ರೈತರು ಕೃಷಿ ಜೊತೆಗೆ ಉಪಕಸುಬು ಅಳವಡಿಸಿಕೊಳ್ಳಬೇಕು

ಚಿತ್ರದುರ್ಗ:

    ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪಕಸುಬುನ್ನಾಗಿ ರೂಢಿಸಿಕೊಂಡರೆ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಸಲಹೆ ನೀಡಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸೌಲಭ್ಯಗಳ ಕುರಿತು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಕೃಷಿ ಕೆಲಸದ ಜೊತೆಗೆ ಹೈನುಗಾರಿಕೆ, ಕುರಿ ಕೋಳಿ ಸಾಗಾಣಿಕೆಯಂತಹ ಉಪಕಸುಬುಗಳನ್ನು ಅನುಸರಿಸುವದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಿವೆ ಎಂದು ಅಭಿಪ್ರಾಯಪಟ್ಟರು.

    ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡಿ, ಗ್ರಾಮೀಣ ಜನತೆಯಲ್ಲಿ ಪಶು ಸಂಗೋಪನೆ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದೆ. ಕೃಷಿ ಮುಖ್ಯ ಕಸುಬ ಇದರ ಜೊತೆಗೆ ಪಶುಸಂಗೋಪನೆ ಉಪಕಸುಬು ಎಂದು ಪರಿಗಣಿಸಲಾಗಿದೆ. ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕೋಳಿ ಸಾಗಾಣಿಕೆ, ಕುರಿ ಸಾಗಾಣಿಕೆಯು ಉಪಕಸುಬು ಆಗುವುದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಇದು ಉದ್ಯಮವಾಗಿ ಪರಿವರ್ತನೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪಶು ಸಂಗೋಪನೆ ರೈತರಿಗೆ, ಯುವಕ ಯುವತಿಯರಿಗೆ, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಗ್ರಾಮೀಣ ಜನರಿಗೆ ಉದ್ಯೋಗ ಅವಕಾಶ ನೀಡುತ್ತದೆ ಎಂದು ಹೇಳಿದರು.

   ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವುದರಿಂದ ಅಪೌಷ್ಠಿಕತೆಯಿಂದ ನರಳುತ್ತಿರುವವರಿಗೆ ಆಹಾರ ಭದ್ರತೆ ಒದಗಿಸುವ ಅತ್ಯುತ್ತಮ ಪ್ರಾಣಿಜನ್ಯ ಪ್ರೋಟಿನ್ ಅಂಶಗಳಾದ ಮೊಟ್ಟೆ, ಮಾಂಸ, ಹಾಲು ಇವುಗಳನ್ನು ಉಪಯೋಗಿಸುವುದರಿಂದ ಅಪೌಷ್ಠಿಕತೆಯನ್ನು ನಿವಾರಣೆ ಮಾಡಬಹುದಾಗಿದೆ ಎಂದರು.

    ಕೋವಿಡ್-19 ಬಂದಂಹ ಸಂದರ್ಭದಲ್ಲಿ ವಲಸೆ ಹೋದವರು ಮತ್ತೆ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸಿ ಸಾಕಷ್ಟು ಜನರು ಹೈನುಗಾರಿಕೆಯಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಇದು ನಿರುದ್ಯೋಗ ಸಮಸ್ಯೆಗೆ ಪರ್ಯಾಯವಾಗಿದೆ ಎಂದು ಹೇಳಿದರು.
ಪ್ರಪಂಚದಲ್ಲಿಯೇ ನಮ್ಮ ದೇಶ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ ಒಬ್ಬ ಮನುಷ್ಯ ಆರೋಗ್ಯವಾಗಿರಲು ಒಂದು ದಿನಕ್ಕೆ 300 ಗ್ರಾಂನಷ್ಟು ಹಾಲು, ಒಂದು ವರ್ಷಕ್ಕೆ 11 ಕೆ.ಜಿ. ಮಾಂಸ, 190 ಮೊಟ್ಟೆ ಸೇವೆನ ಅತಿಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.

    ಜಾನುವಾರುಗಳ ಆರೋಗ್ಯ ಸಂರಕ್ಷಣೆ, ಅವುಗಳ ಅಭಿವೃದ್ಧಿ, ಪಶು ಆಹಾರ, ಮೇವು ಅಭಿವೃದ್ಧಿ, ದೇಸಿ ಜಾನುವಾರುಗಳ ಸಂರಕ್ಷಣೆ, ಕುರಿ ಮತ್ತು ಮೇಕೆ, ಹಸು, ಹಂದಿ ಸೇರಿದಂತೆ ಯಾವುದೇ ಜಾನುವಾರು ಸಾಗಾಣಿಕೆ ಉತ್ತೇಜನ ನೀಡುವುದು, ಪಶು ಆಹಾರ ಮತ್ತು ಮೇವು ಅಭಿವೃದ್ಧಿ ಪ್ರೋತ್ಸಾಹ, ಯಾವುದೇ ಜಾನುವಾರು ರೋಗಗಳು ಬಾರದಂತೆ ನಿಯಂತ್ರಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

    ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 21,5,566 ಜಾನುವಾರುಗಳ ಇದ್ದು, ಅದರಲ್ಲಿ 3 ಲಕ್ಷ 39 ಸಾವಿರ ದನ, ಎಮ್ಮೆಗಳು, 17.5ಲಕ್ಷ ಕುರಿ ಮೇಕೆ, 20,70,000 ಕೋಳಿಗಳು ಇದ್ದು, ಇವುಗಳ ಆರೋಗ್ಯ ಸಂರಕ್ಷಣೆಗೆ ರೋಗಗಳ ನಿಯಂತ್ರಣಕ್ಕೆ ಇಲಾಖೆಯು ಜಿಲ್ಲೆಯಾದ್ಯಂತ ಪಶುಚಿಕಿತ್ಸಾ ಕೇಂದ್ರಗಳು, ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯಗಳು, ಜಿಲ್ಲಾಮಟ್ಟದಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು, ಪಾಲಿ ಕ್ಲಿನಿಕ್‍ನಲ್ಲಿ ತಜ್ಞ ವೈದ್ಯರು ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

    ಜಾನುವಾರು ಆರೋಗ್ಯ ಸಂರಕ್ಷಣ ಕಾರ್ಯಕ್ರಮಗಳು: ಪಶುಸಂಗೋಪನೆಯಲ್ಲಿ ಚಿಕಿತ್ಸೆಗಿಂತ ರೋಗ ನಿಯಂತ್ರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ದನ, ಎಮ್ಮೆಗಳಲ್ಲಿ ಕಂಡುಬರುವಂತಹ ಗಳಲೆ ರೋಗ, ಚಪ್ಪೆ ರೋಗ, ನೆರಡಿ ರೋಗ, ಬ್ರುಸ್ಸೆಲ್ಲೋಸಿಸ್ ರೋಗಳಗೆ ಲಸಿಕೆ ಹಾಕಲಾಗುತ್ತಿದೆ. ಕುರಿ-ಮೇಕೆಗಳಿಗೆ ಗಳಲೆ ರೋಗ, ಕರುಳು ಬೇನೆ ರೋಗ, ಪಿ.ಪಿ ಆರ್ ರೋಗ, ನೆರಡಿ ರೋಗ, ಕುರಿ ಪಾಕ್ಸ್, ನೀಲಿ ನಾಲಿಗೆ ರೋಗದ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಏಪ್ರಿಲ್‍ನಿಂದ ಇಲ್ಲಿಯವರೆಗೆ ಗಳಲೆ ರೋಗದ ವಿರುದ್ಧ 2ಲಕ್ಷ 8 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಿದ್ದೇವೆ. ಚಪ್ಪೆ ರೋಗದ ವಿರುದ್ಧ ದನಗಳಿಗೆ 46,000 ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು, ಕುರಿಸಿಡುಬು ವಿರುದ್ಧ 48,919 ಕುರಿಗಳಿಗೆ ಲಸಿಕೆ ಹಾಕಲಾಯಿತು. ಪಿಪಿಆರ್ ವಿರುದ್ದ 7ಲಕ್ಷ 29 ಸಾವಿರ ಕುರಿ ಮತ್ತು ಮೇಕೆಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

    ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಕುರಿತು ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ವಿವರವಾಗಿ ಮಾಹಿತಿ ನೀಡಿದರುಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link