ಮಿಡಿಗೇಶಿ
ಗ್ರಾಮೀಣ ಪ್ರದೇಶದ ರೈತರು, ಕೂಲಿ ಕಾರ್ಮಿಕರ ಬದುಕು ದುಸ್ತರವಾಗದಿರಲಿ ಎಂದು ಜಾರಿಗೆ ತಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಜೇಬು ತುಂಬಿಸಿಕೊಂಡವರೇ ಹೆಚ್ಚು. ಸರ್ಕಾರಿ ದಾಖಲೆಗಳು ಒಂದಾದರೆ, ವಾಸ್ತವವಾಗಿ ನಡೆದ ಕಾಮಗಾರಿಗಳು ಮತ್ತೊಂದು. ಈ ಯೋಜನೆಯಡಿ ಹಣವನ್ನು ಹೇಗೆ ಲಪಟಾಯಿಸಬಹುದು ಎಂದು ಚಿಂತಿಸಿದವರೇ ಹೆಚ್ಚು. ಹೀಗಾಗಿ ಈ ಯೋಜನೆ ಬಹಳ ವರ್ಷಗಳಿಂದ ಕೆಲವರಿಗೆ ಅನುಕೂಲಕರ ಯೋಜನೆಯಾದರೆ ಮತ್ತೆ ಕೆಲವರು ಇಂದಿಗೂ ಈ ಯೋಜನೆಯ ಪ್ರಯೋಜನದ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.
ಎನ್.ಆರ್.ಇ.ಜಿ.ಎ. ಯೋಜನೆಯ ಅನುದಾನದ ಹಣ ಉಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗವಾಗಿರುವ ಸಂಗತಿಗಳೇ ಹೆಚ್ಚು. ಇದು ಎಲ್ಲ ಕಡೆ ಕಂಡುಬರುವ ಕಟುಸತ್ಯ. ಇದಕ್ಕೆ ಒಂದು ಸಣ್ಣ ಉದಾಹರಣೆ ಎಂಬಂತೆ ಮಧುಗಿರಿ ತಾಲ್ಲೂಕಿನ ಕೆಲವು ಗ್ರಾ.ಪಂ.ಗಳ ಆಡಳಿತ ವೈಖರಿ, ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ.
ಮಧುಗಿರಿ ತಾಲ್ಲೂಕಿನ 39 ಗ್ರಾಮ ಪಂಚಾಯತಿಗಳ ಪೈಕಿ ಒಂದಾದ ಮಿಡಿಗೇಶಿ ಹೋಬಳಿಗೆ ಸೇರಿದ ಬೇಡತ್ತೂರು ಗ್ರಾ.ಪಂ.ನಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದರೆ ಏನೆಲ್ಲಾ ನಡೆದು ಹೋಗಿದೆ ಎಂಬ ಸತ್ಯ ಬೆಳಕಿಗೆ ಬರುತ್ತದೆ. 2018-19ನೇ ಸಾಲಿನ ಮೊದಲನೇ ಹಂತದ ಕಾಮಗಾರಿಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. 1.10.2017 ರಿಂದ 31.3.2018ರವರೆಗಿನ ಕೈಗೊಂಡಿರುವ ಕಾಮಗಾರಿಗಳ ಕಡತ ಹಾಗೂ ಕಚೆÉೀರಿಯ ದಾಖಲಾತಿ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿಗಳು ಈ ಬಗ್ಗೆ ಹಲವು ಅಂಶಗಳನ್ನು ನಮೂದಿಸಿರುವುದು ಬಯಲಾಗಿದೆ.
ಈ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂ.ಗಳ ಅವ್ಯವಹಾರ ಕಂಡು ಬಂದಿದ್ದರೂ ಸಹ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ, ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಲಿ ಯಾವುದೇ ಕ್ರಮ ಜರುಗಿಸಿರುವುದಿಲ್ಲ.
285 ಜನ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಿರುವುದಿಲ್ಲ ಎಂಬ ಅಂಶ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ದೃಢಪಟ್ಟಿರುತ್ತದೆ. ಆದರೆ ಜಾಬ್ ಕಾರ್ಡ್‍ನ ಲೆಕ್ಕದ ಹಣ ಮಾತ್ರ ಡ್ರಾ ಮಾಡಲಾಗಿದೆ. ಓರ್ವ ಕೂಲಿ ಕಾರ್ಮಿಕ ಕೆಲಸ ಮಾಡಲು ಶಕ್ತನಿಲ್ಲ. ಆದರೂ ಸಹ 1632 ರೂ.ಗಳು ಜಮಾ ಆಗಿರುತ್ತವೆ.
ಅವಕಾಶವಿಲ್ಲದ ಕಾಂಪೊನೆಂಟ್‍ಗೆ ಸಾಮಗ್ರಿ ಬಿಲ್‍ನಲ್ಲಿ 643 ರೂ.ಗಳನ್ನು ಪಾವತಿಸಲಾಗಿದೆ. ವೈಯಕ್ತಿಕ ಫಲಾನುಭವಿಯ ಉದ್ಯೋಗ ಚೀಟಿ ಬಳಕೆಯಾಗಿರುವುದಿಲ್ಲ. ಹಲವು ಪ್ರಕರಣಗಳಲ್ಲಿ ಚೆಕ್ ಮೆಸರ್‍ಮೆಂಟ್ ದಾಖಲಿಸದೆ ಎಂ.ಐ.ಎಸ್. ಮಾಡಿ ಬಟವಾಡೆ ಮಾಡಲಾಗಿದೆ. ಈ ಸಂಬಂಧ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆದಿದೆ. ಎಂ.ಬಿ.ಪುಸ್ತಕವನ್ನು ಕಾರ್ಯನಿರ್ವಹಣಾಧಿಕಾರಿಗಳು ದೃಢೀಕರಿಸಿರುವುದಿಲ್ಲ.
ಕಾಮಗಾರಿಗಳಲ್ಲಿ ಈ ರೀತಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದರೂ ಸಹ ಈ ಬಗ್ಗೆ ಕ್ರಮಗಳು ಜರುಗಿಸಿರುವುದಿಲ್ಲ. ಹೀಗಾದರೆ ಜಿಲ್ಲಾ ಪಂಚಾಯಿತಿಯಿಂದ ವರ್ಷಕ್ಕೊಂದು ಬಾರಿ ನಡೆಯುವ ಲೆಕ್ಕ ಪರಿಶೋಧನೆ ಯಾವ ಪುರುಷಾರ್ಥಕ್ಕಾಗಿ ಎಂಬುದು ಹಲವರ ಪ್ರಶ್ನೆ. ಲೆಕ್ಕ ಪರಿಶೋಧನೆಯಲ್ಲಿ ಸಿಕ್ಕಿರುವ ಹಣ ದುರುಪಯೋಗದ ಬಗ್ಗೆ ಕ್ರಮ ಕೈಗೊಂಡು ಮರು ವಸೂಲಿ ಮಾಡದೆ ಹೋದರೆ ಎಸಿಬಿಗೆ ದೂರು ನೀಡಲಾಗುವುದು ಎಂದೂ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
