ಹುಳಿಯಾರು
ಹುಳಿಯಾರಿನ ಬಸ್ ನಿಲ್ದಾಣದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಪಪಂ ದಿನಾಂಕ ನಿಗದಿ ಮಾಡಿದ್ದು ಜ.10 ರ ಬುಧವಾರ ಮುಹೂರ್ತ ಇಟ್ಟಿದೆ. ಈ ತೆರವು ಕಾರ್ಯಾಚರಣೆಯಿಂದ ನೂರಾರು ವ್ಯಾಪಾರಸ್ತರು ಬೀದಿಗೆ ಬೀಳಲಿದ್ದು ತೆರವು ಮಾಡದಿರುವಂತೆ ಕೈ ಮುಗಿದು ಬೇಡುತ್ತಿದ್ದಾರೆ.
ಹೌದು, ಕಳೆದ ಒಂದು ವರ್ಷದಿಂದಲೂ ಅನಧಿಕೃತ ಗೂಡಂಗಡಿಗಳ ತೆರವಿನ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗ ಇದು ಅಂತಿಮ ಹಂತಕ್ಕೆ ಬಂದು ತಲುಪಿದೆ. ಎರಡು ದಿನಗಳ ಹಿಂದಷ್ಟೆ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ಜಿಪಂ ಸದಸ್ಯರು ಪಪಂ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಪಪಂ ಇಳಿಸಿದೆ. ಈಗಾಗಲೇ ಪೊಲೀಸರಿಗೆ ಸಹಕಾರ ನೀಡುವಂತೆ ಪತ್ರ ಸಹ ಮುಖ್ಯಾಧಿಕಾರಿಗಳು ನೀಡಿದ್ದು ಎಲ್ಲರ ಚಿತ್ತ ಈಗ ಬುಧವಾರದತ್ತ ನೆಟ್ಟಿದೆ.
ಹುಳಿಯಾರಿನ ಫುಟ್‍ಪಾತ್‍ನಲ್ಲಿ ಜೀವನ ನಿರ್ವಹಣೆಗೆ ಅಗತ್ಯವಾದ ಬಾಳೆಹಣ್ಣು, ಹೂವು, ಎಲೆಅಡಿಕೆ, ಏರ್ ಸಲೂನ್, ಚಹಾ ಅಂಗಡಿಗಳನ್ನಿಟ್ಟು ನೂರಾರು ಮಂದಿ ವ್ಯಾಪಾರ ಮಾಡುತ್ತಿದ್ದಾರೆ. ಇವರಲ್ಲಿ ಅನೇಕರು ಈ ವ್ಯಾಪಾರ ನಂಬಿಯೇ ಜೀವನ ನಡೆಸುತ್ತಿದ್ದಾರೆ. ಈಗ ಇಲ್ಲಿಂದ ಇವರನ್ನು ಎತ್ತಂಗಡಿ ಮಾಡಿಸಿದಾದಲ್ಲಿ ಹುಳಿಯಾರು ಪಟ್ಟಣದಲ್ಲಿ ವ್ಯಾಪಾರಕ್ಕೆ ಬೇರೆಲ್ಲೂ ಸ್ಥಳ ಇಲ್ಲದ ಕಾರಣ ಅಕ್ಷರಶಃ ಇವರು ಬೀದಿಗೆ ಬೀಳಲಿದ್ದಾರೆ.
ಬಸ್ ನಿಲ್ದಾಣದಲ್ಲಿ ಗೂಡಂಗಡಿ ಇಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆಂದು ಅಂಗಡಿಗಳ ತೆರವಿಗೆ ನಿರ್ಧಾರ ಮಾಡಿದ್ದಾರೆ. ಆದರೆ ರಸ್ತೆ ಇಕ್ಕಟ್ಟಾಗಲು ಪಪಂ ಮಳಿಗೆಯ ಬಾಡಿಗೆದಾರರು ಹಾಗೂ ಖಾಸಗಿ ಅಂಗಡಿಗಳ ಬಾಡಿಕೆದಾರರು ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ತಮ್ಮ ಅಂಗಡಿಗಳನ್ನು ವಿಸ್ತರಿಸಿರುವುದರಿಂದ ತೊಂದರೆಯಾಗಿದೆ. ಅವರ ಒತ್ತುವರಿಯನ್ನು ತೆರವುಗೊಳಿಸಿದರೆ ಸಾರ್ವಜನಿಕರಿಗೆ ಯಾವುದೆ ಸಂಚಕಾರ ಒದಗುವುದಿಲ್ಲ. ಆದರೂ ಅವರನ್ನು ಬಿಟ್ಟು ಗೂಡಂಗಡಿಗಳ ಮೇಲೆ ಕಣ್ಣಿಟ್ಟಿರುವುದು ಪಕ್ಷಪಾತ ಮಾಡಿದಂತಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಳೆದ ಏಳೆಂಟು ವರ್ಷಗಳ ಹಿಂದೆಯೆ ಇವರನ್ನು ತೆರವುಗೊಳಿಸಿ ಇವರೆಲ್ಲರಿಗೂ ಪುನರ್ವಸತಿ ಕಲ್ಪಿಸಿ ವ್ಯಾಪಾರ ಮಾಡಿಕೊಡಲು ಅವಕಾಶ ಕಲ್ಪಿಸಲು ಹುಳಿಯಾರು ಕೆರೆಯ ದಂಡೆಯ ಮೇಲೆ ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸ್ಥಳಾಂತರಿಸದೆ ನಿರ್ಲಕ್ಷ್ಯಿಸಿದ ಪರಿಣಾಮ ಈಗ ಆ ಸ್ಥಳವೂ ಸಹ ವ್ಯಾಪಾರಕ್ಕೆ ಯೋಗ್ಯವಾಗದಂತೆ ಹಾಳಾಗಿ ಹೋಗಿದೆ. ಇಲ್ಲಿಯವರೆವಿಗೂ ಸುಂಕ ಕಟ್ಟಿಸಿಕೊಳ್ಳುತ್ತಿದ್ದ ಪಪಂ ಈಗ ಇವರಿಗೆ ಪುನರ್ ವಸತಿ ಕಲ್ಪಿಸದೆ ತೆರವು ಮಾಡುತ್ತಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆ ಮೂವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಗೂಡಂಗಡಿಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದವರನ್ನು ಈಗ ಎತ್ತಂಗಡಿಗೆ ಹೊರಟಿರುವುದು ಹುಳಿಯಾರು ಪಟ್ಟಣದಲ್ಲಿ ಬಹು ಚರ್ಚಿತ ವಿಷಯವಾಗಿದೆ. ತೆರವಿಗೆ ಗೂಡಂಗಡಿಯವರು ಒಪ್ಪುವರೇ ? ಬಲವಂತದಿಂದ ತೆರವು ಮಾಡಿದರೆ ಮುಂದೆ ಇವರ ಪಾಡೇನು ಎಂಬುದು ಪ್ರಶ್ನೆಯಾಗಿದ್ದು ಬುಧವಾರ ಇದಕ್ಕೆ ಉತ್ತರ ಸಿಗಲಿದೆ.