ಕೋಳಿ ಅಂಗಡಿ ತ್ಯಾಜ್ಯವನ್ನು ಕಸದ ಗಾಡಿಗೆ ನೀಡಿ : ಡಾ.ಸಂತೋಷ್

ದಾವಣಗೆರೆ :

     ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಿಸಲು ಪ್ರಾಯೋಗಿಕವಾಗಿ ನಿಯೋಜಿಸಿರುವ ವಾಹನಗಳಿಗೆ ನೀಡುವ ಮೂಲಕ ನಗರದ ಮಾಂಸದ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಹಾಗೂ ತಾಜಾ ಮಾಂಸ ಮಾರಾಟ ಮಾಡಬೇಕೆಂದು ಪಶು ವೈದ್ಯಕೀಯ ಸೇವೆಯ ಸಹಾಯಕ ನಿರ್ದೇಶಕ ಡಾ.ಸಂತೋಷ್ ಅವರು ಮಾಂಸ ಮತ್ತು ಮೀನು ಮಾರಾಟಗಾರರಿಗೆ ಸೂಚಿಸಿದರು.

     ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಸಂಜೆ ಕುರಿ, ಕೋಳಿ, ಮೀನು ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಮರ್ಪಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಮಾಂಸದಂಗಡಿಗಳ ಮಾಲೀಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಕುರಿ, ಕೋಳಿ ಮತ್ತು ಮೀನು ಸೇರಿ ಒಟ್ಟು 238 ಮಾಂಸದ ಮಾರಾಟ ಅಂಗಡಿಗಳಿವೆ. ಈ ಅಂಗಡಿಗಳ ಪರಿವೀಕ್ಷಣೆಗೆ ತೆರಳಿದಾಗ ಮುಖ್ಯವಾಗಿ ಕಂಡುಬರುವ ಅಂಶ ಸ್ವಚ್ಚತೆ ಕೊರತೆಯಾಗಿದೆ.

    ಆದ್ದರಿಂದ ಪಾಲಿಕೆ ವತಿಯಿಂದ ಮಾಂಸದ ತ್ಯಾಜ್ಯ ಸಂಗ್ರಹಣೆಗಾಗಿ ಪ್ರಸ್ತುತ ಪ್ರಾಯೋಜಿಕವಾಗಿ 2 ವಾಹನಗಳನ್ನು ಬಿಡಲಾಗಿದ್ದು, ಮಾಂಸದಂಗಡಿ ನಡೆಸುವವರು ಈ ವಾಹನಗಳಿಗೆ ತ್ಯಾಜ್ಯ ನೀಡುವ ಮೂಲಕ ಶುಚಿತ್ವ ಕಾಪಾಡಲು ಕೈಜೋಡಿಸಬೇಕು. ಮಾಂಸಕ್ಕೆ ದೂಳು ಪ್ರದೂಷಣೆ ಆಗದಂತೆ ಅಂಗಡಿ ಮುಂಭಾಗ ಗ್ಲಾಸ್‍ನ್ನು ಅಳವಡಿಸಬೇಕೆಂದು ಸೂಚನೆ ನೀಡಿದರು.

    ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಶಂಕರ್ ಎಂಬುವವರಿಗೆ ಜವಾಬ್ದಾರಿ ವಹಿಸಲಾಗಿದ್ದು, ಈಗ ಅವರ ಎರಡು ವಾಹನಗಳು ತ್ಯಾಜ್ಯ ಸಂಗ್ರಹಿಸಲಿವೆ. ಇದಕ್ಕೆ ಪ್ರತಿ ಅಂಗಡಿಗಳು ಮಾಸಿಕ 750 ರೂ. ಶುಲ್ಕ ನೀಡಬೇಕು. ಮಾಂಸ ಕತ್ತರಿಸಿ ರಕ್ತವನ್ನು ಚರಂಡಿಗೆ ಬಿಡುತ್ತಿರುವುದರಿಂದ ರಕ್ತ ಹೆಪ್ಪುಗಟ್ಟಿ ಚರಂಡಿಗಳು ಬ್ಲಾಕ್ ಆಗುತ್ತಿರುವುದು ಕಂಡು ಬರುತ್ತಿದೆ. ಅಲ್ಲದೇ, ಮಾಂಸ ತಿನ್ನಲು ಬರುವ ನಾಯಿಗಳ ಹಾವಳಿಯೂ ಹೆಚ್ಚಿದೆ. ಆದ್ದರಿಂದ ತ್ಯಾಜ್ಯಗಳನ್ನು ಕಡ್ಡಾಯವಾಗಿ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ತಂದು ಹಾಕಬೇಕು ಎಂದು ಸಲಹೆ ನೀಡಿದರು.

    ತ್ಯಾಜ್ಯ ಸಂಗ್ರಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಶಂಕರ್ ಮಾತನಾಡಿ, ನಾವು ಬೆಳಿಗ್ಗೆ ಬಂದು ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸುತ್ತೇವೆ. ಎಂದಾಗ ಕೋಳಿ ಅಂಗಡಿಗಳ ಸಂಘದ ಅಧ್ಯಕ್ಷ ಶಂಶುದ್ದೀನ್ ತಬರೇಜ್(ಚಾರ್ಲಿ), ರಾತ್ರಿ ವೇಳೆ ತ್ಯಾಜ್ಯ ಸಂಗ್ರಹಿಸಿದರೆ ಉತ್ತಮ. ಮರುದಿನ ಬೆಳೆಗ್ಗೆಗೆ ತ್ಯಾಜ್ಯ ದುರ್ವಾಸನೆ ಬರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದರು.

    ಮಾಂಸದಂಗಡಿ ಮಾಲೀಕ ಸುರೇಶ್ ಮಾತನಾಡಿ, ನಗರದಲ್ಲಿ ಸುಮಾರು 150 ಕೋಳಿ ಮಾಂಸದಂಗಡಿಗಳಿದ್ದು, ಎರಡು ತ್ಯಾಜ್ಯ ಸಂಗ್ರಹ ಗಾಡಿ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಬೇಕು. ಹಾಗೂ ತಿಂಗಳಿಗೆ 750 ಶುಲ್ಕ ಹೆಚ್ಚಾಯಿತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

     ಕೋಳಿ ಮಾಂಸದಂಗಡಿಯ ಮುಸ್ತಾಕ್ ಮಾತನಾಡಿ, ಬಹುತೇಕ ಎಲ್ಲ ಅಂಗಡಿಗಳ ತ್ಯಾಜ್ಯ ರಾತ್ರಿ ಹೊತ್ತಿಗೆ ಸಂಗ್ರಹವಾಗುತ್ತದೆ. ಆಗಲೇ ವಿಲೇ ಆದರೆ ಒಳ್ಳೆಯದು. ಬೆಳಿಗ್ಗೆ ಸಂಗ್ರಹಿಸಿದರೆ ದುರ್ವಾಸನೆ ಬೀರಲಿದೆ ಎಂದರು.

     ಕುರಿ ಮಾಂಸದಂಗಡಿಗಳ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಪಿ ಕಲಾಲ್ ಮಾತನಾಡಿ, ನಗರದಲ್ಲಿ 65 ಕುರಿ ಸ್ಟಾಲ್‍ಗಳಿವೆ. ಸ್ಟಾಲ್‍ಗಳಲ್ಲಿ ಮಾಂಸ ಕತ್ತರಿಸುವುದಿಲ್ಲ ಬದಲಾಗಿ ಸ್ಲಾಟರ್ ಹೌಸ್‍ಗಳಲ್ಲಿ ಕತ್ತರಿಸಲಾಗುತ್ತದೆ. ಆದರೆ, ನಗರದಲ್ಲಿ ವ್ಯವಸ್ಥಿತವಾದ ಸ್ಲಾಟರ್ ಹೌಸ್‍ಗಳಿಲ್ಲ. ಪಾಲಿಕೆ ವತಿಯಿಂದ ನೀಡಲಾಗಿರುವ ಮಳಿಗೆಗಳೂ ಹಸಿ ಇಟ್ಟಿಗೆಯಿಂದ ಕಟ್ಟಿರುವ 25 ರಿಂದ 30 ವರ್ಷ ಹಳೆಯದಾದ ಕೊಠಡಿಗಳಾಗಿದ್ದು ಹಾಳಾಗಿವೆ. ಆದ್ದರಿಂದ ಕುರಿ ಮಾಂಸ ಕತ್ತರಿಸಲು ಸ್ಲಾಟರ್ ಹೌಸ್ ಮತ್ತು ದೊಡ್ಡಿ ಅವಶ್ಯಕತೆ ಇದೆ ಎಂದರು.

     ಸಹಾಯಕ ನಿರ್ದೇಶಕ ಡಾ.ಸಂತೋಷ್ ಪ್ರತಿಕ್ರಿಯಿಸಿ, ಸ್ಲಾಟರ್ ಹೌಸ್ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಆದರೆ ಈ ಕಟ್ಟಡ ನಿರ್ಮಿಸಲು ಅನೇಕ ನಿಯಮಾವಳಿಗಳಿರುವ ಪ್ರಯುಕ್ತ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತದೆ. ಮಾಂಸ ಮಾರಾಟ ವೇಳೆ ಪ್ಲಾಸ್ಟಿಕ್ ಚೀಲ ಬಳಸುವಂತಿಲ್ಲ. ಆದ್ದರಿಂದ ಮಾಂಸವನ್ನು ಟಿಶ್ಯೂ ಪೇಪರ್‍ನಲ್ಲಿ ಸುತ್ತಿ ಪೇಪರ್ ಬ್ಯಾಗ್‍ನಲ್ಲಿ ನೀಡಬೇಕು ಎಂದರು.

    ಪರಿಸರ ಅಭಿಯಂತರರಾದ ಕುಮಾರಿ ಚಿನ್ಮಯಿ ಮಾತನಾಡಿ, ಎಲ್ಲೆಡೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ನಗರಾದ್ಯಂತ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ದಾಳಿ ನಡೆಸಿ, ವಶ ಪಡಿಸಿಕೊಳ್ಳಲಾಗುತ್ತಿದೆ. ನಿಮಗೆ ಪ್ಲಾಸ್ಟಿಕ್ ಎಲ್ಲಿ ಸಿಗುತ್ತಿದೆ ಮಾಹಿತಿ ನೀಡಿ ಎಂದರು.
ಡಾ.ಸಂತೋಷ್ ಪ್ರತಿಕ್ರಿಯಿಸಿ, ಮಾಂಸದಂಗಡಿಗಳಿಗೆ ಪ್ಲಾಸ್ಟಿಕ್‍ಗೆ ಪರ್ಯಾಯವಾದ ವಸ್ತುವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.

ಟ್ರೇಡ್ ಲೈಸೆನ್ಸ್ ಕಡ್ಡಾಯ :

    ಡಾ.ಸಂತೋಷ್ ಮಾತನಾಡಿ, ಎಲ್ಲ ಅಂಗಡಿಯವರು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಮಾಡಿಸಬೇಕು. ಮಾಂಸದಂಗಡಿಗಳ ಸಂಘದವರು ಈ ಬಗ್ಗೆ ಜವಾಬ್ದಾರಿ ವಹಿಸಿಕೊಂಡು ಎಲ್ಲರ ಟ್ರೇಡ್ ಲೈಸೆನ್ಸ್ ಮಾಡಿಸಲು ಸಹಕರಿಸಬೇಕು ಎಂದರು.ಅಂಗಡಿ ಮಾಲೀಕರು, ಟ್ರೇಡ್ ಲೈಸೆನ್ಸ್ ಮಾಡಿಸುವ ಪ್ರಕ್ರಿಯೆಯನ್ನು ಸರಳೀಗೊಳಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಆರೋಗ್ಯ ನಿರೀಕ್ಷಕರು ಪ್ರತಿಕ್ರಿಯಿಸಿ, ಟ್ರೇಡ್ ಲೈಸೆನ್ಸ್ ಪ್ರಕ್ರಿಯೆ ಸರಳೀಗೊಳಿಸಲಾಗಿದೆ. ಹಾಗೂ ಅನೇಕ ವರ್ಷಗಳಿಂದ ಬಾಕಿ ಇರುವವರು ಕೂಡ ಬಾಕಿ ಕಟ್ಟಲು ಅನುವು ಮಾಡಿಕೊಡಲಾಗುವುದು ಎಂದರು.ಸಭೆಯಲ್ಲಿ ಕೋಳಿ ಮತ್ತು ಕುರಿಮಾಂಸದ ಅಂಗಡಿ ಮಾಲಿಕರುಗಳು ಉಪಸ್ಥಿತರಿದ್ದರು. ಮಹಾನಗರಪಾಲಿಕೆ ಪ್ರ.ದ.ಸ ವೆಂಕಟೇಶ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link