ಬಳ್ಳಾರಿ:
ನಗರದ ಶ್ರೀ ಬಾಲಾಂಜನೇಯ ಸ್ವಾಮಿ ಪ್ರಾಥಮಿಕ ಶಾಲೆ (ದೇವಸ್ಥಾನದ) ಆವರಣದಲ್ಲಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ಯುವಮುಖಂಡ ಎಂ.ಪ್ರಭಂಜನ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ದೇವಸ್ಥಾನದ ಬಾಲನಂದಾ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಯುವಮುಖಂಡ ಎಂ.ಪ್ರಭಂಜನ ಕುಮಾರ್, ಬಡಜನರ ಅನುಕೂಲಕ್ಕಾಗಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಮಾನ್ಯ ಕಾಯಿಲೆಯಿಂದ ಹಿಡಿದು ಎಲುಬು ಮತ್ತು ಕೀಲುನೋವು, ರಕ್ತದೊತ್ತಡ ಸೇರಿ ಇನ್ನಿತರೆ ಕಾಯಿಲೆಗಳಿಗೆ ಉಚಿತವಾಗಿ ತಪಾಸಣೆ ಮಾಡಲಾಗುತ್ತದೆ. ಮಹಿಳೆಯರ ಸಮಸ್ಯೆಗಳ ಬಗ್ಗೆಯೂ ಪ್ರತ್ಯೇಕ ವೈದ್ಯರನ್ನು ನಿಯೋಜಿಸಲಾಗಿದೆ. ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡ ಎಲ್ಲ ಫಲಾನುಭವಿಗಳಿಗೆ ಲಭ್ಯವಿರುವ ಔಷಧಗಳನ್ನು ಸ್ಥಳದಲ್ಲೇ ಉಚಿತವಾಗಿ ವಿತರಿಸಲಾಗುತ್ತಿದೆ. ಲಭ್ಯವಿಲ್ಲದ ಔಷಧಗಳನ್ನು ಬೇರೆಡೆಯಿಂದ ತರಿಸಿ ಮರುದಿನ ಸಂಬಂಧಪಟ್ಟ ಫಲಾನುಭವಿಗಳಿಗೆ ಒದಗಿಸಲಾಗುವುದು. ಅದಕ್ಕಾಗಿ ಅಂತಹ ಫಲಾನುಭವಿಗಳ ಮೊಬೈಲ್ ಸಂಖ್ಯೆಯನ್ನು ಪಡೆಯಲಾಗುತ್ತಿದೆ ಎಂದು ವಿವರಿಸಿದರು.
ಉಚಿತ ಆರೋಗ್ಯ ತಪಾಸಣೆ ಜತೆಗೆ ಎಲ್.ವಿ.ಪ್ರಸಾದ್ ಐ ಇನ್ಸ್‍ಟಿಟ್ಯೂಟ್ ಸಹಯೋಗದಲ್ಲಿ ಉಚಿತವಾಗಿ ನೇತ್ರ ತಪಾಸಣೆಯನ್ನು ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನೇತ್ರ ತಪಾಸಣೆ ಮಾಡಿಕೊಳ್ಳಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಶಸ್ತ್ರಚಿಕಿತ್ಸೆಯುಳ್ಳ ಫಲಾನುಭವಿಗಳನ್ನು ಆಯ್ಕೆ ಮಾಡಿ, ಮತ್ತೊಂದು ದಿನ ನಿಗದಿಪಡಿಸಿ ಶಸ್ತ್ರಚಿಕಿತ್ಸೆಯನ್ನೂ ಉಚಿತವಾಗಿ ಮಾಡಿಸಲಾಗುವುದು. ಬೆಳಗ್ಗೆ 8.30 ರಿಂದ ಆರಂಭವಾಗಿದ್ದ ಉಚಿತ ಆರೋಗ್ಯ ತಪಾಸಣೆಯು, ಸಂಜೆ 4 ಗಂಟೆವರೆಗೆ ನಿರಂತರವಾಗಿ ನಡೆದಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಶಿಬಿರದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದರು.
ಈಗಾಗಲೇ ನಮ್ಮದೇ ಆದ ಖಾಸಗಿ ಶಾಲೆಯಲ್ಲಿ ಪ್ರತಿವರ್ಷ ಅಂದಾಜು 10 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಗೂ ಕಡಿಮೆ ಶುಲ್ಕಕ್ಕೆ ದಾಖಲಾತಿ ಕಲ್ಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಅದರಂತೆ ಇದೀಗ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದವರು ತಿಳಿಸಿದರು.
ಶಿಬಿರದಲ್ಲಿ ಡಾ. ಶ್ರೀಧರ್ ಮಾಚಿನೇನಿ, ಡಾ. ರೇಖಾ, ಡಾ. ರಾಜೇಶ್, ಡಾ.ರಾಘವೇಂದ್ರ, ಡಾ.ರಮೇಶ್, ಡಾ. ಗ್ಯಾನ್ ಅಭಿನಾಶ್, ಡಾ.ಭಾವನಾ, ಎಲ್‍ವಿ ಪ್ರಸಾದ್ ಐ ಇನ್ಸ್‍ಟಿಟ್ಯೂಟ್‍ನ ನೇತ್ರ ತಜ್ಞರ ತಂಡ, ಇಎನ್‍ಟಿ ತಜ್ಞವೈದ್ಯ ಡಾ. ಮಾಣಿಕ್ಯರಾವ್ ಸೇರಿದಂತೆ ಇತರರಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ನಾರಾಯಣರಾವ್, ಎಂ.ಜಯಸಿಂಹ, ಎಸ್.ಬಸವರಾಜ್, ಅಬ್ದುಲ್ ಉಮರ್, ಎಂ.ರಾಘವೇಂದ್ರ, ರಘುನಾಥ್, ಜೈನುಸಾಬ್, ಅಶ್ವತ್, ಷಡಕ್ಷರ ಬಾಬು, ಎಂ.ಶಿವರಾಮಕೃಷ್ಣ, ಸುರೇಶ್, ಮೈನುದ್ದೀನ್, ಅಶೋಕ್ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
