ಬೆಂಗಳೂರು
ಎರಡನೆ ಹಂತದ ಸಂಪರ್ಕದಲ್ಲಿದ್ದವರನ್ನು ಕ್ವಾರೆಂಟೈನ್ ಗಾಗಿ ಕರೆದುಕೊಂಡು ಹೋಗಲು ಹಗಲು ವೇಳೆ ಹೋಗಬೇಕಿತ್ತು ಎಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮಾಧ್ಯಮಗಳ ಮೇಲೆ ತಿಗರುಗಿ ಬಿದ್ದಿದ್ದಾರೆ.
ಗಲಾಟೆಯನ್ನು ಖಂಡಿಸುತ್ತೇನೆ. ತಪ್ಪಿತಸ್ಥರು ಯಾರೇ ಆಗಿದ್ದರು ಕಠಿಣ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಗಲಾಟೆ ನಡೆಯಬಾರದಿತ್ತು, ಇದು ವಿಷಾದನೀಯ, ಗಲಾಟೆ ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬಿಬಿಎಂಪಿ ಅಧಿಕಾರಿಗಳು ನನ್ನ ಬಳಿ ಬಂದು 57 ಜನರನ್ನು ಕ್ವಾರೆಂಟೈನ್ ಗೆ ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.
ನಾನು ಬಿಬಿಎಂಪಿ ಆಯುಕ್ತರಿಗೆ ದೂರವಾಣಿಯಲ್ಲಿ ಮಾತನಾಡಿ, ಕ್ವಾರೆಂಟೈನ್ ಗೆ ಕರೆದುಕೊಂಡು ಹೋಗಬೇಕಿರುವುದು ಒಂದಿಬ್ಬರಿಲ್ಲ 57 ಮಂದಿ ಇದ್ದಾರೆ. ಅಲ್ಲಿ ಕೂಲಿ ಮಾಡುವವರು, ಅನಕ್ಷಸ್ಥರಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಬೇಕು. ನಂತರ ಕರೆದುಕೊಂಡು ಹೋಗಬೇಕಿದೆ. ನಾನು ಬರುತ್ತೇನೆ. ಹಾಗಾಗಿ ಶನಿವಾರ ರಾತ್ರಿ ಬೇಡ, ಭಾನುವಾರ ಬೆಳಗ್ಗೆ ಬನ್ನಿ ಎಂದಿದ್ದೆ. ನಾನು ಮತ್ತು ನನ್ನ ಆಪ್ತ ಸಹಾಯಕರು ಕಾಯುತ್ತಿದ್ದಿದ್ದೇವು. ಆದರೆ ಬಿಬಿಎಂಪಿ ಅಧಿಕಾರಿಗಳಿಗೆ ಕ್ವಾರೆಂಟೈನ್ ಗೆ ರೂಂ ಸಿಕ್ಕಿಲ್ಲ ಎಂದು ಬೆಳಗ್ಗೆ ಬಂದಿಲ್ಲ. ಸಂಜೆ ಆರು ಗಂಟೆಗೆ ಹೋಗಿದ್ದಾರೆ. ಆ ವೇಳೆ ಗಲಾಟೆಯಾಗಿದೆ ಎಂದಿದ್ದಾರೆ.
ನಾನು ಗಲಾಟೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಜನರ ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಬೆಂಬಲ ಇದೆ.ಟಿಪ್ಪು ನಗರದಲ್ಲಿ ಇದೇ ರೀತಿ ಕ್ವಾರೆಂಟೈನ್ ಗೆ ಕರೆದುಕೊಂಡು ಹೋಗುವ ಸಂದರ್ಭ ಬಂದಾಗ ನಾನೇ ಖುದ್ದಾಗಿ ನಿಂತು ಜನರನ್ನು ಕಳುಹಿಸಿಕೊಟ್ಟಿದ್ದೇನೆ. ಪಾದರಾಯನಪುರದಲ್ಲಿ ಅದೇ ರೀತಿ ಮನವೋಲಿಸಿ ಕರೆದುಕೊಂಡು ಹೋಗಬಹುದಿತ್ತು ಎಂದರು.
ಸುದ್ದಿಗಾರರೊಂದಿಗೆ ಮಾತನಾಡುವಾಗ ಜಮೀರ್ ಅಹಮದ್ ಖಾನ್ ಪದೇ ಪದೇ ಸಿಟ್ಟಾಗುತ್ತಿದ್ದರು. ನಾನು ಗಲಾಟೆ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೂ ಅಧಿಕಾರಿಗಳು ರಾತ್ರಿ ವೇಳೆ ಏಕಾಏಕಿ ಪಾದರಾಯನಪುರಕ್ಕೆ ಹೋಗಿ ಜನರನ್ನು ಕ್ವಾರೆಂಟೈನ್ ಗೆ ಕರೆದುಕೊಂಡು ಹೋಗಿದ್ದರಿಂದ ಜನ ಆತಂಕಗೊಂಡು ಗಲಾಟೆಯಾಗಿದೆ ಎಂದು ಸಮರ್ಥನೆ ನೀಡುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ