ಬೆಂಗಳೂರು
ಬಾಂಗ್ಲಾದೇಶೀಯರು ಸೇರಿದಂತೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಮೇಲೆ ಹದ್ದುಗಣ್ಣಿಡಲು ಎಲ್ಲ ಪೊಲೀಸ್ ಠಾಣೆಗಳಿಗೆ ಸರ್ಕಾರ ಸೂಚನೆ ನೀಡಿದೆ.ರಾಷ್ಟ್ರೀಯ ಪೌರತ್ವ ಕಾಯ್ದೆಯ ಬಿಸಿ ಹೆಚ್ಚಾಗುತ್ತಿದ್ದಂತೆಯೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿರುವ ಸರ್ಕಾರ, ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ಬಾಂಗ್ಲಾ, ನೇಪಾಳ ಮತ್ತಿತರ ರಾಷ್ಟ್ರಗಳ ಪ್ರಜೆಗಳ ಬಗ್ಗೆ ಸಮಸ್ತ ವಿವರ ಸಂಗ್ರಹಿಸಿ ಎಂದಿದೆ.
ಆಯಾ ಠಾಣಾ ವ್ಯಾಪ್ತಿಯ ಯಾವ ಏರಿಯಾದಲ್ಲಿ ವಿದೇಶಿ ಪ್ರಜೆಗಳು ನೆಲೆಸಿದ್ದಾರೆ? ಅವರು ಏನು ಕೆಲಸ ಮಾಡುತ್ತಾರೆ? ಬಂದು ನೆಲೆಸಿರುವ ಉದ್ದೇಶವೇನು? ಅವರಿಗೆ ಬಾಡಿಗೆಗೆ ಮನೆ ನೀಡಿದವರು ಯಾರು ಎಂಬುದೂ ಸೇರಿದಂತೆ ಸಮಸ್ತ ವಿವರ ನಿಮ್ಮಲ್ಲಿರಬೇಕು ಎಂದು ಆಯಾ ಪೊಲೀಸ್ ಠಾಣೆಗಳಿಗೆ ಸರ್ಕಾರ ಸೂಚನೆ ನೀಡಿದೆ.
ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಕುರಿತು ಮಾಹಿತಿ ನೀಡಿದರಲ್ಲದೆ, ಬಾಂಗ್ಲಾ ದೇಶಿಯರು ಮಾತ್ರವಲ್ಲ, ನೇಪಾಳ ಸೇರಿದಂತೆ ಮೂರು ರಾಷ್ಟ್ರಗಳ ಪ್ರಜೆಗಳು ಗಣನೀಯ ಸಂಖ್ಯೆಯಲ್ಲಿ ಬಂದು ನೆಲೆಸಿರುವ ಕುರಿತು ಮಾಹಿತಿ ಇದೆ ಎಂದರು.
ಆದ್ದರಿಂದ ಇವರ ಕುರಿತು ಪ್ರತಿಯೊಂದು ವಿವರವೂ ಆಯಾ ಠಾಣೆಗಳ ವ್ಯಾಪ್ತಿಯಲ್ಲಿರಬೇಕು. ಹಲವರು ಅಕ್ರಮವಾಗಿ ನೆಲೆಸಿರುವುದಷ್ಟೆ ಅಲ್ಲ, ಕಳ್ಳತನದಂತಹ ಪ್ರಕರಣಗಳಲ್ಲಿ ತೊಡಗಿಕೊಂಡಿರುವುದೂ ಗಮನಕ್ಕೆ ಬಂದಿದೆ ಎಂದರು.ಕಡಿಮೆ ವೇತನಕ್ಕೆ ಕೆಲಸ ಮಾಡಲು, ರಜೆ ಇಲ್ಲದೆ ಕೆಲಸ ಮಾಡಲು ಬೇಕಾಗುತ್ತಾರೆ ಎಂಬ ಕಾರಣಕ್ಕಾಗಿ ರಾಜ್ಯದ ಹಲ ಕೈಗಾರಿಕೆಗಳು ಬಾಂಗ್ಲಾದೇಶೀಯರನ್ನು ಕರೆ ತಂದಿದ್ದಾರೆ. ಕಟ್ಟಡ ಕಟ್ಟುವ ಕೆಲಸಕ್ಕೆ ಬಾಂಗ್ಲಾ ದೇಶೀಯರನ್ನು ಕರೆತಂದಿದ್ದಾರೆ ಎಂಬ ದೂರುಗಳ ಕುರಿತು ಕೇಳಿದಾಗ ಈ ಕುರಿತು ಸರ್ಕಾರಕ್ಕೆ ಮಾಹಿತಿ ಇದೆ ಎಂದರು.
ಇದು ಸೇರಿದಂತೆ ಹಲವು ಕಾರಣಗಳಿಗಾಗಿ ವಿದೇಶಿ ಪ್ರಜೆಗಳ ಮೇಲೆ ಹದ್ದುಗಣ್ಣಿಡಬೇಕು. ಅವರ ಕುರಿತು ಎಲ್ಲ ವಿವರ ಸಂಗ್ರಹಿಸಬೇಕು ಎಂದು ಹೇಳಿದ್ದೇವೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.ರಾಷ್ಟ್ರೀಯ ಪೌರತ್ವ ಕಾಯ್ದೆಯಡಿ ಅಗತ್ಯದ ದಾಖಲೆಗಳನ್ನು ನೀಡಲು ವಿಫಲರಾದವರಿಗಾಗಿ ಸಮಾಜ ಕಲ್ಯಾಣ ಇಲಾಖೆ ವಲಸಿಗರ ಶಿಬಿರವನ್ನು ಸ್ಥಾಪನೆ ಮಾಡಿದೆ ಎಂಬ ವರದಿಯ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಸುಳ್ಳು ಮಾಹಿತಿ ಎಂದರು.
ಸಮಾಜ ಕಲ್ಯಾಣ ಇಲಾಖೆ ಸ್ಥಾಪಿಸಿರುವ ಆ ಕಟ್ಟಡ ನೈಜೀರಿಯಾದ ಪ್ರಜೆಗಳಿಂದ ಕಾನೂನು, ಸುವ್ಯವಸ್ಥೆಗಾಗುವ ಹಾನಿಯನ್ನು ತಡೆಯಲು ನಿರ್ಮಿಸಲಾದ ಕಟ್ಟಡ. ಡ್ರಗ್ಸ್ ಸೇರಿದಂತೆ ಹಲವು ರೀತಿಯ ಮಾದಕ ವಸ್ತುಗಳ ಮಾರಾಟ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ನೈಜೀರಿಯಾದ ಪ್ರಜೆಗಳನೇಕರು ಸಿಲುಕುತ್ತಿದ್ದಾರೆ. ಅಂತಹ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವಿಚಾರಣೆ ಪೂರ್ಣಗೊಳಿಸುವವರೆಗೆ ಸಮಯಾವಕಾಶ ತಗಲುತ್ತದೆ. ಹೀಗೆ ವಿಚಾರಣೆ ಪೂರ್ಣಗೊಳಿಸಿ ತಪ್ಪಿತಸ್ಥರು ಎಂಬುದು ಸಾಬೀತಾದರೆ ಅವರನ್ನು ಗಡಿಪಾರು ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಅವರನ್ನು ಹೊರಗಿಡಲು ಸಾಧ್ಯವಿಲ್ಲ.
ಇದೇ ಕಾರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಸ್ಥಾಪಿಸಿರುವ ಸದರಿ ಆ ಕಟ್ಟಡದಲ್ಲಿ ಅವರನ್ನು ಇಡಲಾಗುತ್ತದೆಯೆ ಹೊರತು ಅದಕ್ಕೂ, ರಾಷ್ಟ್ರೀಯ ಪೌರತ್ವ ಕಾಯ್ದೆಯ ವ್ಯಾಪ್ತಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ವಲಸಿಗರ ಶಿಬಿರಗಳಿಗೂ ಸಂಬಂಧವಿಲ್ಲ ಎಂದರು.ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಯಾರು ಸಂಘಟಿತವಾಗಿ ಕಲ್ಲು ಹೊಡೆಯುತ್ತಿದ್ದರು ಎಂಬುದನ್ನು ಗಮನಿಸಿದರೆ ಅದು ವ್ಯವಸ್ಥಿತವಾಗಿ ನಡೆದ ಅಪರಾಧ ಕೃತ್ಯ ಎಂದರು.
ಗಲಭೆಯ ಘಟನೆಯಲ್ಲಿ ಕೇರಳದಿಂದ ಬಂದವರು ಹೇಗೆ ಸೇರಿಕೊಂಡಿದ್ದರು? ಘಟನೆಯ ನಂತರ ಕೇರಳದ ತಂಡ ಪರಿಶೀಲನೆಗಾಗಿ ಏಕೆ ಬಂತು ಅನ್ನುವುದನ್ನೆಲ್ಲ ಗಮನಿಸಿದರೆ ಇದೊಂದು ಸಂಘಟಿತವಾಗಿ ನಡೆಸಿದ ಘಟನೆ ಎಂಬುದು ಸಾಬೀತಾಗುತ್ತದೆ.ಇವರನ್ನು ಅಮಾಯಕರು ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳಿದರು ಎಂದ ಮಾತ್ರಕ್ಕೆ ಕ್ಲೀನ್ ಚಿಟ್ ಕೊಡಲು ಸಾಧ್ಯವಿಲ್ಲ. ಸರ್ಕಾರ ಇವರಿಗೆ ಕ್ಲೀನ್ ಚಿಟ್ ಕೊಟ್ಟೂ ಇಲ್ಲ ಎಂದರು.
ಕಲ್ಲು ಹೊಡೆಯುವವರು, ಸಂಘಟಿತವಾಗಿ ಅಪರಾಧ ಕೃತ್ಯಗಳನ್ನು ಮಾಡುವವರು ಅಮಾಯಕರು ಎಂದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿಯವರ ಹೇಳಿಕೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ನಮ್ಮ ಸಹೋದರನಿದ್ದಂತೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾಲದಲ್ಲೂ ಗೋಲಿಬಾರ್‍ನಂತಹ ಘಟನೆಗಳು ನಡೆದಿವೆ ಎಂದಷ್ಟೇ ಹೇಳುತ್ತೇನೆ ಎಂದರು.ಘಟನೆಯ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮಾವಳಿಗಳ ಪ್ರಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಮುಂದೆ ಸಿಐಡಿ ತನಿಖೆಯೂ ನಡೆಯುತ್ತದೆ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








