ದಾವಣಗೆರೆ :
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಯಾವುದೇ ರೀತಿಯ ಕೊರತೆ, ಸಮಸ್ಯೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಪ್ರತಿಯೊಬ್ಬ ರೋಗಿಗೂ ಉತ್ತಮ ಗುಣವಟ್ಟದ ಚಿಕಿತ್ಸೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಡಳಿತ ಭವವನದಲ್ಲಿ ಕೋವಿಡ್-19 ಕುರಿತು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ನೇಮಕಗೊಂಡಿರುವ ವಿವಿಧ ಅಧಿಕಾರಿಗಳ ನೇತೃತ್ವದ ತಂಡಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದರು.
ಕೊರೊನಾ ವೈರಸ್ ಸೋಂಕು ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ಈ ಸೋಂಕಿನ ವಿಚಾರದಲ್ಲಿ ಸೋಂಕಿನ ಭಯಕ್ಕಿಂತ ಅಪಪ್ರಚಾರಗಳೇ ಹೆಚ್ಚು ಭಯ ಪಡಿಸುತ್ತಿವೆ. ಹಾಗಾಗಿ ಐಇಸಿ ತಂಡ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಇಲಾಖೆ ಜಂಟಿಯಾಗಿ ಕ್ರಮವಹಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
‘ಕೊರೊನಾ ವೈರಸ್ ಬಗ್ಗೆ ಭಯಬೇಡ, ಎಚ್ಚರವಿರಲಿ’ ಎಂಬ ಸಂದೇಶದೊಂದಿಗೆ ವಾಹನಗಳಲ್ಲಿ ಬ್ಯಾನರ್‍ಗಳ ಮೂಲಕ, ಭಿತ್ತಿಪತ್ರಗಳು, ಕರಪತ್ರಗಳು, ಸೇರಿದಂತೆ ಸ್ಥಳೀಯ ಕೇಬಲ್ ಟಿವಿಗಳಲ್ಲಿ ಹೆಚ್ಚು ಹೆಚ್ಚು ಧೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ಮಾಡುವುದರತ್ತ ಗಮನಹರಿಸಬೇಕು.
ಜೊತೆಗೆ ಧ್ವನಿವರ್ಧಕ ಘೋಷಣೆಗಳ ವ್ಯವಸ್ಥೆಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ, ಜಿಲ್ಲಾಡಳಿತ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ತಿಳಿಸಬೇಕು ಎಂದು ಹೇಳಿದರು.
ಹೋಂ ಐಸೋಲೆಷನ್ ನಲ್ಲಿರುವವರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವುದು ಮುಖ್ಯವಾಗಿದೆ. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಪ್ರತಿನಿತ್ಯ ಅವರ ತಪಾಸಣೆ ನಡೆಸಬೇಕು. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಗಮನ ಹರಿಸಬೇಕು. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‍ಗಳು ಎಲ್ಲೆಡೆ ಕೆಲಸ ನಿರ್ವಹಿಸುತ್ತಿವೆ. ಕೋವಿಡ್ ಪರೀಕ್ಷೆಗಾಗಿ ಮಾದರಿಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಸಂಗ್ರಹಿಸುತ್ತಿದ್ದು, ಅಗತ್ಯವಿದ್ದಲ್ಲಿ ಮಾತ್ರ ಬೇರೆಡೆಗೆ ಕಳುಹಿಸಿ ಕೊಡಲಾಗುತ್ತಿದೆ. ಹೋಂ ಐಸೋಲೇಷನ್‍ನವರ ಬಗ್ಗೆ ಜಾಗೃತಿ ವಹಿಸಲು ತಂಡಗಳ ರಚನೆ ಮಾಡಲಾಗಿದೆ. ಅವರು ಅವರಿಗೆ ಬೇಕಾದ ಮೆಡಿಷಿನ್ ಒದಗಿಸುವ ಹಾಗೂ ಆರೋಗ್ಯದ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಹೋಂ ಐಸೋಲೇಷನ್‍ನವರ ಬಗ್ಗೆ ವರದಿ ನೀಡಲು ತಂಡಗಳನ್ನು ನೇಮಕ ಮಾಡಲಾಗಿದೆ. ಆದರೆ ಅವರಿಗೆ ವೆಹಿಕಲ್ ವ್ಯವಸ್ಥೆಯ ತೊಂದರೆ ಕುರಿತು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್, ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಡಾ,ಮೀನಾಕ್ಷಿ, ಡಾ.ರವಿ, ಡಾ.ಕಾಳಪ್ಪ, ಡಾ.ಸುಭಾಷ್‍ಚಂದ್ರ, ತಹಶೀಲ್ದಾರ್‍ಗಳು, ತಾಲ್ಲೂಕು ಟಿಎಚ್‍ಓಗಳು ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ