ರಾಣೇಬೆನ್ನೂರು
ಚಿತ್ರರಂಗವು ಒಂದು ಉಧ್ಯಮವಾಗಿ ಬೆಳೆಯುತ್ತಿದ್ದು ಹಿಂದಿನ ಕಾಲದ ಪೌರಾಣಿಕ, ಸಾಮಾಜಿಕ ಪರೀಧಿಯನ್ನು ಬಿಟ್ಟು ಪ್ರೇಕ್ಷಕರ ಅಭಿರುಚಿ ಆಸಕ್ತಿಯನ್ನು ಕ್ರೂಢಿಕರಿಸಿಕೊಂಡು ಮುನ್ನಡೆಯುತ್ತಿದೆ ಎಂದು ಚಿತ್ರನಟಿ ತಾರಾ ಅನುರಾಧ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜು ಆವರಣದಲ್ಲಿ ಜರುಗಿದ ಕರ್ನಾಟಕ ವೈಭವದ ವೈಚಾರಿಕ ಹಬ್ಬದ “ಕನ್ನಡ ಚಿತ್ರರಂಗ ಹೊಸ ಹಾದಿಯ ಅನ್ವೇಷಣೆಯಲ್ಲಿ ವಿಷಯದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಾವಿದರಿಗೆ ಪಾತ್ರ ಎಷ್ಟು ಮುಖ್ಯವಾಗಿರುತ್ತೋ ಅದರಂತೆ ನಿರ್ಧೇಶಕರು ಹೂಡಿದ ಹಣ ವಾಪಸ್ ಬರುವಂತೆ ಚಿತ್ರಕಥೆಯಲ್ಲಿನ ಸನ್ನಿವೇಶಗಳಿಗೆ ತಕ್ಕಂತೆ ಅಭಿನಯಿಸುವ ಅನಿವಾರ್ಯತೆ ಇರುತ್ತೆ ಮತ್ತು ಪಾತ್ರಕ್ಕೆ ನ್ಯಾಯ ಒದಗಿಸುವುದು ಕಲಾವಿದರ ಕರ್ತವ್ಯವಾಗಿರುತ್ತದೆ.
ಪ್ರೇಕ್ಷಕರ ಅಭಿರುಚಿ, ಆಸಕ್ತಿ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಿದೆ ಚಿತ್ರಗಳನ್ನು ನೋಡಿ ಜನ ಬದಲಾಗುತ್ತೋ, ಪ್ರೇಕ್ಷಕರ ಮನಸ್ಥಿತಿ ಅರಿತು ನಿರ್ಧೇಶಕರು ಚಿತ್ರ ಹೆಣೆಯುತ್ತಾರೋ ವಿಪರ್ಯಾಸದ ಸಂಗತಿಯಾಗಿದೆ.ಯಾವುದೇ ಕಲಾವಿದರಿಗೆ ರಾಜಕೀಯ ವ್ಯಕ್ತಿಗತವಾದದ್ದು ಒಂದು ಪಕ್ಷಕ್ಕೆ ಸೀಮಿತವಾದರೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ಮಾತು ಅಪವಾದ. ಯಾರು ಪಾತ್ರಕ್ಕೆ ನ್ಯಾಯ ತುಂಬುತ್ತರೋ ಅಂಥವರಿಗೆ ಅವಕಾಶಗಳು ಮನೆ ಬಾಗಿಲಿಗೆ ಬರುತ್ತವೆ.
ಇನ್ನು ಸಿಎಎ ಜಾರಿಯಾದದ್ದು ದೇಶಕ್ಕೆ ಒಳ್ಳೆಯ ಬೆಳವಣಿಗೆ. ಭಾರತ ದೇಶ ಎಲ್ಲರನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಮನಸ್ಥಿತಿಯವರು ಎಂದರು.ಚಿತ್ರರಂಗ ಸಮಗ್ರ ಕಲೆಗಳ ತವರೂರು. ಒಬ್ಬ ಸಾಮಾನ್ಯ ಅನಕ್ಷರಸ್ಥರನ್ನು ಸೆಳೆದು ಪರದೆ ಮೇಲೆ ತೋರಿಸುವ ವೃತ್ತಿಯಾಗಿದೆ. ಆದರೆ ಅಶ್ಲೀಲತೆ, ಅಪಹಾಸ್ಯದ ಸನ್ನಿವೇಶದ ಸಿನೆಮಾಗಳನ್ನು ಭಹಿಷ್ಕರಿಸುವ, ತಿರಸ್ಕರಿಸುವ ಅಧಿಕಾರ ಪ್ರೇಕ್ಷಕರಲ್ಲಿ ಬರಬೇಕು ಅಂದಾಗ ಮಾತ್ರ ಮೌಲ್ಯಗಳಿಗೆ ಬೆಲೆ ಸಿಕ್ಕಂತಾಗುತ್ತದೆ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಗದ ಮೌಲ್ಯಗಳು ಅಧ:ಪತನಗೊಂಡಿರುವುದು ದುರದೃಷ್ಠಕರ ಸಂಗತಿಯಾಗಿದೆ. ಭಕ್ತಿ, ಪೌರಾಣಿಕ ರೀತಿಯ ಚಲನಚಿತ್ರಗಳಿಗೆ ಇಂದು ಮನ್ನಣೆ ಸಿಗುತ್ತಿಲ್ಲ. ಪ್ರೀತಿ, ಪ್ರೇಮ, ವ್ಯಕ್ತಿಗತ ಚಿತ್ರಕಥೆಗೆ ಹೆಚ್ಚು ಒತ್ತು ನೀಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಚಿತ್ರರಂಗ ವ್ಯಾಪಾರೀಕರಣವಾಗುತ್ತಿದ್ದು ಅದಕ್ಕೆ ಪ್ರೇಕ್ಷಕರ ವಿಭಿನ್ನ ಮನಸ್ಥಿತಿಯೂ ಕಾರಣವಾಗಿದೆ ಎಂದರು.
ಚಲನಚಿತ್ರ ನಿರ್ಧೇಶಕ ಅಶೋಕ ಕಶ್ಯಪ್ ಮಾತನಾಡಿ, ಹೊಸ-ಹೊಸ ತಂತ್ರಜ್ಞಾನದ ಅವಿಷ್ಕಾರದಿಂದಾಗಿ ಕನ್ನಡ ಸಿನೆಮಾಕ್ಕೂ ಹಾಲಿವುಡ್ಗೂ ಹೋಲಿಸಿದರೆ ನಾವುಗಳು 20 ವರ್ಷಗಳ ಹಿಂದಿನ ಮನಸ್ಥಿತಿಯಲ್ಲಿದ್ದೇವೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರೇಕ್ಷಕರು ಹೊಸತನಕ್ಕೆ ಹಾತೊರೆಯುವ, ವಿಭಿನ್ನ ಮನಸ್ಥಿತಿಯಿಂದ ಚಿತ್ರಕಥೆ ನಿರ್ಧೇಶನ ಸವಾಲಿನ ವಿಷಯವಾಗಿದೆ. ಮೊದಲಿನ ರೀತಿಯಲ್ಲಿ ಚಿತ್ರಕಥೆ ಬಿಡುಗಡೆಗೆ ಹರಸಾಹಸ ಪಡಬೇಕಿತ್ತು ಆದರೆ ಈಗ ಬಂಡವಾಳ ಹೂಡಿದರೆ ಸಾಕು ಚಿತ್ರಕಥೆ ಪರದೆ ಮೇಲೆ ರಾರಾಜಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಇದೇ ಸಂದರ್ಭದಲ್ಲಿ ವಿಕ್ರಮ ವಾರ ಪತ್ರಿಕೆಯ ಸಂಪಾದಕ ವೃಷಾಂಕ ಭಟ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ