ದಾವಣಗೆರೆ :
ಬರಗಾಲ ಇದ್ದರೂ ಗೋಶಾಲೆ ತೆರೆಯದ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಬರ ಅಧ್ಯಯನ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಜಿಲ್ಲೆಯಲ್ಲಿ ಬರಗಾಲವಿದ್ದು, ಮೇವಿಗೆ ಸಮಸ್ಯೆ ಇದ್ದರೂ ಗೋಶಾಲೆ ತೆರೆಯಲು ಏಕೆ ಹಿಂದೇಟು ಹಾಕುತ್ತಿದ್ದೀರಿ? ಗೋಶಾಲೆ ತೆರೆದರೆ, ಅದರ ನಿರ್ವಹಣೆಯ ತಲೆನೋವು ಅನುಭವಿಸಬೇಕಾಗುತ್ತದೆ ಎಂದು ಸುಮ್ಮನೆ ಇದ್ದೀರಾ? ರಲ್ಲರೂ ನಾಜೂಕಯ್ಯಗಳಾಗಿ, ಕೆಲಸ ಮಾಡುವುದನ್ನು ಬಿಟ್ಟು ಕಚೇರಿಯಲ್ಲಿ ಫ್ಯಾನಿನ ಕೆಳಗೆ ಸುಮ್ಮನೆ ಕುಳಿತರ ಹೇಗೆ? ಗೋಶಾಲೆ ತೆರೆಯುವಂತೆ ಹೈಕೋರ್ಟ್ ಆದೇಶಿಸಿದ್ದರೂ ಏಕೆ ಇನ್ನೂ ಆರಂಭಿಸಿಲ್ಲ? ಎಂದು ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
ಸಹಜವಾಗಿಯೇ ಮೇವು ಲಭ್ಯವಾಗುತ್ತಿರುವ ಕಡೆಯಲ್ಲಿ ಗೋಶಾಲೆ ತೆರೆಯಬೇಕಾಗಿಲ್ಲ. ಬರಗಾಲ ಇರುವುದರಿಂದ ಈಗಾಗಲೇ ಸಂಕಷ್ಟಕ್ಕೆ ತುತ್ತಾಗಿರುವ ರೈತರಲ್ಲಿ ಹಣ ಕೊಟ್ಟು ಮೇವು ಖರೀದಿಸುವ ಶಕ್ತಿ ಇರುವುದಿಲ್ಲ. ಗೋಶಾಲೆ ತೆರೆಯಲು ನಿಮ್ಮ ಕೈಯಿಂದ ಹಣ ಹಾಕಬೇಕಿಲ್ಲ. ಗೋಶಾಲೆ ತೆರೆದರೆ, ರೈತರ ಬಳಿಯಲ್ಲಿರುವ ದನ-ಕರಗಳು ಉಳಿಯುತ್ತವೆ. ಮೇವು ಸಿಗದೇ ರೈತರು ಜಾನವಾರುಗಳನ್ನು ಮಾರಾಟ ಮಾಡಿದರೆ, ನಿಮ್ಮಿಂದ ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ತಕ್ಷಣವೇ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ವಿಶೇಷ ಕಾಳಜಿ ವಹಿಸಿ, ಗೋಶಾಲೆ ಆರಂಭಿಸಬೇಕು. ಬರಗಾಲದ ಸಂದರ್ಭದಲ್ಲೂ ಕೇವಲ ಕಾನೂನು ನೋಡುತ್ತಾ ಕುಳಿತುಕೊಳ್ಳಬೇಡಿ, ಸಹನಭೂತಿ ತೋರಿಸಿ, ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಗೋಶಾಲೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಗೋಶಾಲೆಗಳನ್ನು ತೆರೆದು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಒಟ್ಟು 45 ರೈತರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 30 ಅರ್ಹ ಪ್ರಕರಣ ವರದಿಯಾಗಿದ್ದು, 30 ಪ್ರಕರಣಗಳಿಗೆ ತಲಾ 5 ಲಕ್ಷ ಸಹಾಯಧನದಂತೆ ಮೃತರ ಕುಟುಂಬದವರಿಗೆ ರೂ.1.50 ಕೋಟಿ ರೂ. ಪರಿಹಾರಧನ ವಿತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮವಾಗಿದೆ, ಮುಂದಿನ ಬಾರಿ ರಾಜ್ಯದಲ್ಲಿ 5 ನೇ ಸ್ಥಾನದಲ್ಲಿರಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಶಾಲೆಗಳಲ್ಲಿ ಬಿಸಿಯೂಟ ನಿಡುತ್ತಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿಗಳು ಬರಗಾಲವಿರುವುದರಿಂದ ಶಾಲಾ ಮಕ್ಕಳ ವಯಸ್ಸಿನ ಯಾವುದೇ ಮಗು ಬಂದರು ಶಾಲೆಗಳಲ್ಲಿ ಊಟ ನೀಡಬೇಕೆಂದು ಡಿಡಿಪಿಐ ಪರಮೇಶ್ವರಪ್ಪ ಅವರಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, 2018-19ನೇ ಸಾಲಿನ ಮಾರ್ಚ್-2018ರ ಅಂತ್ಯಕ್ಕೆ ಜಲಾನಯನ ಅಭಿವೃದ್ದಿ ಇಲಾಖೆಯ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ-ಜಲಾನಯನ ಅಭಿವೃದ್ದಿ ಯೋಜನೆಯಡಿಯಲ್ಲಿ 1624.76 ಲಕ್ಷಗಳು ಸಹಾಯಧನದಡಿ 15 ಚೆಕ್ ಡ್ಯಾಂಗಳು, 165 ಎಲ್.ಆರ್.ಎಸ್ ಗಳು, 2540 ಹೆ.ಕ್ಷೇತ್ರಬದು, ಅರಣ್ಯ ಘಟಕದಡಿಯಲ್ಲಿ 1395 ಹೆ.ನಲ್ಲಿ ನಾಟಿ ಮಾಡಲು 145980 ಅರಣ್ಯ ಸಸಿಗಳ ವಿತರಣೆ, ತೋಟಗಾರಿಕೆ ಘಟಕದಡಿಯಲ್ಲಿ 3488 ಹೆ.ನಲ್ಲಿ 661552 ಸಸಿಗಳನ್ನು ನಾಟಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 135661 ಹೆಕ್ಟೇರ್ ಪ್ರದೇಶದಲ್ಲಿ ಮಳೆಯ ಅಭಾವದಿಂದ ಬೆಳೆಹಾನಿ ಸಂಭವಿಸಿದ್ದು, ರೂ. 8138 ಲಕ್ಷ ಬೆಳೆಹಾನಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂಗಾರು ಹಂಗಾಮಿನಲ್ಲಿ 9280 ಹೇಕ್ಟರ್ ಪ್ರದೇಶದಲ್ಲಿ ಮಳೆ ಅಭಾವದಿಂದಾಗಿ ಬೆಳೆಹಾನಿ ಸಂಭವಿಸಿದ್ದು ರೂ. 587 ಲಕ್ಷ ಬೆಳೆಹಾನಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೇಸಿಗೆ ಹಾಂಗಾಮಿನಲ್ಲಿ 260 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಅಭಾವದಿಂದಾಗಿ ಬೆಳೆಹಾನಿ ಸಂಭವಿಸಿದ್ದು, ರೂ. 35.10 ಲಕ್ಷ ಬೆಳೆಹಾನಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ವಿವಿಧ ಬೆಳೆಗಳ ಹಾಗೂ ವಿವಿಧ ತಳಿಗಳ 16822 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು 71970 ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಿಸಲಾಗಿದೆ 2018-19 ನೇ ಸಾಲಿನ ಹಿಂಗಾರು ಮತ್ತು ಬೆಸಿಗೆ ಹಂಗಾಮಿನಲ್ಲಿ ಜಿಲ್ಲಿಗೆ ಒಟ್ಟು 75593 ಮೆ,ಟನ್ ವಿವಿದ ರಸಗೊಬ್ಬರಗಳ ಬೇಡಿಕೆ ಇರುತ್ತದೆ. ಆನವರಿ ಮಾಹೆಯ ಬೆಡಿಕೆ 13020 ಮೆ,ಟನ್ ಇದ್ದು ಕಾಪು ದಾಸ್ತಾನು ಸೇರಿ ಒಟ್ಟು 22942 ಮೆ.ಟನ್ ರಸಗೊಬ್ಬರಗಳ ದಸ್ತಾನು ಲಭ್ಯವಿರುತ್ತದೆ.
ಇಲ್ಲಿಯವರೆಗೆ ಯಾವುದೇ ರಸಗೊಬ್ಬರದ ಕೊರತೆ ಇಲ್ಲ ಎಂದರು.ಪಶು ಸಂಗೋಪನೆ ಇಲಾಖೆಯ ಅಧಿಕಾರಿ ವೀರೇಶ ಮಾತನಾಡಿ, ಮೇವು ಬ್ಯಾಂಕ್ ಆರಂಭಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ ಮೇವಿಗೆ ಬೇಡಿಕೆ ಬಂದಿರುವುದಿಲ್ಲ. ಸಾಕಷ್ಟು ಭತ್ತದ ಹುಲ್ಲು ಲಭ್ಯವಿರುವುದರಿಂದ ರೈತರಿಗೆ ಮೇವು ಕೊರತೆ ಉಂಟಾಗಿಲ್ಲ. ಜಗಳೂರಿನಲ್ಲಿ ಎರಡು ಕಡೆ ಮಾತ್ರ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಸಿಇಓ ಹೆಚ್. ಬಸವರಾಜೇಂದ್ರ, ಜಿಪಂ ಉಪ ಕಾರ್ಯದರ್ಶಿ ಭಿಮಾನಾಯ್ಕ, ಡಿಎಚ್‍ಓ ಡಾ. ತ್ರಿಪುಲಾಂಭ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಾನಂದ ಕುಂಬಾರ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
