ಬೆಂಗಳೂರು
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಭೌಗೋಳಿಕವಾಗಿ ಹೆಚ್ಚಿನ ವಿಸ್ತಾರ ಹೊಂದಿದ್ದು, ಪ್ರತ್ಯೇಕ ಜಿಲ್ಲೆಗೆ ಅರ್ಹವಾಗಿರುವುದರಿಂದ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕರಾದ ಡಾ.ಜಿ. ಪರಮೇಶ್ವರ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಪ್ರತ್ಯೇಕ ಜಿಲ್ಲೆಯ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಮಧುಗಿರಿ ಕೇಂದ್ರ ಸ್ಥಾನದಲ್ಲಿ ಲೋಕೋಪಯೋಗಿ ಜಿಲ್ಲಾ ಪಂಚಾಯಿತಿ , ಕೆಇಬಿ, ಡಿವೈಎಸ್‌ಪಿ, ಎತ್ತಿನ ಹೊಳೆ ಇನ್ನಿತರ ಇಲಾಖೆಗಳ ಉಪವಿಭಾಗಗಳನ್ನು ಒಳಗೊಂಡಿರುವುದಲ್ಲದೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಸಹ ಹೊಂದಿದೆ.
ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯ ನೆರೆಯ ತಾಲೂಕುಗಳಾದ ಪಾವಗಡ, ಕೊರಟಗೆರೆ ಮತ್ತು ಶಿರಾ ತಾಲೂಕುಗಳಿಗೆ ಕೃಷಿಯೋತ್ಪನ್ನ ಮತ್ತು ವಾಣಿಜ್ಯೋತ್ಪನ್ನಗಳ ಮಾರುಕಟ್ಟೆಗೆ ಕೇಂದ್ರ ಸ್ಥಾನವಾಗಿರುತ್ತದೆ. ಮಧುಗಿರಿಯು ಎಲ್ಲಾ ಹಂತದಲ್ಲಿಯೂ ಜಿಲ್ಲೆಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿದ್ದು, ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿಯನ್ನು ಮಧುಗಿರಿ, ಪಾವಗಡ, ಕೊರಟಗೆರೆ ಮತ್ತು ಶಿರಾ ಕಂದಾಯ ತಾಲೂಕುಗಳನ್ನು ಒಟ್ಟು ಗೂಡಿಸಿ, ಪ್ರತ್ಯೇಕವಾಗಿ ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಅವರಿಗೆ ಪತ್ರದಲ್ಲಿ ಉಲ್ಲೇಖಿಸಿ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ