ಬಳ್ಳಾರಿ
ನಿರ್ದಿಷ್ಠ ಆಹಾರ ವಸ್ತುಗಳ ಪಟ್ಟಿಯಲ್ಲಿ ಈರುಳ್ಳಿಯನ್ನು ಸೆರ್ಪಡೆ ಮಾಡಲಾಗಿದ್ದು, ಈ ಆದೇಶದಂತೆ ಸಗಟು/ ಉತ್ಪಾದಕರು/ ಕಮಿಷನ್ ಏಜೆಂಟ್‍ರುಗಳಿಗೆ ದಾಸ್ತಾನು ಮಿತಿ 250 ಕ್ವಿಂ, ಚಿಲ್ಲರೆ ವ್ಯಾಪಾರಿಗಳಿಗೆ 50 ಕ್ವಿಂಟಲ್ ಮಿತಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಆದ್ದರಿಂದ ಈ ದಾಸ್ತಾನು ಮಿತಿಗೆ ಒಳಪಡುವ ಈರುಳ್ಳಿ ವರ್ತಕರು ಜಿಲ್ಲಾಧಿಕಾರಿಗಳಿಂದ ಸಗಟು ವ್ಯಾಪಾರದ ಲೈಸನ್ಸ್‍ನ್ನು ಮತ್ತು ತಾಲೂಕಿನ ತಹಶೀಲ್ದಾರರಿಂದ ಚಿಲ್ಲರೆ ಲೈಸನ್ಸ್‍ನ್ನು (ಬಳ್ಳಾರಿ ನಗರದ ವರ್ತಕರು ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ, ಬಳ್ಳಾರಿ ಜಿಲ್ಲೆ ಇವರಿಂದ) ತಕ್ಷಣವೇ ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ನಿಮ್ಮ ವ್ಯಾಪ್ತಿಯಲ್ಲಿ ಬರುವ ಈರುಳ್ಳಿ ದಾಸ್ತಾನುದಾರರು, ಸಾಗಾಣಿಕೆದಾರರು ಹಾಗೂ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರುಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಲೈಸನ್ಸ್ ಪಡೆದುಕೊಳ್ಳುವಂತೆ ಸಹಾಯಕ ಆಯುಕ್ತರುಗಳಿಗೆ, ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ಬರೆದ ಪತ್ರದಲ್ಲಿ ಅವರು ಸೂಚನೆ ನೀಡಿದ್ದಾರೆ.
ಈರುಳ್ಳಿ ದಾಸ್ತಾನುದಾರರು, ಸಾಗಾಣಿಕೆದಾರರು ಹಾಗೂ ವ್ಯಾಪಾರಸ್ಥರು ತಮ್ಮ ವಹಿವಾಟು ವಿವರಗಳನ್ನು ತಕ್ಷಣವೇ ಜಿಲ್ಲಾಧಿಕಾರಿಗಳ ಕಛೇರಿ/ತಹಶೀಲ್ದಾರರ ಕಛೇರಿ/ ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ, ಬಳ್ಳಾರಿ ಕಛೇರಿಗೆ ಸಲ್ಲಿಸಬೇಕು ಎಂದು ಅವರು ವಿವರಿಸಿದ್ದಾರೆ.The Karnataka Essential Commodities Licensing (Amendment) order 2019ನ್ನು ಉಲ್ಲಂಘಿಸುವ ಈರುಳ್ಳಿ ವರ್ತಕರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕ್ರಮ ಜರುಗಿಸಲು ಜಿಲ್ಲೆಯ ಎಲ್ಲಾ ತಹಶೀಲ್ದಾರರ ಕಛೇರಿ/ ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ, ಬಳ್ಳಾರಿ ಇವರಿಗೆ ನಿರ್ದೇಶಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಭಾರತ ಸರ್ಕಾರವು ತನ್ನ ಅಧಿಸೂಚನೆ ದಿನಾಂಕ:29-09-2019ರಂತೆ The Removal of licensing Requirements, Stock Limits and Movment Restrictions on Specified Food stuffs order 2016 ಕ್ಕೆ ತಿದ್ದುಪಡಿ ತಂದಿರುತ್ತದೆ. ಆದರಂತೆ ಆದೇಶದ ಕ್ಲಾಜ್ (3) ರ ನಿರ್ದಿಷ್ಠ ಆಹಾರ ವಸ್ತುಗಳ ಪಟ್ಟಿಯಲ್ಲಿ ಈರುಳ್ಳಿ ಸೇರ್ಪಡೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ತನ್ನ ಅಧಿಸೂಚನೆ ದಿನಾಂಕ:01-10-2019 ರಂತೆ Karnataka Essential Commodities Licensing order 1986 ಕ್ಕೆ ತಿದ್ದುಪಡಿ ತಂದಿರುತ್ತದೆ. ಅದರಂತೆ ಈ ಆದೇಶದ ಕ್ಲಾಜ್ (3) ನಿರ್ದಿಷ್ಠ ಆಹಾರ ವಸ್ತುಗಳ ಪಟ್ಟಿಯಲ್ಲಿ ಈರುಳ್ಳಿ ಸೇರ್ಪಡೆ ಮಾಡಿರುತ್ತದೆ. ಅದರಂತೆ ಕರ್ನಾಟಕ ಸರ್ಕಾರವು ದಿನಾಂಕ:01-10-2019ರ ಅಧಿಸೂಚನೆಯಂತೆ Karnataka Essential Commodities Licensing order 1986 ಕ್ಕೆ ದಿನಾಂಕ:30-11-2019 ಮತ್ತು 06-12-2019 ರ ರಂದು ತಿದ್ದುಪಡಿ ಮಾಡಿ ಈರುಳ್ಳಿಯನ್ನು ಈ ಆದೇಶದ ವ್ಯಾಪ್ತಿಯೊಳಗೆ ಸೇರ್ಪಡೆ ಮಾಡಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ತೀವ್ರ ಗಮನವಿರಿಸಲು ಸೂಚನೆ: ಕೃಷಿ ಉತ್ಪನ್ನ ಮಾರುಕಟ್ಟಿಗಳು ಸೇರಿದಂತೆ ಈರುಳ್ಳಿ ವಹಿವಾಟು ನಡೆಸುವ ಉತ್ಪಾದಕ, ದಾಸ್ತಾನುದಾರರು, ಸಾಗಾಣಿಕೆದಾರರು, ಮಾರಾಟಗಾರರ ಮೇಲೆ ತೀವ್ರ ಗಮನವಿಡಬೇಕು. ಈರುಳ್ಳಿ ಆಗಮನ- ನಿರ್ಗಮನಗಳು ಮತ್ತು ಸಾಗಾಣಿಕೆ ಬಗ್ಗೆ ತನಿಖೆ ನಡೆಸಬೇಕು. ರೈತರು ಬೆಳೆದ ಬೆಳೆ ಮಾರುಕಟ್ಟೆಗೆ ಮಾರಾಟ ಮಾಡಲು ತೊಂದರೆಯಾಗದಂತೆ ನೋಡಿಕೊಂಡು ಎಲ್ಲಾ ರೀತಿಯ ಅಕ್ರಮ ಮತ್ತು ಸಾಗಾಣಿಕೆ ಹಾಗೂ ಮಾರಾಟಗಾರರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕ್ರಮ ಜರುಗಿಸಬೇಕು ಎಂದು ಡಿಸಿ ನಕುಲ್ ಅವರು ಸೂಚನೆ ನೀಡಿದ್ದಾರೆ.
ಕರ್ನಾಟಕ ಅಗತ್ಯ ವಸ್ತುಗಳ ಲೈಸೆನ್ಸಿಂಗ್ ಆದೇಶ 1986 ರಡಿ ಈರುಳ್ಳಿ ಚಿಲ್ಲರೆ ವಹಿವಾಟಿನ ಲೈಸೆನ್ಸ್ ಕೊಡುವ ಅಧಿಕಾರ ತಹಶೀಲ್ದಾರರಿಗೆ ಇದೆ. ಎಲ್ಲಾ ರೀತಿಯ ವಹಿವಾಟು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಲು ಆಹಾರ ನಿರೀಕ್ಷಕರು ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಅಧಿಕಾರವಿದೆ ಎಂದು ಅವರು ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಈರುಳ್ಳಿ ವಹಿವಾಟಿನ ತನಿಖೆಗೆ ತಹಶೀಲ್ದಾರರು, ಸಹಾಯಕ ನಿರ್ದೇಶಕರು ಅನೌಪಚಾರಿಕ ಪಡಿತರ ಪ್ರದೇಶ ಬಳ್ಳಾರಿ ನಗರ ಮತ್ತು ತೋಟಗಾರಿಕೆ, ಕೃಷಿ, ಕೃಷಿ ಉತ್ಪನ್ನ ಮಾರುಕಟ್ಟೆ. ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ