ಬಳ್ಳಾರಿ
ದೇಶದ ಅತಿದೊಡ್ಡ ಪ್ರಜಾಪ್ರಭುತ್ವ ಉತ್ಸವ ಲೋಕಸಭಾ ಚುನಾವಣಾ ಉತ್ಸವವಾಗಿದ್ದು, ಸರ್ವರೂ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಹೇಳಿದರು.
ನಗರದ ವೀರಶೈವ ಪದವಿ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೇ ಅತ್ಯಂತ ವಿವೇಚನಾಯುಕ್ತವಾಗಿ ಯೋಗ್ಯ ವ್ಯಕ್ತಿಗೆ ತಪ್ಪದೇ ಮತಚಲಾಯಿಸಿ,18ವರ್ಷದ ತುಂಬಿದ ಎಲ್ಲರು ಕಡ್ಡಾಯವಾಗಿ ಮತಚಲಾಯಿಸಿ ಮತ್ತು ತಮ್ಮ ಸುತ್ತಮುತ್ತಲಿನವರಿಗೂ ಮತಚಲಾಯಿಸಲು ಪ್ರೇರೆಪಿಸಿ, ಪ್ರಜಾಪ್ರಭುತ್ವದ ಹಬ್ಬ ಎಂದೆ ಪರಿಗಣಿತವಾದ ಏ.23ರಂದು ಮತದಾನದ ಜಾತ್ರೆ ನಡೆಯಲಿದ್ದು, ಎಲ್ಲರು ಸಂಭ್ರಮದಿಂದ ಭಾಗವಹಿಸಿ ಎಂದರು.
ಮತದಾನದ ಗುರುತಿನ ಚೀಟಿ ಇರದಿದ್ದರೂ ಚುನಾವಣಾ ಆಯೋಗ ತಮ್ಮ ಗುರುತಿಗಾಗಿ ಪರಿಗಣಿಸಿರುವ 14 ಐಡಿ ಕಾರ್ಡ್ ಗಳಲ್ಲಿ ಒಂದನ್ನಾದರೂ ತಂದು ಮತದಾನ ಮಾಡಿ ಎಂದರು.
ಮತದಾನಕ್ಕೆ ಸಂಬಂಧಿಸಿದಂತೆ ಸುತ್ತಮುತ್ತಲಿನವರಿಗೆ ಹಾಗೂ ಸಂಬಂಧಿಕರಿಗೆ ತಿಳಿಹೇಳಿ; ಬಿಸಿಲಿದೆ ಅಂತ ಮನೆಯೊಳಗೆ ಇರಬೇಡಿ, ಮತಗಟ್ಟೆ ಬಳಿ ನೀರು ನೆರಳು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಜಿ.ರಾಜಶೇಖರ, ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಶಿಲ್ಪಾ,ಜಲಜಾಕ್ಷಿ,ರವಿಕುಮಾರ್ ನಾಯ್ಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.