ತಾ.ಪಂ. ಕೆ.ಡಿ.ಪಿ. ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕಾರಿಗಳಿಗೆ ತರಾಟೆ

ಶಿರಾ

      ಕಳೆದ 10 ವರ್ಷಗಳಿಂದಲೂ ಪ್ರತಿಯೊಂದು ತಾ.ಪಂ. ಪ್ರಗತಿ ಪರಿಶೀಲನಾ ಸಭೆ ಹಾಗೂ ಸರ್ವ ಸದಸ್ಯರ ಸಭೆಗಳಲ್ಲಿ ಬರಿ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳದ್ದೆ ಕಾರುಬಾರು. ಸಭೆ ಆರಂಭಗೊಂಡರೆ ಸಾಕು ಆಸ್ಪತ್ರೆಯ ನೂರೆಂಟು ಸಮಸ್ಯೆಗಳು ಹೆಡೆ ಬಿಚ್ಚಿಕೊಳ್ಳುತ್ತವೆ. ಅಧಿಕಾರಿಗಳೂ ಹಾಗೆಯೇ ಈಡೇರಿಸುವ ಆಶ್ವಾಸನೆಗಳನ್ನು ನೀಡುತ್ತಲೇ ಬರುತ್ತಾರೆಯೆ ಹೊರತು ಯಾವೊಂದು ಸಮಸ್ಯೆಗಳೂ ಈಡೇರುವುದೆ ಇಲ್ಲ.

       ಶುಕ್ರವಾರ ನಡೆದ ಕೆ.ಡಿ.ಪಿ. ಸಭೆಯಲ್ಲೂ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಅಧ್ಯಕ್ಷ-ಉಪಾಧ್ಯಕ್ಷರಷ್ಟೆ ಅಲ್ಲದೆ, ಸ್ಥಾಯಿ ಸಮಿತಿಯ ಅಧ್ಯಕ್ಷರೂ ಸೇರಿಕೊಂಡು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

          ಶುಕ್ರವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಂದಿನಂತೆ ಸಮುದಾಯ ಆರೋಗ್ಯ ಕೇಂದ್ರದ ಬಗ್ಗೆ ವ್ಯಾಪಕ ಚರ್ಚೆಯೇ ನಡೆಯಿತು. ಕಳೆದ 10 ವರ್ಷಗಳಿಂದಲೂ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಕ್ಷಾಂತರ ರೂಗಳನ್ನು ತೆತ್ತು ಸರ್ಕಾರ ಸ್ಕ್ಯಾನಿಂಗ್ ಯಂತ್ರವೊಂದನ್ನು ಮಂಜೂರು ಮಾಡಿದ್ದು ಈ ಯಂತ್ರಕ್ಕೆ ಚಾಲನೆ ನೀಡುವ ಒಬ್ಬ ವೈದ್ಯರನ್ನು ತಂದು ಹಾಕಿಕೊಳ್ಳುವ ಜರೂರತ್ತು ಈ ಕ್ಷೇತ್ರದ ಯಾವ ರಾಜಕಾರಣಿಗಳಿಗೂ ಇಲ್ಲವಾಗಿದೆ.
ಪ್ರತಿಯೊಂದು ಸಭೆಗಳಲ್ಲೂ ಕಳೆದ 10 ವರ್ಷಗಳಿಂದ ನಡೆದ ಪ್ರತಿಯೊಂದು ಸಭೆಗಳಲ್ಲೂ ಸ್ಕ್ಯಾನಿಂಗ್ ಯಂತ್ರದ ಚರ್ಚೆ ಇದ್ದೇ ಇರುತ್ತದೆ. ಶುಕ್ರವಾರ ನಡೆದ ಸಭೆಯಲ್ಲೂ ತಾ.ಪಂ. ಅಧ್ಯಕ್ಷರು ಸ್ಕ್ಯಾನಿಂಗ್ ಯಂತ್ರದ ಬಗ್ಗೆ ಅಧಿಕಾರಿಗಳ ಗಮನ ಸೆಳೆದಾಗ ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ವೈದ್ಯರ ನಿರ್ಲಕ್ಷ್ಯಕ್ಕೆ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು.

        ಸ್ಕ್ಯಾನಿಂಗ್ ಯಂತ್ರ ಮಂಜೂರಾಗಿ 10 ವರ್ಷವಾಯ್ತು. ಈವರೆಗೂ ಸರ್ಕಾರಿ ಆಸ್ಪತ್ರೆಯ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರಕ್ಕೆಂದು 800 ರಿಂದ 1,000 ರೂ. ಹಣ ತೆತ್ತು ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಇನ್ನೂ ತಪ್ಪಿಲ್ಲ. ಪ್ರತಿ ಸಭೆಯಲ್ಲೂ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಕಳೆದ 2 ವರ್ಷದ ಹಿಂದೆಯೇ ಹಿಂದಿನ ಕಾನೂನು ಸಚಿವ ಜಯಚಂದ್ರ ಅವರು ಇನ್ನೆರಡು ದಿನದಲ್ಲಿ ಸ್ಕ್ಯಾನಿಂಗ್ ಯಂತ್ರದ ತಜ್ಞರನ್ನು ವರ್ಗಾವಣೆ ಮಾಡಿಕೊಳ್ಳುವುದಾಗಿ ಇದೇ ಸಭೆಯಲ್ಲಿ ಹೇಳಿ ಹೋಗಿದ್ದರೂ ಈತನಕವೂ ತಜ್ಞ ವೈದ್ಯರ ಸುಳಿವಿಲ್ಲ ಎಂದು ಲೇವಡಿ ಮಾಡಿದರು.

        ಸ್ಕ್ಯಾನಿಂಗ್ ಯಂತ್ರದ ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಬರೆದ ಪತ್ರಗಳನ್ನು ಸಭೆಯ ಮುಂದಿಟ್ಟ ಆಸ್ಪತ್ರೆಯ ಸಿಬ್ಬಂದಿ ಇದರಲ್ಲಿ ನಮ್ಮ ತಪ್ಪೇನು ಇಲ್ಲ ಎಂಬುದನ್ನು ಸಾಬೀತುಪಡಿಸಿಕೊಂಡ ನಂತರ, ಅದೇ ಆಸ್ಪತ್ರೆಯ ಮತ್ತಷ್ಟು ಸಮಸ್ಯೆಗಳನ್ನು ತಾ.ಪಂ. ಅಧ್ಯಕ್ಷೆ ಹಂಸವೇಣಿ ಸಭೆಯ ಮುಂದಿಟ್ಟರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯರುಗಳು ಗರ್ಭಿಣಿ ಮಹಿಳೆಯ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಸರಳವಾಗಿ ಆಗುವ ಹೆರಿಗೆಯನ್ನು ನಿರ್ವಹಣೆ ಮಾಡಲಾಗದೆ ಸಿಜರಿನ್ ನೆಪದಲ್ಲಿ ಖಾಸಗಿ ಆಸ್ಪತ್ರೆಗೆ ಕಳಿಸುತ್ತಾರೆ ಎಂದು ಆರೋಪಿಸಿದರು.

        ಶಿರಾ ಆಸ್ಪತ್ರೆಯಲ್ಲಿ ಹೆರಿಗೆ ಕಷ್ಟವಾಗುತ್ತೆ, ಸಿಜರಿನ್ ಮಾಡಬೇಕಾಗುತ್ತೆ ಎಂದು ಮರಳಿ ಕಳಿಸಿದ ಅದೆಷ್ಟೋ ಹೆರಿಗೆಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸರಳವಾಗಿಯೇ ಆಗಿವೆ. ಬಡ ರೋಗಿಗಳ ಜೊತೆ ವೈದ್ಯರು ತಾತ್ಸಾರದ ಚಿಕಿತ್ಸೆ ಮಾಡಬಾರದು ಎಂದರು.
ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಯು ಹೆದ್ದಾರಿಯಲ್ಲಿರುವುದರಿಂದ ಅನೇಕ ಅಪಘಾತಗಳಿಂದ ಸಾವು ನೋವುಗಳಾಗುತ್ತವೆ. ಈ ಆಸ್ಪತ್ರೆಯಲ್ಲಿನ ಶವಾಗಾರದಲ್ಲಿ ಒಂದು ವಿದ್ಯುತ್ ದೀಪವೂ ಇಲ್ಲ. ಮರಣೋತ್ತರ ಪರೀಕ್ಷೆ ಮಾಡುವಾಗ ಈ ಆಸ್ಪತ್ರೆಯ ಸುತ್ತಲೂ ಶುಚಿತ್ವವೂ ಇಲ್ಲ. ಇಷ್ಟಕ್ಕೂ ಆಸ್ಪತ್ರೆಯ ಕಟ್ಟಡದ ಹಿಂದೆ ಹಾಗೂ ಮುಂಭಾಗದಲ್ಲಿ ರೋಗಿಗಳು ಓಡಾಡದಂತೆ ಅಶುಚಿತ್ವವಿದ್ದು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಉಪಾಧ್ಯಕ್ಷ ರಂಗನಾಥಗೌಡ ದೂರಿದರು.

         ಸದರಿ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೀಗಿಸುವುದಾಗಿ ಸಭೆಗೆ ಆಗಮಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಭರವಸೆ ನೀಡಿದರೂ ಕೂಡಾ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸದರಿ ಸಮಸ್ಯೆಗಳು ನೀಗಿಸುವ ವಿಶ್ವಾಸ ವ್ಯಕ್ತವಾಗಲಿಲ್ಲ.

ಜಲಾನಯನ ಯೋಜನಾ ಅನುದಾನ ಏನಾಯ್ತು?:

       ತಾಲ್ಲೂಕಿನಾದ್ಯಂತ ಪ್ರಸಕ್ತ ವರ್ಷ ಮಳೆ ಕೈಕೊಟ್ಟಿದೆ. ಈ ನಡುವೆ ನೀರಾವರಿ ಬೆಳೆಗಳು ಉತ್ತಮವಾಗಿದ್ದು ಬೀಜ, ರಸ ಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ರಂಗನಾಥ್ ಸಭೆಗೆ ತಿಳಿಸಿದರು.

         ಮಳೆ ಕೈ ಕೊಟ್ಟಿದೆ ನಿಜ ಆದರೆ ಕಳೆದ ವರ್ಷ ತಮ್ಮ ಇಲಾಖೆಗೆ ಮಂಜೂರಾದ ಜಲಾನಯನ ಯೋಜನಾ ಅನುದಾನವಾದ ಸುಮಾರು 2 ಕೋಟಿ 40 ಲಕ್ಷ ರೂಗಳಷ್ಟು ಅನುದಾನ ಖರ್ಚಾದ ಬಗ್ಗೆ ತಾ.ಪಂ. ಸದಸ್ಯರಿಗೆ ಕಿಂಚಿತ್ತೂ ಮಾಹಿತಿ ಇಲ್ಲ. ಮೊದಲು ಮಾಹಿತಿ ಕೊಡಿ ಎಂದು ಉಪಾಧ್ಯಕ್ಷ ರಂಗನಾಥಗೌಡ ಪ್ರಶ್ನಿಸಿದರು.

         ಮಂಜೂರಾದ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಗ್ರಾಮವಾರು ಹಾಗೂ ಸರ್ವೇ ನಂಬರ್‍ವಾರು ನೀಡಲಾಗಿದೆ. ಯಾವುದೇ ಲೋಪಗಳಾಗಿಲ್ಲ ಎಂದಾಗ ಮುಂದಿನ ಸಭೆಯಲ್ಲಿ ಎಲ್ಲಾ ಫಲಾನುಭವಿಗಳ ಪಟ್ಟಿ ನೀಡುವಂತೆ ರಂಗನಾಥಗೌಡ ಸೂಚನೆ ನೀಡಿದರು.

ಹಾಸ್ಟೆಲ್ ಅಧಿಕಾರಿ ನಿರ್ಲಕ್ಷ್ಯ:

         ತಾಲ್ಲೂಕಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ದಿನ ನಿತ್ಯದ ಆಹಾರ ನೀಡುವಿಕೆಯಲ್ಲಿ ನಿಯಮಪಾಲನೆ ಮಾಡುತ್ತಿಲ್ಲ. ಬಯೋಮೆಟ್ರಿಕ್ ದಾಖಲಾತಿ ಒಂದು ರೀತಿ ಇದ್ದರೆ ಹಾಜರಿರುವ ಮಕ್ಕಳ ಸಂಖ್ಯೆಯೇ ಬೇರೆ ಇರುತ್ತದೆ. ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ಪೋಲಾಗುತ್ತಿದ್ದು ಇದಕ್ಕೆ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದು ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಬಿ.ಸಿ.ಎಂ. ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

          ತಾಲ್ಲೂಕಿನ ಎಲ್ಲಾ ಹಾಸ್ಟೆಲ್‍ಗಳೂ ಉತ್ತಮವಾಗಿ ನಡೆಯುತ್ತಿವೆ. ಒಮ್ಮೆ ನೀವು ಭೇಟಿ ನೀಡಿ ಎಂದು ಇಲಾಖೆಯ ಅಧಿಕಾರಿ ಭಾನುಮತಿ ಅಧ್ಯಕ್ಷರ ಪ್ರಶ್ನೆಗೆ ಪ್ರತಿಕ್ರಿಯಿಸಿದಾಗ ಸಿಡಿಮಿಡಿಗೊಂಡ ಅಧ್ಯಕ್ಷರು ನಾನು ಅನೇಕ ಹಾಸ್ಟೆಲ್‍ಗಳ ಭೇಟಿ ಮಾಡಿದ್ದೇನೆ. ಬುಕ್ಕಾಪಟ್ಟಣ, ದ್ವಾರನಕುಂಟೆ, ಗೊಲ್ಲಹಳ್ಳಿ ಹಾಸ್ಟೆಲ್‍ಗಳಲ್ಲಿ ಬಯೋಮೆಟ್ರಿಕ್‍ನಂತೆ ಹಾಜರಾತಿ ಇರೋದೇ ಇಲ್ಲ. ಭಾನುವಾರದ ದಿನ ಅನೇಕ ಮಕ್ಕಳು ತಮ್ಮ ಗ್ರಾಮಕ್ಕೆ ಹೋಗುವುದು ಸಹಜವಾಗಿದ್ದು ಆ ದಿನವೂ ಪೂರ್ಣ ಪ್ರಮಾಣದಲ್ಲಿ ಹಾಜರಾತಿ ತೋರಿಸಿ ಹಣ ಗುಳುಂ ಮಾಡುವ ಯತ್ನ ನಡೆಯುತ್ತಿದೆ. ಮಂಜೂರಾದ ಕಂಪ್ಯೂಟರ್‍ಗಳನ್ನು ಮಕ್ಕಳಿಗೆ ನೀಡದೆ ಕೊಠಡಿಯಲ್ಲಿ ಕೂಡಿ ಹಾಕಿದ್ದೀರಿ ಏಕೆ? ಎಂದು ಅಧ್ಯಕ್ಷರು ದೂರಿದರು.

            ಹಾಸ್ಟೆಲ್‍ನಲ್ಲಿರುವ 10ನೇ ತರಗತಿಯ ಮಕ್ಕಳಿಗೆ ಪ್ರತಿ ವರ್ಷವೂ ಪಠ್ಯಕ್ರಮದ ಗೈಡ್‍ಗಳನ್ನು ಉಚಿತವಾಗಿ ನೀಡಬೇಕು. ಆದರೆ ಈ ವರ್ಷ ನೀಡಿಯೇ ಇಲ್ಲ ಏಕೆ? ಎಂದು ಅಧ್ಯಕ್ಷರು ಪ್ರಶ್ನಿಸಿದಾಗ, ಪಠ್ಯಕ್ರಮ ಬದಲಾದ ಬಗ್ಗೆ ಅಧಿಕಾರಿ ಮಾಹಿತಿ ನೀಡಿದರು. ಪಠ್ಯಕ್ರಮ ಬದಲಾಗಿದ್ದು ಕಳೆದ ವರ್ಷ ಆದರೆ ಈ ವರ್ಷವೇಕೆ ನೀಡಿಲ್ಲ ಎಂದಾಗ ಗೈಡ್‍ಗಳು ಪೂರೈಕೆಯಾಗಿಲ್ಲ, ಕಂಪ್ಯೂಟರ್‍ಗಳನ್ನು ಮಕ್ಕಳಿಗೆ ಕೂಡಲೇ ನೀಡಲಾಗುತ್ತದೆ ಎಂದು ಅಧಿಕಾರಿ ಭಾನುಮತಿ ಉತ್ತರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap