ತುಮಕೂರು
ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮಪಂಚಾಯಿತಿಯಲ್ಲಿ ವಿವಿಧ ರೀತಿಯ ಅವ್ಯವಹಾರ, ಅಕ್ರಮಗಳಾಗಿರುವುದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.
ಬೆಳಗುಂಬ ಗ್ರಾಮಪಂಚಾಯಿತಿಯಲ್ಲಿ ಅಕ್ರಮಗಳಾಗಿವೆಯೆಂದು ಆರೋಪಿಸಿ ಗ್ರಾ.ಪಂ.ಸದಸ್ಯ ಬಿ.ಎಸ್.ವೆಂಕಟೇಶ್ ಅವರ ನೇತೃತ್ವದಲ್ಲಿ ಸದಸ್ಯರುಗಳಾದ ಬಿ.ಪುಷ್ಪಲತಾ, ನರಸಿಂಹರಾಜು, ಡಿ.ಟಿ.ಸುಗುಣ ಮತ್ತು ಎಂ.ಎಸ್.ಲೋಕೇಶ್ ಅವರು ಕಳೆದ ಮಾರ್ಚ್ 14 ರಂದು ಸರ್ಕಾರಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ್ದು. ಈ ಹಿನ್ನೆಲೆಯಲ್ಲಿ ನಡೆದ ತನಿಖೆಯಲ್ಲಿ ಈ ಸದಸ್ಯರುಗಳು ಮಾಡಿದ್ದ ಆರೋಪಗಳು ಸತ್ಯವೆಂಬುದು ಸಾಬೀತಾಗಿದೆ.
ತುಮಕೂರು ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಸಿದ್ದಪಡಿಸಿರುವ ಪರಿಶೀಲನಾ ವರದಿಯಲ್ಲಿ ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ-ಅವ್ಯವಹಾರಗಳು ನಡೆದಿರುವುದು ದಾಖಲಾಗಿದೆ. ಈ ತನಿಖಾ ವರದಿಯನ್ನು ತಾ.ಪಂ.ನ ಇ.ಓ. ಅವರು ಮೇ 25 ರಂದು ಜಿಲ್ಲಾ ಪಂಚಾಯತ್‍ನ ಸಿ.ಇ.ಓ. ಅವರಿಗೆ ಸಲ್ಲಿಸಿದ್ದಾರೆ.
ತನಿಖಾ ವರದಿಯಲ್ಲಿ ಏನಿದೆ?
ಸದರಿ ತನಿಖಾ ವರದಿಯಲ್ಲಿರುವ ಮುಖ್ಯಾಂಶಗಳು ಈ ರೀತಿ ಇವೆ:-
ನಿರಂತರವಾಗಿ ತೆರಿಗೆ ಸಂಗ್ರಹದ ಮೊತ್ತವನ್ನು ಸಕಾಲದಲ್ಲಿ ಗ್ರಾ.ಪಂ. ನಿಧಿ ಬ್ಯಾಂಕ್ ಖಾತೆಗೆ ಪಾವತಿಸದೆ ವಿಳಂಬವಾಗಿ ಜಮಾ ಮಾಡಲಾಗಿದೆ.
ಗ್ರಾಮ ಪಂಚಾಯಿತಿಯು 2015-16 ನೇ ಸಾಲಿನಲ್ಲಿ 6 ಸಾಮಾನ್ಯ ಸಭೆಗಳು, 2016-17 ನೇ ಸಾಲಿನಲ್ಲಿ 7 ಸಾಮಾನ್ಯಸಭೆ, 17-18 ನೇ ಸಾಲಿನಲ್ಲಿ 5 ಸಾಮಾನ್ಯ ಸಭೆ ಹಾಗೂ 1018-19 ನೇ ಸಾಲಿನಲ್ಲಿ 5 ಸಾಮಾನ್ಯ ಸಭೆಗಳನ್ನು ನಡೆಸಲಾಗಿರುತ್ತದೆ. ದೂರಿನಲ್ಲಿ ತಿಳಿಸಿರುವಂತೆ 19-03-2018 ರಿಂದ 25-10-2018 ರವರೆಗೆ ಸಾಮಾನ್ಯ ಸಭೆ ನಡೆದಿರುವುದಿಲ್ಲ. ಈ ಅವಧಿಯಲ್ಲಿ ಸಭೆಯ ಅನುಮೋದನೆ ಇಲ್ಲದೆಯೇ ಗ್ರಾಮ ಪಂಚಾಯಿತಿ ನಿಧಿಯಿಂದ ವೆಚ್ಚ ಮಾಡಲಾಗಿದೆ.
ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ದಿನಾಂಕ 19-03-2018 ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿವೇಶನ, ಕಟ್ಟಡ, ನೀರುಪೂರೈಕೆ ಸೇರಿದಂತೆ ವಿವಿಧ ತೆರಿಗೆ ಮತ್ತು ದರಗಳನ್ನು ಪರಿಷ್ಕರಿಸಲಾಗಿದೆ. ಆದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರ ಅನುಸೂಚಿ 4 ರಲ್ಲಿ ನಿಗದಿಪಡಿಸಿದಂತೆ ತೆರಿಗೆಗಳನ್ನು ಪರಿಷ್ಕರಣೆ ಮಾಡದೆ, ಅವೈಜ್ಞಾನಿಕವಾಗಿ ತೆರಿಗೆ ಪರಿಷ್ಕರಣೆ ಮಾಡಲಾಗಿರುತ್ತದೆ.
ಗ್ರಾ.ಪಂ. ಸಿಬ್ಬಂದಿ ವೇತನದ ಖಾತೆಯಿಂದ ಅನ್ಯ ಉದ್ದೇಶಗಳಿಗಾಗಿ ಹೀರಾ ಎಲೆಕ್ಟ್ರಿಕಲ್ಸ್, ಜಗದೀಶ್ ಹಾರ್ಡ್‍ವೇರ್ ಮತ್ತು ಹನುಮಂತರಾಯಪ್ಪ ಎಂಬುವವರಿಗೆ ಹಣ ಪಾವತಿಸಲಾಗಿದೆ. ಇದೇ ರೀತಿ ಇನ್ನೂ ಹಲವಾರು ಅನುಮಾನಾಸ್ಪದ ವೆಚ್ಚಗಳನ್ನು ಮಾಡಲಾಗಿದೆ. ಸದರಿ ಬ್ಯಾಂಕ್ ಖಾತೆಯ ನಗದು ಪುಸ್ತಕ, ಓಚರ್‍ಗಳು, ಸಿಬ್ಬಂದಿ ವೇತನಪಾವತಿ ವಹಿಗಳನ್ನು ಹಾಜರುಪಡಿಸದಿರುವುದರಿಂದ ಖಾತೆಯಿಂದ ಮಾಡಲಾದ ವೆಚ್ಚದ ವಿವರಗಳು ಲಭ್ಯವಾಗಿರುವುದಿಲ್ಲ.
ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ನಡಾವಳಿಗಳನ್ನು ಪರಿಶೀಲಿಸಲಾಗಿ ಸಭೆಯ ನಡಾವಳಿಗಳಲ್ಲಿ ಆ ತಿಂಗಳ ಒಟ್ಟು ಜಮೆ ಮತ್ತು ಒಟ್ಟು ವೆಚ್ಚಗಳನ್ನು ಮಾತ್ರ ನಮೂದಿಸಲಾಗಿರುತ್ತದೆ. ವೆಚ್ಚದಲ್ಲಿ ಯಾವ ಯಾವ ಬಾಬ್ತುಗಳಿಗೆ ಎಷ್ಟು ವೆಚ್ಚ ಮಾಡಲಾಗಿರುತ್ತದೆ ಎಂಬ ವಿವರ ಸಭಾ ನಡವಳಿಗಳಲ್ಲಿ ನಮೂದಿಸಿಲ್ಲ.
ಗ್ರಾ.ಪಂ. ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿ ಅಭಿವೃದ್ಧಿ ಶುಲ್ಕ ವಿಧಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ 19-03-2018 ರ ಸಾಮಾನ್ಯ ಸಭೆಯಲ್ಲಿ ನಮೂದಿಸಿರುವುದು ಕಂಡುಬಂದಿದ್ದು, ವಿವರಗಳು ಸ್ಪಷ್ಟವಾಗಿರುವುದಿಲ್ಲ. ಅಂತೆಯೇ ನಡಾವಳಿಗಳನ್ನು ತಿದ್ದಿರುವುದು ಕಂಡುಬಂದಿದೆ.
ಗ್ರಾ.ಪಂ. ಸಾಮಾನ್ಯ ಸಭೆಯ ನಡಾವಳಿ ಪುಸ್ತಕವನ್ನು ಪರಿಶೀಲಿಸಲಾಗಿ ಕೆಲವು ನಡಾವಳಿಗಳನ್ನು ದಾಖಲು ಮಾಡಿ ರದ್ದುಪಡಿಸಿರುವುದು, ಒಂದೇ ಸಭೆಯ ನಡಾವಳಿಗಳನ್ನು ಬೇರೆ ಬೇರೆ ಇಂಕಿನಲ್ಲಿ (ಪೆನ್ನು) ದಾಖಲಿಸಿರುವುದು ಕಂಡುಬಂದಿದೆ.
ಗ್ರಾ.ಪಂ.ನಿಧಿಯ ನಗದು ಪುಸ್ತಕ ಮತ್ತು ಓಚರ್‍ಗಳನ್ನು ತನಿಖೆಗೆ ಹಾಜರುಪಡಿಸಿಲ್ಲ. ಇದೇ ರೀತಿ ಗ್ರಾ.ಪಂ. ತೆರಿಗೆ ಸಂಗ್ರಹದ ವೆಚ್ಚಕ್ಕೆ ಸಂಬಂಧಿಸಿದಂತೆ ನಗದು ಪುಸ್ತಕ, ಓಚರ್‍ಗಳನ್ನು ಪರಿಶೀಲನೆಗೆ ಹಾಜರುಪಡಿಸಿಲ್ಲ.
ಗ್ರಾ.ಪಂ.ನಲ್ಲಿ ಈವರೆಗೆ ಇ-ಸ್ವತ್ತು ಮೂಲಕ 1121 ದಾಖಲೆಗಳನ್ನು ವಿತರಿಸಿದ್ದು, ಇವುಗಳ ಬಗ್ಗೆ ತನಿಖೆಗೆ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡವನ್ನು ರಚಿಸಿ ಸಮಗ್ರ ತನಿಖೆ ನಡೆಸಬಹುದಾಗಿದೆ ಎಂಬಿತ್ಯಾದಿ ಸಂಗತಿಗಳು ತನಿಖಾ ವರದಿಯಲ್ಲಿ ಬಯಲಿಗೆ ಬಂದಿದೆ.
ಸಿಎಂ- ಡಿಸಿಎಂ-ಶಾಸಕರ ಪತ್ರ
ಸದಸ್ಯರುಗಳು ಸಲ್ಲಿಸಿದ್ದ ದೂರು ಅರ್ಜಿಗೆ ಸ್ಪಂದಿಸಿ ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ಕಚೇರಿಯು ಸೂಕ್ತ ಕ್ರಮಕ್ಕೆ ಸೂಚಿಸಿ ಜಿಲ್ಲಾ ಪಂಚಾಯತ್‍ನ ಸಿಇಓ ಅವರಿಗೆ ಮಾರ್ಚ್ 25 ರಂದೇ ಪತ್ರ ಬರೆದಿತ್ತು. ಇದಾದ ಬಳಿಕ ಸದಸ್ಯರುಗಳ ದೂರು ಅರ್ಜಿಯನ್ನು ಅನುಮೋದಿಸಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಸಹ ಏಪ್ರಿಲ್ 8 ರಂದು ಜಿ.ಪಂ. ಸಿಇಓ ಅವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು. ಅವೆಲ್ಲದರ ಪರಿಣಾಮವಾಗಿ ಈ ತನಿಖೆ ನಡೆದಿದೆ ಎಂದು ಸದಸ್ಯ ಬಿ.ಎಸ್.ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








