ದಾವಣಗೆರೆ:
ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಹಲವು ಬಾರಿ ರೇಣುಕಾಚಾರ್ಯ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿಯಾಗಿದ್ದರೂ ರೇಣುಕಾಚಾರ್ಯ ವಿಚಾರಣೆಗೆ ಗೈರು ಹಾಜರಿ ಹಾಕುತ್ತಿದ್ದರು.
ಅನೇಕ ಬಾರಿ ರೇಣುಕಾಚಾರ್ಯ ಅವರಿಗೆ ಸಮನ್ಸ್ ನೀಡಿದರೂ ಉತ್ತರ ನೀಡಿರಲಿಲ್ಲ. ವಿಚಾರಣೆಗೆ ಸಹ ಹಾಜರಾಗಿರಲಿಲ್ಲ.
ಇಂದು ಬೆಳಗ್ಗೆ ರೇಣುಕಾಚಾರ್ಯ ತಮ್ಮ ಮೇಲಿರುವ ಜಾಮೀನು ರಹಿತ ವಾರೆಂಟ್ (ಎನ್‍ಬಿಡಬ್ಲು) ರೀಕಾಲ್ ಮಾಡಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರು ಪದೇ ಪದೇ ವಿಚಾರಣೆಗೆ ಗೈರು ಆಗಿದ್ದಕ್ಕೆ ಇಂದು ಸಂಜೆಯವರೆಗೆ ರೇಣುಕಾಚಾರ್ಯ ಕೋರ್ಟ್‍ನಲ್ಲೇ ಇರಬೇಕು ನ್ಯಾ. ರಾಮಚಂದ್ರ ಡಿ. ಹುದ್ದಾರ್ ಆದೇಶಿಸಿದ್ದಾರೆ.
