ನಲವಾರ
ಸಮಾಜಕಲ್ಯಾಣ ಇಲಾಖೆ ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರವಲ್ಲದೇ ಎಲ್ಲ ಜಾತಿಯ ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಸದುದ್ದೇಶ ಹೊಂದಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ 500 ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ‘ ಸಂಯುಕ್ತ ವಸತಿ ನಿಲಯ’ ಹೆಸರಿನಲ್ಲಿ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ನಾಲವಾರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು 72 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು. ನಮ್ಮ ವಿರುದ್ದ ಯಾರು ಏನು ಬೇಕಾದರೂ ಮಾತನಾಡಲಿ. ಆ ಬಗ್ಗೆ ನಾವು ಜಾಸ್ತಿ ಯೋಚಿಸುವುದಿಲ್ಲ. ಜನರ ಕೆಲಸ ಮಾಡುವುದರಲ್ಲಿ ನಾವು ಮುಂದುವರೆಯುತ್ತೇವೆ. ಅದಕ್ಕೆ ಕಾರಣ ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸ ಹಾಗೂ ಬಸವಣ್ಣನವರ ತತ್ವದ ಮೇಲೆ ನಮಗಿರುವ ನಂಬಿಕೆ ನಿಮ್ಮ ಪರ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಬಿಜೆಪಿಯವರು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಜನರ ಪರ, ರೈತರ ಪರ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ನಮ್ಮನ್ನು ಟೀಕೆ ಮಾಡುತ್ತಾರೆ. ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತುಟಿ ಬಿಚ್ಚದ ರಾಜ್ಯ ಬಿಜೆಪಿ ನಾಯಕರು ನಮ್ಮ ಸರಕಾರವನ್ನು ಯಾವ ನೈತಿಕತೆಯಿಂದ ಟೀಕೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಒಂದು ಕಡೆ ಆಪರೇಷನ್ ಕಮಲ ಮಾಡುವ ಬಿಜೆಪಿ ನಾಯಕರು ಸಾಫ್ ನಿಯತ್ ಸಹೀ ವಿಕಾಸ್ ಬಗ್ಗೆ ಮಾತನಾಡ್ತಾರೆ. ‘ಹಣದ ಆಮಿಷ ತೋರಿಸಿ ಚಿಂಚೋಳಿ ಶಾಸಕರನ್ನು ಖರೀದಿ ಮಾಡಿಬಿಟ್ಟಿದ್ದಾರೆ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ’ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಬಂದು ಬೆಂಗಳೂರು, ಹುಬ್ಬಳ್ಳಿ ಹಾಗೂ ರಾಯಚೂರಿನ ಕೆಲಸಗಳನ್ನು ಇಲ್ಲಿ ಉದ್ಘಾಟನೆ ಮಾಡಿದ್ದಾರೆ. ಅವರು ಖರ್ಗೆ ಅವರ ಹಾಗೂ ನನ್ನ ಮೇಲೆ ಟೀಕೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ ನಮ್ಮ ಯಾವ ವಿಷಯಗಳು ಅವರಿಗೆ ಸಿಗದೆ ಸುಮ್ಮನೆ ಭಾಷಣ ಮಾಡಿ ಹೋಗಿದ್ದಾರೆ. ಯಡಿಯೂರಪ್ಪ ಹಾಗೂ ಜಾಧವ್ ಅವರನ್ನು ವೇದಿಕೆಯ ಮೇಲೆ ಕನಿಷ್ಠ ಸೌಜನ್ಯಕ್ಕೂ ಕರೆದು ಜನರಿಗೆ ಅವರ ಕುರಿತು ಮಾತನಾಡದೆ, ಈ ರಾಜ್ಯದ ಎರಡು ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕುಟುಕಿದರು.
ಕೇಂದ್ರದ ಒಂದಾದರೂ ಯೋಜನೆ ರಾಜ್ಯ ಸರಕಾರಕ್ಕೆ ಬಂದಿದೆಯಾ ಎಂದು ಪ್ರಶ್ನಿಸಿದ ಸಚಿವರು, ಮೇಕ್ ಇನ್ ಇಂಡಿಯಾ, ಭೇಟಿ ಬಜಾವ್ ಭೇಟಿ ಪಡಾವ್, 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರಿಗೂ ರೂ. 15 ಲಕ್ಷ ಹಣ ಕೊಡುವ ಯೋಜನೆಗಳು ಇನ್ನೂ ಜಾರಿಗೆ ಬಂದಿಲ್ಲ. ಆದರೆ ಚುನಾವಣೆ ಬಂದಿದೆಯಂದು ಸಫಾಯಿ ಕರ್ಮಚಾರಿಗಳ ಪಾದ ತೊಳೆದು ನಾಟಕ ಮಾಡಿದರು. ಸಫಾಯಿ ಕರ್ಮಚಾರಿಗಳ ಅಭಿವೃದ್ದಿಗಾಗಿ ಕಾಂಗ್ರೆಸ್ ಸರ್ಕಾರ ರೂ. 4000 ಕೋಟಿ ತೆಗೆದಿರಿಸಿತ್ತು. ಮೋದಿ ಸರಕಾರ ಕೇವಲ ರೂ. 10 ಕೋಟಿ ಮಾತ್ರ ತೆಗೆದಿರಿಸಿದೆ. ಈಗ ಹೇಳಿ ಇದು ನಿಜವಾಗಲೂ ಅವರನ್ನು ಉದ್ದಾರ ಮಾಡುವ ರೀತಿನಾ ಎಂದು ಪ್ರಶ್ನಿಸಿದರು.