ಹಾವೇರಿ
ಕಾರ್ಮಿಕರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಕಾರ್ಮಿಕ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ನಡೆಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.
ಶನಿವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ(ಅಸಂಘಟಿತ ಕ್ಷೇತ್ರಗಳಲ್ಲಿನ ಕೆಲಸಗಾರರಿಗೆ ಕಾನೂನು ಸೇವೆಗಳು) ಯೋಜನೆ 2015 ಕುರಿತ ಜಿಲ್ಲಾ ಮಟ್ಟದ ಒಂದು ದಿನದ ಕಾನೂನು ಅರಿವು ನೆರವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಣಕಾಸಿನ ತೊಂದರೆಯಿಂದ ಎಲ್ಲರೂ ಓದಲು ಹಾಗೂ ಅಧಿಕಾರಿಗಳಾಗಲು ಆಗಲ್ಲ. ರೈತರಾಗಲು ಭೂಮಿ ಇಲ್ಲದ ಕಾರಣ ಕಾರ್ಮಿಕರಾಗುವ ಸಂದರ್ಭ ಬರುತ್ತದೆ. ಯಾವ ಕೆಲಸವು ಕೀಳಲ್ಲ, ಪ್ರಾಮಾಣಿಕವಾಗಿ ಶ್ರದ್ಧೆಯಿಂದ ನ್ಯಾಯುತವಾಗಿ ದುಡಿ ಊಟಮಾಡಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಮಾನವೀಯತೆ ನಮ್ಮ ಮೂಲ ಧರ್ಮ. ಯಾವ ಕಾನೂನು ಇದನ್ನು ಹೇಳುವುದಿಲ್ಲ ಹಾಗೂ ಎಲ್ಲಿಯೂ ಲಿಖಿತವಾಗಿ ಬರೆದಿಲ್ಲ.
ಮಾನವೀಯತೆ ಎಲ್ಲದಕ್ಕಿಂತ ದೊಡ್ಡದಾಗಿದೆ. ನಡೆ-ನುಡಿ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಎ.ಜಗದೀಶ ಅವರು ಮಾತನಾಡಿ, ರೈತ ಮತ್ತು ಕಾರ್ಮಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತರನ್ನು ಬಿಟ್ಟರೆ ಕಾರ್ಮಿಕರೇ 2ನೇ ಸ್ಥಾನದಲ್ಲಿದ್ದಾರೆ. ರೈತರು ಹಸಿವು ನೀಗಿಸಿದರೆ ಕಾರ್ಮಿಕರು ಇತರೆ ಮೂಲಭೂತ ಸೌಕರ್ಯ ಒದಗಿಸಲು ಶ್ರಮಿಸುತ್ತಾರೆ. ಬೆಂಗಳೂರಿನಲ್ಲಿ ಭವ್ಯವಾದ ವಿಧಾನಸೌಧ ಹಾಗೂ ವಿಕಾಸಸೌಧ ಮತ್ತು ಮೈಸೂರಿನ ಸುಂದರ ಅರಮನೆ ನಿರ್ಮಾಣದಲ್ಲಿ ಸಾವಿರಾರು ಕಾರ್ಮಿಕರ ಶ್ರಮಿವಿದೆ.
ಇಂತಹ ಕಾರ್ಮಿಕರಿಗೆ ಕಾನೂನಿನ ಅರಿವು ನೀಡುತ್ತಿರುವುದು ಶ್ಲಾಘನೀಯ ಎಂದರು.ಅಸಂಘಟಿತ ಕಾರ್ಮಿಕರು ಒಗ್ಗೂಡಿ ಬಲಿಷ್ಠರಾಗಿ ಹೋರಾಡಿ ತಮ್ಮ ಹಕ್ಕನ್ನು ಪಡೆಯಬೇಕು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಸುಂದರ ಬದುಕು ಕಟ್ಟಿಕೊಡಬೇಕು. ಇಲಾಖೆಯವರು ಕಾರ್ಮಿಕ ವಿವಿಧ ಸೌಲಭ್ಯ ನೀಡುವುದರ ಜೊತೆಗೆ ಅವರ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆ ಹುಬ್ಬಳ್ಳಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀಮತಿ ಮೀನಾ ಪಾಟೀಲ ಅವರು ಮಾತನಾಡಿ, ಆರ್ಥಿಕವಾಗಿ ತೊಂದರೆ ಇದ್ದವರು ಹಾಗೂ ಅನಕ್ಷರಸ್ಥರು ಕಾರ್ಮಿಕ ವಲಯದಲ್ಲಿ ಹೆಚ್ಚಾಗಿದ್ದಾರೆ. ದೊಡ್ಡ ದೊಡ್ಡ ಕಾರ್ಖಾನೆ ಹಾಗೂ ಗಾರ್ಮೆಂಟ್ಸ್‍ಗಳಲ್ಲಿ ಕೆಲಸ ಮಾಡುವವರು ಹಾಗೂ ಪಿ.ಎಫ್ ಹಾಗೂ ಇ.ಎಸ್.ಐ. ಜಮೆಮಾಡುವವರು ಸಂಘಟಿತ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು, ಹಲಮಾರು, ಬೀದಿ ವ್ಯಾಪಾರಿಗಳನ್ನು ಅಸಂಘಟಿತ ಕಾರ್ಮಿಕರೆಂದು ಕರೆಯಲಾಗುತ್ತದೆ.
ಅಸಂಘಟಿತ ಕಾರ್ಮಿಕರಿಗೆ ನಿವೃತ್ತಿ ಇರುವುದಿಲ್ಲ ಹಾಗೂ ಇವರು ಜೀವನದಲ್ಲಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸುತ್ತಾರೆ. ದೇಶದಲ್ಲಿ ಶೇ.8 ರಷ್ಟು ಜನ ಸಂಘಟಿತ ಕಾರ್ಮಿಕರಿದ್ದು, ಶೇ.92 ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಹೇಳಿದರು.
ಅಸಂಘಟಿತ ಕಾರ್ಮಿಕ ಏಳ್ಗೆಗಾಗಿ 2006ರಲ್ಲಿ ಕರ್ನಾಟಕದಲ್ಲಿ ಕಾರ್ಮಿಕ ಮಂಡಳಿ ರಚಿಸಿ 14 ಯೋಜನೆಗಳನ್ನು ಜಾರಿಗೆ ತರಲಾಯಿತು. ಪಿಂಚಣಿ ಸೌಲಭ್ಯ, ಅಂಗವಿಕಲತೆ ಪಿಂಚಣಿ, ಟ್ರೈನಿಂಗ್ ಕಂ ಟೂಲ್ ಕಿಟ್ ಸೌಲಭ್ಯ, ಮನೆ ಖರೀದಿ/ ಕಟ್ಟಲು ಸಹಾಯಧನ, ಹೆರಿಗೆ ಸೌಲಭ್ಯ, ಅಂತಿಮ ಸಂಸ್ಕಾರ ಹಾಗೂ ಅನುಗ್ರಹ ರಾಶಿ, ಶೈಕ್ಷಣಿಕ ಧನಸಹಾಯ, ವೈದ್ಯಕೀಯ ಧನಸಹಾಯ, ಅಪಘಾತ ಪರಿಹಾರ, ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸೆ, ಮದುವೆಗೆ ಸಹಾಯಧನ, ಕಾರ್ಮಿಕ ಅನಿಲಭಾಗ್ಯ ಸಂಪರ್ಕ ಸೌಲಭ್ಯ, ಬಿ.ಎಂ.ಟಿ.ವಿ.ಬಸ್‍ಪಾಸ್ ಸೌಲಭ್ಯ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಪಾಸ್ ಸೌಲಭ್ಯ ಜಾರಿಗೆ ತರಲಾಗಿದೆ. ನೋಂದಾಯಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ಸಹ ನೀಡಲಾಗುತ್ತಿದೆ. ಕಾರ್ಮಿಕರಿಗೆ ಯಾವುದೇ ರೀತಿ ಅನ್ಯಾಯವದಲ್ಲಿ ಕಾರ್ಮಿಕ ಇಲಾಖೆಗೆ ತಿಳಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವೈ.ಎಲ್.ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯದಲ್ಲಿ ಬಡವರು ಹಾಗೂ ಅನಕ್ಷಸ್ಥರು ಹೆಚ್ಚಾಗಿದ್ದಾರೆ. ಇವರಿಗೆ ಕಾನೂನು ಅರಿವು ಮೂಡಿಸಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಮಿಕರಿಗೆ ದೊರೆಯುವ ಸೌಲಭ್ಯ ಹಾಗೂ ಕಾನೂನಿನ ಅರಿವನ್ನು ನೀವು ತಿಳಿದುಕೊಳ್ಳಿ ಹಾಗೂ ನಿಮ್ಮ ಅಕ್ಕಪಕ್ಕದವರಿಗೂ ತಿಳಿಸಿ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಬೆಳಿಗ್ಗೆ 10-30 ರಿಂದ ಸಂಜೆ 5-30ರವರೆಗೆ ಕಾರ್ಯನಿರ್ವಹಿಸುತ್ತದೆ. ನ್ಯಾಯ ಪಡೆಯಲು ಆರ್ಥಿಕವಾಗಿ ದುರ್ಬಲವಾದವರು, ಒಂದು ರೂ. ಆದಾಯ ಮಿತಿಯೊಳಗಿದ್ದವರು, ಕೋಮುಗಲಭೆ ಸಂತ್ರಸ್ಥರು ತಮಗಾದ ಅನ್ಯಾಯದ ಕುರಿತು ಸಂಕ್ಷಿಪ್ತವಾಗಿ ನಮೂದಿಸಿ ಅರ್ಜಿ ನೀಡಿದರೆ ಕಾನೂನು ಸೇವೆ ಪ್ರಾಧಿಕಾರದಿಂದ ವಕೀಲರನ್ನು ನೇಮಕಮಾಡಿ ನ್ಯಾಯ ಒದಗಿಸಿಕೊಡಲಾಗುವುದು. ಒಂದು ವೇಳೆ ಸುಳ್ಳು ಮಾಹಿತಿ ನೀಡಿದಲ್ಲಿ ಶಿಕ್ಷೆ ಸಹ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದರ್ಶಿ ಪಿ.ಎಂ.ಬೆನ್ನೂರು, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ ಪಾಟೀಲ ಅವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕೆಲಸಕ್ಕೆ ಬಳಸುವ ಉಪಕರಣಗಳ ಕಿಟ್ ಹಾಗೂ ಸ್ಮಾರ್ಟ್ ಕಾರ್ಡಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ರಾಜೇಶ್ವರಿ ಚಕ್ಕಲೇರ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ ಪಾಟೀಲ, ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಲಲಿತಾ ಎಸ್.ಸಾತೇನಹಳ್ಳಿ, ತರಬೇತಿ ದಿವಾಣಿ ನ್ಯಾಯಾಧೀಶರಾದ ಹರೀಶ್.ಜಿ. ಹಾಗೂ ಹರೀಶ್ ಕೆ.ಎಂ., ನಗರ ಪೊಲೀಸ್ ಠಾಣೆ ಪಿ.ಎಸ್.ಐ. ಪಿ.ಜಿ.ನಂದಿ ಹಾಗೂ ಮುತ್ತರಾಜ ಮಾದರ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ದೀಪಾ ಕುಲಕರ್ಣಿ ಸ್ವಾಗತಿಸಿದರು. ಸವಣೂರು ಕಚೇರಿ ಕಾರ್ಮಿಕ ನಿರೀಕ್ಷಕ ಅಕ್ಬರ್ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ