ಮಾಜಿ ಸಚಿವರ ವಿರುದ್ಧ ಪ್ರಕರಣ ದಾಖಲು ..!

ಬೆಂಗಳೂರು

    ಅನರ್ಹ ಶಾಸಕ ಸುಧಾಕರ್ ಕೈ ಕತ್ತರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     ಹೇಳಿಕೆ ಸಂಬಂಧ ಮೊದಲು ಎನ್‌ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲಾಗಿತ್ತು. ಆದರೆ ಈ ಬಗ್ಗೆ ಸುಧಾಕರ್ ಬೆಂಬಲಿಗ ಚಿಕ್ಕಬಳ್ಳಾಪುರ ನಿವಾಸಿ ರವಿಚಂದ್ರ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶಿವಶಂಕರರೆಡ್ಡಿ ವಿರುದ್ಧ ಪಿಸಿಆರ್(ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ) ಅಡಿ ದೂರು ಸಲ್ಲಿಸಿದ್ದು, ಶಿವಶಂಕರರೆಡ್ಡಿ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.ರವಿಚಂದ್ರ ಅವರ ಅರ್ಜಿ ಮಾನ್ಯ ಮಾಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಿವಶಂಕರರೆಡ್ಡಿ ಹೇಳಿಕೆ ಸಂಬಂಧ ಡಿಸೆಂಬರ್ 2ರೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.

      ಶಿವಶಂಕರರೆಡ್ಡಿ ವಿರುದ್ಧ ಅನರ್ಹ ಶಾಸಕ ಸುಧಾಕರ್ ಕಾನೂನು ಸಮರ ಸಾರಿದ್ದು, ಶಿವಶಂಕರರೆಡ್ಡಿ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿ(ಅಪರಾಧ ಪಿತೂರಿ), 121(ಯುದ್ಧಕ್ಕೆ ಪ್ರಚೋದಿಸುವುದು), 124(ಆಕ್ರಮಣಕಾರಿ ಹೇಳಿಕೆ), 141(ಕಾನೂನು ಬಾಹಿರ ಸಭೆ), 506 (ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

     ಅಕ್ಟೋಬರ್ 19ರಂದು ಗೌರಿಬಿದನೂರು ತಾಲೂಕಿನ ಗಂಗಸಂದ್ರ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಿವಶಂಕರರೆಡ್ಡಿ ಸುಧಾಕರ್ ವಿರುದ್ಧ ಹರಿಹಾಯ್ದಿದ್ದರು. ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ನೂತನ ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರು ಹಳ್ಳಿಗಳನ್ನು ಸೇರಿಸಲು ವಿರೋಧ ವ್ಯಕ್ತಪಡಿಸಿದ್ದರು.

      ಮಾತನಾಡುವ ಭರದಲ್ಲಿ ಶಿವಶಂಕರರೆಡ್ಡಿ ಅವರು ಗೌರಿಬಿದನೂರು ತಂಟೆಗೆ ಬಂದರೆ ಅನರ್ಹ ಶಾಸಕ ಸುಧಾಕರ್ ಕೈ ಕತ್ತರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಸುಧಾಕರ್ ಬೆಂಬಲಿಗರು ಎಫ್‌ಐಆರ್ ದಾಖಲಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap