ರೈತರ ಕನಸು ಭಗ್ನಗೊಳಿಸಿದ ಫುಡ್ ಪಾರ್ಕ್ ಭಾಗ-1

ತುಮಕೂರು

ವಿಶೇಷ ವರದಿ : ಸಾ.ಚಿ.ರಾಜಕುಮಾರ

    ನಿರುದ್ಯೋಗಿ ಯುವಕರಲ್ಲಿ ಉದ್ಯೋಗದ ಭರವಸೆ ಮೂಡಿತ್ತು. ರೈತರಲ್ಲಿ ಹೊಸ ಆಸೆ ಚಿಗುರೊಡೆದಿತ್ತು. ನಿರುದ್ಯೋಗಿಗಳ ಕನಸು, ರೈತರ ಉತ್ಸಾಹ ಇವೆಲ್ಲವೂ ಈಗ ಬತ್ತಿ ಹೋಗಿವೆ. ಕಳೆದ 6 ವರ್ಷಗಳ ಹಿಂದೆ ಏನೆಲ್ಲಾ ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದರೋ ಅದೆಲ್ಲವೂ ಠುಸ್ ಆಗಿದೆ. ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡಬೇಕಿದ್ದ, ಸಹಸ್ರಾರು ರೈತ ಕುಟುಂಬಗಳಿಗೆ ಚೈತನ್ಯ ತುಂಬಬೇಕಾಗಿದ್ದ ವಸಂತನರಸಾಪುರದ ಫುಡ್‍ಪಾರ್ಕ್ ಘಟಕ ಎಲ್ಲರ ಆಸೆಗಳನ್ನು ಹುಸಿಗೊಳಿಸಿದೆ.

    2014ನೆ ಸೆಪ್ಟೆಂಬರ್ 24 ನೇ ತಾರೀಖು ತುಮಕೂರು ಜಿಲ್ಲೆಯ ಮಟ್ಟಿಗೆ ಸುವರ್ಣಾಕ್ಷರದಲ್ಲಿ ಬರದಿಡಬಹುದಾದ ಒಂದು ಐತಿಹಾಸಿಕ ದಿನವಾಗಿದೆ ಎಂದು ರಾಜಕೀಯ ಮುಖಂಡರು ಹೇಳಿದ್ದರು. ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 110 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಫುಡ್‍ಪಾರ್ಕ್ ತಲೆ ಎತ್ತಿತು. ಪ್ರಧಾನಿ ನರೇಂದ್ರ ಮೋದಿಯವರೇ ಇಲ್ಲಿಗೆ ಆಗಮಿಸಿ ಈ ಫುಡ್‍ಪಾರ್ಕ್ ಲೋಕಾರ್ಪಣೆಗೊಳಿಸಿದ್ದರು. 10 ಸಾವಿರ ಸ್ಥಳೀಯ ಜನರಿಗೆ ಇಲ್ಲಿ ನೇರ ಉದ್ಯೋಗ ದೊರೆಯಲಿದೆ, ಪರೋಕ್ಷವಾಗಿ 25 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಆ ಸಂದರ್ಭದಲ್ಲಿ ಭರವಸೆಗಳು ಮೊಳಗಿದ್ದವು.

     ಬೃಹತ್ ವಿಶಾಲವಾದ 110 ಎಕರೆ ಪ್ರದೇಶದಲ್ಲಿ ಆರಂಭವಾದ ದೇಶದ ಅತ್ಯಾಧುನಿಕ ಆಹಾರ ಸಂಸ್ಕರಣಾ ಘಟಕ (ಫುಡ್‍ಪಾರ್ಕ್) ಗೂಗಲ್ ಮ್ಯಾಪ್‍ನಲ್ಲಿ ಮಹತ್ವ ಪಡೆದುಕೊಂಡಿತೆ ಹೊರತು ಸ್ಥಳೀಯವಾಗಿ ಅನುಕೂಲವಾಗಲಿಲ್ಲ, ಅತಿ ನಿರೀಕ್ಷೆಗಳನ್ನು ಹೊಂದಿ ಫುಡ್‍ಪಾರ್ಕ್ ಹೆಸರು ಹೇಳುತ್ತಿದ್ದ ಜನ ಇಂದು ಮುಖ ಸಿಂಡರಿಸುತ್ತಿದ್ದಾರೆ. ಅಲ್ಲಿ ಕೆಲಸ ಬೇಕೆಂದು ಹಂಬಲಿಸುತ್ತಿದ್ದವರು ಕೆಲಸ ಬಿಟ್ಟು ಬೇರೆ ಕಡೆ ಉದ್ಯೋಗ ಹುಡುಕಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ಉದ್ಯೋಗ ಸಿಕ್ಕಿರುವುದು ಎಷ್ಟು ಮಂದಿಗೆ? ಯಾರಿಗೆ? ಇದನ್ನೆಲ್ಲಾ ತಡಕುತ್ತಾ ಹೋದರೆ ಬರೀ ಭ್ರಮನಿರಸನ.

ಏನಿದು ಫುಡ್ ಪಾರ್ಕ್?

     ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಐತಿಹಾಸಿಕ ಮಹಾ ಯೋಜನೆ ಇದು. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದ ಸಹಾಯ ಧನದೊಂದಿಗೆ ಆರಂಭದಲ್ಲಿ 140 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಿಂದ ಈ ಫುಡ್‍ಪಾರ್ಕ್ ಕಾರ್ಯಾರಂಭವಾಯಿತು. ಮುಂಬೈ ಮೂಲದ ಖಾಸಗಿ ಸಂಸ್ಥೆ ಫ್ಯೂಚರ್ ಗ್ರೂಪ್‍ನ ಇಂಟಿಗ್ರೇಟೆಡ್ ಫುಡ್‍ಪಾರ್ಕ್ ಪ್ರೈ.ಲಿ., ಇದರ ನಿರ್ಮಾಣ ಮತ್ತು ಕಾರ್ಯಾನುಷ್ಠಾನದ ಹೊಣೆ ಹೊತ್ತಿದೆ. ಕೇಂದ್ರ ಸರ್ಕಾರದ ಸಹಾಯ ಧನ, ರಾಜ್ಯ ಸರ್ಕಾರದ ಭೂಮಿ ಮತ್ತಿತರ ಸೌಕರ್ಯಗಳೊಂದಿಗೆ ಖಾಸಗಿ ಸಂಸ್ಥೆ ಈ ಫುಡ್ ಪಾರ್ಕ್ ನಡೆಸುತ್ತಿದೆ.

    ರೈತರಿಂದ ಹಣ್ಣು, ತರಕಾರಿ ಇತ್ಯಾದಿ ಆಹಾರೋತ್ಪನ್ನ ಬೆಳೆಯನ್ನು ಪಡೆದು ಅದನ್ನು ಸಂಸ್ಕರಣೆ ಮಾಡುವುದು, ಅವುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸುವುದು, ಫುಡ್‍ಪಾರ್ಕ್ ನಿರ್ಮಾಣದ ಪ್ರಮುಖ ಉದ್ದೇಶ. ಬಹುಬೇಗ ಹಾಳಾಗುವ ಹಣ್ಣು, ತರಕಾರಿಗಳನ್ನು ಸಂಸ್ಕರಣೆ ಮಾಡಿ, ಅದಕ್ಕೆ ಮೌಲ್ಯವರ್ಧನೆ ಉಂಟು ಮಾಡುವ, ಉಪ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸುವ, ತಯಾರಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಳಪಡಿಸುವ ಯೋಜನೆ ಇದರಲ್ಲಿ ಅಡಕವಾಗಿದೆ.

      ಈ ಪ್ರದೇಶ ತುಮಕೂರು ವ್ಯಾಪ್ತಿಯಲ್ಲಿದ್ದರೂ ಈ ಜಿಲ್ಲೆಯನ್ನು ಒಳಗೊಂಡಂತೆ ಒಟ್ಟು 12 ಜಿಲ್ಲೆಗಳಿಗೆ ಸಹಾಯವಾಗುವಂತೆ ಯೋಜನೆ ರೂಪಿಸಲಾಗಿದೆ. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿ ಮಾಡಲಾಗುತ್ತದೆ. ಇಲ್ಲೆಲ್ಲ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಗಿದೆ. ಹೀಗೆ ಖರೀದಿಸಿದ ಹಣ್ಣು, ತರಕಾರಿಯನ್ನು ಸಂರಕ್ಷಿಸಿ ಇಡಬಹುದಾದ ಬೃಹತ್ ಫ್ರೀಜರ್ ಈ ಘಟಕದಲ್ಲಿದೆ. ಸುಮಾರು 250 ಟನ್‍ಗಳಷ್ಟು ಹಣ್ಣು ಮತ್ತು ತರಕಾರಿ ಸಂರಕ್ಷಿಸಬಹುದಾದ ಬಹುದೊಡ್ಡ ಫ್ರೀಜರ್‍ಗಳಿದ್ದು, ಈ ಕಾರಣದಿಂದಾಗಿಯೇ ಅತ್ಯಾಧುನಿಕ ಮತ್ತು ವಿಭಿನ್ನ ಎಂಬ ಹೆಸರು ಗಳಿಸಿದೆ.

     ಇದಿಷ್ಟೇ ಅಲ್ಲ, ಹಣ್ಣು, ತರಕಾರಿ ಬಳಸಿ ಸಿದ್ಧ ಆಹಾರ ತಯಾರಿಸುವ ಯೋಜನೆಯೂ ರೂಪುಗೊಂಡಿದೆ. ಹಣ್ಣು ಮತ್ತು ತರಕಾರಿಯನ್ನು ಫ್ಯಾಕ್ಟರಿಯ ಹೊರಭಾಗದಲ್ಲಿ ತುಂಬಿದರೆ ಸಾಕು ಸ್ವಯಂ ಚಾಲಿತವಾಗಿ ಅದು ತೊಳೆಯಲ್ಪಡುವುದಲ್ಲದೆ, ಉತ್ತಮ ಹಣ್ಣು ಬೇರ್ಪಡುತ್ತದೆ. ಒಂದು ಕಡೆ ಸಂಗ್ರಹವಾಗುತ್ತದೆ. ತರಕಾರಿಗಳನ್ನು ಕತ್ತರಿಸಲೂ ಸಹ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತದೆ. ಮಾವು, ಬಾಳೆ, ಟೋಮೆಟೋ, ತೊಂಡೇಕಾಯಿಯಿಂದ ಪಲ್ಟ್ ತಿರುಳು ತೆಗೆಯುವುದೂ ಸಹ ಒಂದು ಪ್ರಮುಖ ಆಕರ್ಷಣೆ. ಒಂದು ಘಂಟೆಗೆ 10 ಟನ್ ಮಾವಿನ ಹಣ್ಣು, 6 ಟನ್ ಪಪ್ಪಾಯಿ, 6 ಟನ್ ಟೋಮೆಟೋ, 6 ಟನ್ ಬಾಳೆಹಣ್ಣಿನ ರಸ ತೆಗೆಯಬಹುದಾದ ವ್ಯವಸ್ಥೆ ಇಲ್ಲಿದೆ. ಮಾವಿನಕಾಯಿಯನ್ನು ಹಣ್ಣು ಮಾಡುವ ಘಟಕಗಳೂ ಸಹ ಇವೆ.

ತುಮಕೂರು ಆಯ್ಕೆ ಏಕೆ?

     ರಾಷ್ಟ್ರದ ಪ್ರಮುಖ ನಗರಗಳು ಜನರಿಂದ ತುಂಬಿ ಹೋಗಿ ಉಪನಗರಗಳನ್ನು ಗುರುತಿಸಲಾಗುತ್ತಿದೆ. ಬೆಂಗಳೂರು ರಾಜಧಾನಿಗೆ ಪರ್ಯಾಯವಾಗಿ ತುಮಕೂರನ್ನು ಈಗಾಗಲೇ ಪರಿಗಣಿಸಲಾಗಿದೆ. ವಸಂತನರಸಾಪುರ ಪ್ರದೇಶದಲ್ಲಿ ಕಾರ್ಖಾನೆಗಳಿಗೆ ಬೇಕಾಗಬಹುದಾದ ಸ್ಥಳಾವಕಾಶ, ಸ್ವಭಾವಿಕ ಸಂಪತ್ತು, ಇಲ್ಲಿಂದ ಇತರೆ ನಗರಗಳಿಗೆ ತಲುಪಬಹುದಾದ ಸಂಚಾರಿ ವ್ಯವಸ್ಥೆ ಇವೆಲ್ಲವನ್ನು ಗಣನೆಗೆ ತೆಗೆದುಕೊಂಡೇ ಇಲ್ಲಿ ಫುಡ್‍ಪಾರ್ಕ್ ಆರಂಭಿಸಲಾಯಿತು.

     ಬೆಂಗಳೂರಿನಿಂದ 100 ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಈ ಪ್ರದೇಶ ಚನ್ನೈ ಮತ್ತು ಮುಂಬೈಗೆ ಸಂಪರ್ಕ ಸಾಧಿಸಲು ಸುಲಲಿತ ಮಾರ್ಗ. ತುಮಕೂರು ಜಿಲ್ಲೆಯಲ್ಲಿ ಯಥೇಚ್ಛವಾಗಿ ಅಕ್ಕಿ ಗಿರಣಿಗಳಿವೆ. ಇಲ್ಲಿ ತರಕಾರಿ, ವಿವಿಧ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ತೆಂಗಿಗೆ ಈ ನಾಡು ಪ್ರಸಿದ್ಧಿ. ರಾಗಿ, ಜೋಳ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಯ ಜೊತೆಗೆ ಹೈನುಗಾರಿಕೆಗೆ ಈ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಫುಡ್‍ಪಾರ್ಕ್ ಆರಂಭಿಸುವ ಮುನ್ನ ಈ ಎಲ್ಲ ವರದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಕೃಷಿ ಚಟುವಟಿಕೆ ಉತ್ತಮವಾಗಿರುವುದು, ಈ ಚಟುವಟಿಕೆ ಫುಡ್‍ಪಾರ್ಕ್‍ಗೆ ಪೂರಕವಾಗಬಹುದಾದ ಯೋಜನೆಗಳು, ಸಾಗಾಣಿಕೆಗೆ ಸುಲಭವಾದ ಮಾರ್ಗ ಇದೆಲ್ಲವು ಫುಡ್‍ಪಾರ್ಕ್ ಆರಂಭಿಸಲು ಪರಿಗಣಿತವಾದ ಅಂಶಗಳು.

    ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಆರಂಭಗೊಂಡ ಫುಡ್ ಪಾರ್ಕ್‍ಗೆ ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ ಸಹಾಯ ಧನ ನೀಡಿದೆ. ತರಕಾರಿ, ಹಣ್ಣು, ದವಸ ಧಾನ್ಯ ಬೆಳೆಯುವ ರೈತರನ್ನು ಉತ್ತೇಜಿಸಿ ಅವರು ಬೆಳೆದ ಉತ್ಪನ್ನಗಳನ್ನು ಫುಡ್‍ಪಾರ್ಕ್‍ನಲ್ಲಿ ಸಂರಕ್ಷಿಸಿ ಸಂಸ್ಕರಣೆ ಮಾಡುವುದು ಇದರ ಪ್ರಮುಖ ಉದ್ದೇಶ. ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕವಾಗಿ ಹಣ್ಣು ಮಾಡುವ ಘಟಕಗಳು, ತರಕಾರಿಗಳನ್ನು ಸಂರಕ್ಷಿಸುವ ಫ್ರೀಜ್‍ಗಳು ಈ ಘಟಕದಲ್ಲಿ ತಲೆಎತ್ತಿದ್ದರಿಂದ ಸುತ್ತಮುತ್ತಲ ರೈತಾಪಿ ವರ್ಗ ಬಹಳ ಸಂತಸಪಟ್ಟಿತ್ತು. ರೈತರು, ಸಣ್ಣ ಉದ್ದಿಮೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap