನರಲ್ಲಿ ಕೆಲವರು ಗೊಂದಲ ಮಾಡುತ್ತಿದ್ದಾರೆ. ಈ ಎರಡು ರೋಗಗಳ ಬಗ್ಗೆ ಶಿರಾ ಲ್ಯಾಬ್‍ಗೆ ಕಳಿಸಿದ್ದು ಯಾವ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆ ರೋಗಕ್ಕೆ ಲಸಿಕಾ ಕಾರ್ಯಕ್ರಮ ಕೈಗೊಳ್ಳಲಾಗುವುದು.
ಬ್ಲೂಟನ್ ರೋಗಕ್ಕೆ ಔಷಧಿಯನ್ನು ರೈತರು ಖಾಸಗಿಯಾಗಿ ಖರೀದಿ ಮಾಡುತ್ತಿದ್ದಾರೆ. ಈ ರೋಗಕ್ಕೆ ಸರ್ಕಾರ ಈಗ ಪ್ರಾಯೋಗಿಕವಾಗಿ 9 ಸಾವಿರ ಲಸಿಕೆ ನೀಡಲಾಗಿದೆ. ನಂತರ ಇನ್ನುಳಿದ ಕುರಿಗಳಿಗೂ ನೀಡಲಾಗುವುದು. ಸದ್ಯ ಯಾವ ಭಾಗದಲ್ಲಿ ಕಾಣಿಸಿಕೊಂಡಿದೆ ಅಲ್ಲಿ ಪ್ರಾರಂಭಿಸಲಾಗುವುದು ಎಂದು ಪಶು ಇಲಾಖಾ ಸಹಾಯಕ ನಿರ್ದೇಶಕ ಸದಾಶಿವಯ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
