ತುಮಕೂರು
`ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಸ್ಮಶಾನದ ಸೌಲಭ್ಯ ಇರಲೇ ಬೇಕು. ಈ ವಿಷಯಕ್ಕೆ ಪ್ರಥಮ ಆದ್ಯತೆ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.
ಮಂಗಳವಾರ ಬೆಳಗ್ಗೆ ತುಮಕೂರು ನಗರದ `ಚಿಲುಮೆ’ ಸಮುದಾಯ ಭವನದಲ್ಲಿ ಏರ್ಪಟ್ಟಿದ್ದ “ಪರಿಶಿಷ್ಟ ಜಾತಿ/ವರ್ಗದ ಹಿತರಕ್ಷಣೆ ಹಾಗೂ ಕುಂದು ಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಸಭಿಕರಿಂದ ಬಂದ ಹಲವು ದೂರುಗಳಿಗೆ ಉತ್ತರಿಸುತ್ತ ಹೀಗೆ ನುಡಿದರು.
ಜಿಲ್ಲೆಯ 2400 ಹಳ್ಳಿಗಳ ಪೈಕಿ 370 ರಿಂದ 400 ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ. 75 ಗ್ರಾಮಗಳಲ್ಲಿ ಸರ್ಕಾರಿ ಜಮೀನೇ ಇಲ್ಲ. ಹೀಗಾಗಿ ಸ್ಮಶಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕು ಅಥವಾ ಭೂಮಿಯನ್ನು ಖರೀದಿ ಮಾಡಬೇಕು. ಇದಕ್ಕಾಗಿ ಸೂಕ್ತ ಭೂಮಿಯನ್ನು ಗುರುತಿಸಬೇಕು’ ಎನ್ನುತ್ತ ಮೇಲಿನಂತೆ ಹೇಳಿದರು.
ಜಿಲ್ಲಾದ್ಯಂತದಿಂದ ಆಗಮಿಸಿದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳು ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲದೆ ಶವಸಂಸ್ಕಾರಕ್ಕೆ ಆಗುತ್ತಿರುವ ತೊಡಕುಗಳನ್ನು ಉಲ್ಲೇಖಿಸಿದರು. ಸ್ಮಶಾನ ಇಲ್ಲವೆಂಬ ದೂರುಗಳೇ ಅಧಿಕ ಸಂಖ್ಯೆಯಲ್ಲಿ ಬಂದವು. ಇವುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ವಿಷಯದಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಹಾಜರಿದ್ದ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರುಗಳಿಗೆ ಸೂಚನೆ ನೀಡಿದರು.
ದಲಿತರಿಗೆ ಮುಕ್ತ ಪ್ರವೇಶ ಫಲಕಕ್ಕೆ ಕ್ರಮ
ಈ ಹಿಂದೆ ಇದೇ ರೀತಿ ನಡೆದಿದ್ದ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನದಂತೆ ಜಿಲ್ಲಾದ್ಯಂತ ಎಲ್ಲ ಮುಜರಾಯಿ ದೇವಾಲಯಗಳಲ್ಲೂ “ದಲಿತರಿಗೆ ಮುಕ್ತ ಪ್ರವೇಶ ಇದೆ” ಎಂಬ ಫಲಕ ಹಾಕಿಸಲು ಇನ್ನೂ ಕ್ರಮ ಕೈಗೊಂಡಿಲ್ಲವೆಂಬ ಅಸಮಾಧಾನವನ್ನು ಸಭೆಯಲ್ಲಿ ದಲಿತ ಮುಖಂಡರು ವ್ಯಕ್ತಪಡಿಸಿದರು.
ಈಗಲೂ ಸಹ ಅನೇಕ ದೇವಾಲಯಗಳಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದೂ ಸಹ ದಲಿತರ ಮೇಲೆ ಎಸಗುವ ದೌರ್ಜನ್ಯವೇ ಆಗಿದೆ ಎಂದು ಕೆಲವು ಮುಖಂಡರು ಆಕ್ರೋಶದಿಂದ ನುಡಿದರು. ಮುಖಂಡ ಎನ್.ನರಸಿಂಹಮೂರ್ತಿ ಮಾತನಾಡಿ ಎಡೆಯೂರು ಮತ್ತು ದೇವರಾಯನದುರ್ಗದ ದೇವಾಲಯಗಳಲ್ಲಿ ನವಅಸ್ಪೈಶ್ಯತೆ ತಲೆಯೆತ್ತಿದೆ. ತಾರತಮ್ಯ ಎಸಗಲಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಕೂಡಲೇ ಈ ಬಗ್ಗೆ ಕ್ರಮ ಜರುಗಿಸುವುದಾಗಿ ಕ್ರಮ ಕೈಗೊಳ್ಳ ಲಾಗುವುದೆಂದು ಭರವಸೆ ನೀಡಿದರಲ್ಲದೆ, ಆಯಾ ತಾಲ್ಲೂಕಿನ ತಹಸೀಲ್ದಾರರು ಮತ್ತು ಉಪವಿಭಾಗಾಧಿಕಾರಿಗಳು ಈ ವಿಷಯದ ಬಗ್ಗೆ ಗಮನಿಸಿ ಫಲಕ ಹಾಕಿರುವ ಬಗ್ಗೆ ಪಟ್ಟಿ ಸಿದ್ಧಪಡಿಸಿ ತಾಲ್ಲೂಕು ಹಂತದಲ್ಲಿ ಸಮಿತಿಗೆ ನೀಡುವಂತೆ ಹಾಗೂ ತಮಗೂ ವರದಿ ಸಲ್ಲಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಹೋಟೆಲ್‍ಗಳಲ್ಲೂ ಅಸ್ಪೈಶ್ಯತೆ ಆಚರಿಸುತ್ತಿದ್ದು, ಹೋಟೆಲ್‍ಗಳಲ್ಲೂ ಇಂತಹ ಫಲಕ ಅಳವಡಿಸಬೇಕೆಂದು ಕೆಲವು ದಲಿತ ಮುಖಂಡರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ನಿಟ್ಟಿನಲ್ಲೂ ಕ್ರಮ ಜರುಗಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು. ಫಲಕ ಹಾಕದಿದ್ದರೆ ಅಂತಹ ಹೋಟೆಲ್‍ಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದೂ ಸಭೆಗೆ ಭರವಸೆ ನೀಡಿದರು.
ಭಾರಿ ವಾಗ್ವಾದ
ಹಿಂದಿನ ಸಭೆಯ ಅನುಪಾಲನಾ ವರದಿಯ ಪ್ರಕಾರ 2015-16 ನೇ ಸಾಲಿನ ಅನುದಾನದಲ್ಲಿ ಸ್ಮಶಾನ ಅಭಿವೃದ್ಧಿ ಯೋಜನೆಯಡಿ ಕೇವಲ 1 ತಾಲ್ಲೂಕಿನಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ತಾಲ್ಲೂಕುಗಳಲ್ಲಿ ಇನ್ನೂ ಕ್ರಮ ಜರುಗಿಸಿಲ್ಲ ಎಂಬ ಮಾಹಿತಿಯು ದಲಿತ ಮುಖಂಡರಲ್ಲಿ ಆಕ್ರೋಶವನ್ನು ಮೂಡಿಸಿತು.
ವರದಿಯ ಪ್ರತಿ ಹಿಡಿದುಕೊಂಡು ಅನೇಕ ಮುಖಂಡರು ಏರಿದ ದನಿಯಲ್ಲಿ ಸಭಾಧ್ಯಕ್ಷರಾದ ಜಿಲ್ಲಾಧಿಕಾರಿಗಳ ಜೊತೆ ಏರಿದ ದನಿಯಲ್ಲಿ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಹೊತ್ತು ಯಾರ ಮಾತೂ ಕೇಳದಂತಾಯಿತು. ಆಗ ಮಧ್ಯ ಪ್ರವೇಶಿಸಿದ ಮಾಜಿ ಜಿ.ಪಂ. ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಸಭಿಕರನ್ನು ಸಮಾಧಾನಿಸಲು ಯತ್ನಿಸಿದರು. “ಅನುಪಾಲನಾ ವರದಿ ಪ್ರಕಾರ ಲಭ್ಯವಿರುವ ಅಂಕಿ ಅಂಶ ನೋಡಿದರೆ ಲೋಪ ಆಗಿರುವುದು ಕಂಡುಬರುತ್ತದೆ. 2015-16 ನೇ ಸಾಲಿನ ಅನುದಾನವನ್ನು ಬಳಸದಿರುವುದು ಆಕ್ಷೇಪಾರ್ಹವಾಗಿದೆ. ಒಂದು ತಾಲ್ಲೂಕಿನಲ್ಲಿ ಮಾತ್ರ ಆಗಿ, ಉಳಿದ ತಾಲ್ಲೂಕಿನಲ್ಲಿ ಆಗಿಲ್ಲವೆಂದರೆ ಆಶ್ಚರ್ಯವಾಗುತ್ತದೆ. ಈ ಲೋಪಕ್ಕೆ ಕಾರಣರಾದವರು ಯಾರು? ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು” ಎಂದು ಹುಚ್ಚಯ್ಯ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರ ಸೂಚನೆ ಮೇಲೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್ ಉತ್ತರಿಸುತ್ತ, 2018 ರಲ್ಲಿ ಕೆಲವೊಂದು ಸ್ಮಶಾನಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಮತ್ತೆ ಮಾತನಾಡಿದ ವೈ.ಎಚ್.ಹುಚ್ಚಯ್ಯ, 2018 ರವರೆಗೂ ಈ ಹಣವನ್ನು ಬಳಸದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಪುನರುಚ್ಚರಿಸಿದರು. ದಲಿತ ಮುಖಂಡರ ಈ ಬೇಡಿಕೆಗೆ ಒಪ್ಪಿದ ಜಿಲ್ಲಾಧಿಕಾರಿಗಳು, ಸದರಿ ಅನುದಾನವನ್ನು ಬಳಸದಿರುವ ಅಧಿಕಾರಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿ ಮುಂದಿನ ಕ್ರಮಕ್ಕೆ ಕಳುಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕುಣಿಗಲ್ ತಾಲ್ಲೂಕಿನ ಸಮಸ್ಯೆಯನ್ನು ದಲಿತ ಮುಖಂಡರೊಬ್ಬರು ಪ್ರಸ್ತಾಪಿಸಿದಾಗ, ಅದಕ್ಕೆ ಕುಣಿಗಲ್ ತಹಸೀಲ್ದಾರ್‍ರಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ಸರ್ವೆಯರ್ ಕಾರಣರಾಗಿದ್ದರೆ ವರದಿ ಕಳಿಸುವಂತೆ ಸೂಚಿಸಿದ ಅವರು, ತಪ್ಪು ಕಂಡುಬಂದರೆ ಸರ್ವೆಯರ್ ವಿರುದ್ಧವೂ ಅಮಾನತ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು.
ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟದ ಬೂದಗವಿಯಲ್ಲಿ ಶಿವಶರಣರ ಸಮಾಧಿ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ರಾಜ್ಯ ಮಾದಿಗರ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಆಗ್ರಹಿಸಿದರು.
ದಲಿತ ಮುಖಂಡರುಗಳ ಹಲವು ದೂರುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಪ್ರಸ್ತುತ ಬಗರ್‍ಹುಕುಂ ಸಮಿತಿ ಅಸ್ತಿತ್ವದಲ್ಲಿಲ್ಲ. ಶೀಘ್ರದಲ್ಲೆ ಅಸ್ತಿತ್ವಕ್ಕೆ ಬರಲಿದೆ. ಆ ಸಮಿತಿ ಪ್ರತಿವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಈಗ ಆ ಸಮಿತಿ ಇಲ್ಲದಿರುವುದರಿಂದ ವಿಳಂಬ ಆಗುತ್ತಿದೆಯಷ್ಟೇ. ಸಮಿತಿ ಬಂದ ಬಳಿಕ ಪರಿಹಾರ ಸಿಗಲಿದೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರರುಗಳು ಪ.ಜಾತಿ/ವರ್ಗದವರ ಪಟ್ಟಿಯನ್ನು ಈಗಲೇ ಸಿದ್ಧಪಡಿಸಿಟ್ಟುಕೊಂಡು, ಸಮಿತಿ ರಚನೆಯಾದ ಬಳಿಕ ಆ ಸಮಿತಿಗೆ ಮಂಡಿಸಬೇಕು ಎಂದು ತಹಸೀಲ್ದಾರರುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ದಲಿತ ಮುಖಂಡರುಗಳು ತಮ್ಮ ತಾಲ್ಲೂಕಿನ ವಿವಿಧ ಸಮಸ್ಯೆಗಳತ್ತ ಜಿಲ್ಲಾಡಳಿತದ ಗಮನ ಸೆಳೆದರು. ವೇದಿಕೆಯಲ್ಲಿ ಜಿ.ಪಂ. ಸಿ.ಇ.ಓ. ಶುಭ ಕಲ್ಯಾಣ್, ಎಸ್ಪಿ ಡಾ.ವಂಶಿಕೃಷ್ಣ, ತುಮಕೂರು ವಿ.ವಿ. ರಿಜಿಸ್ಟ್ರಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಎಲ್ಲ ಉಪವಿಭಾಗಾ ಧಿಕಾರಿಗಳು, ತಹಸೀಲ್ದಾರರು, ತಾಲ್ಲೂಕು ಪಂಚಾಯಿತಿಗಳ ಇ.ಓ.ಗಳು, ಜಿಲ್ಲಾ ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ದಲಿತರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.