ಗುಬ್ಬಿ
ಜಿಲ್ಲೆಯ ಸರ್ವಾಂಗೀಣ ಅಭಿವೃಧ್ದಿಯ ಜೊತೆಗೆ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ನೂತನ ಸಂಸದರಾದ ಜಿ.ಎಸ್.ಬಸವರಾಜುರವರ ಅವರಿಗೆ ಕೇಂದ್ರ ಸರ್ಕಾರ ಸಚಿವ ಸ್ಥಾನ ನೀಡಬೇಕೆಂದು ಗುಬ್ಬಿ ತಾಲೂಕಿನ ತಿಗಳ ಸಮುದಾಯದ ಬಿಜೆಪಿ ಮುಖಂಡರು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಸಿ. ಶಿವಕುಮಾರ್ ತಾಲೂಕಿನಲ್ಲಿ ನಮ್ಮ ತಿಗಳ ಸಮುದಾಯ ಕೃಷಿಯನ್ನೆ ನಂಬಿ ಬದುಕು ಸಾಗಿಸುತ್ತಿದ್ದಾರೆ ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ತಾಲ್ಲೂಕಿನ ಕೆರೆ ಕಟ್ಟೆಗಳು ನೀರಿಲ್ಲದೆ ಒಣಗಿದ್ದು ಅಂತರ್ಜಲ ಸಂಪೂರ್ಣವಾಗಿ ಕಸಿದಿದೆ ಕೊಳವೆ ಬಾವಿಗಳಲ್ಲಿಯೂ ನೀರು ಬಾರದೆ ತಮ್ಮ ಜೀವನಾಧಾರ ವಾಗಿರುವ ಕೃಷಿ ಮತ್ತು ತೋಟದ ಬೆಳೆಗಳು ಒಣಗುತ್ತಿವೆ ಜನ ಜಾನುವಾರುಗಳ ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವತ್ತ ನೂತನ ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನ ಗುಬ್ಬಿ, ಕಡಬ ಕೆರೆಗಳಲ್ಲಿ ನೀರಿಲ್ಲದೆ ಈ ಭಾಗದ ನೂರಾರು ರೈತರು ತೀವೃತರ ಸಮಸ್ಯೆ ಎದುರಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಕೆರೆಗಳಿಗೆ ನೀರು ಹರಿಸಬೇಕಾದ ಸಚಿವರು ನೂತನ ಸಂಸದ ಜಿ.ಎಸ್.ಬಸವರಾಜು ಅವರೆ ನೀರನ್ನು ಹರಿಸಲಿ ಎಂದು ಹೇಳಿಕೆ ನೀಡಿದ್ದಾರೆ ಇದರಿಂದ ತಾಲ್ಲೂಕಿನ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಸದರು ಮತ್ತು ಶಾಸಕರು ಒಂದಾಗಿ ತಾಲ್ಲೂಕಿನ ಕೆರೆಗಳಿಗೆ ನೀರನ್ನು ಹರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಒತ್ತಾಯಿಸಿದರು.
ಕೇಂದ್ರ ಸರಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಇಲ್ಲಿನ ಸಂಸದರಿಗೆ ಸಚಿವ ಪದವಿ ನೀಡಿದಲ್ಲಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ದಿ ಮಾಡಬಹುದಾಗಿದೆ ತಾಲೂಕಿನಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆ ಇದ್ದು ಯುವಕರಿಗೆ ಉದ್ಯೋಗ ನೀಡುವಂತಹ ಕೆಲಸವನ್ನು ಸಂಸದರು ಮಾಡಬೇಕು ಎಚ್.ಎ.ಎಲ್ ನಲ್ಲಿ ಸ್ಥಳೀಯರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ ಕಡಬ ಕೆರೆ ಒಂದು ತುಂಬಿದರೆ ಹತ್ತಾರು ಗ್ರಾಮಗಳಲ್ಲಿ ಅಂತರ್ಜಲ ವೃಧ್ದಿಯಾಗುತ್ತದೆ ಆದರೆ ನಮ್ಮ ನಾಯಕರುಗಳು ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿಲ್ಲ ರೈತರು ನಾಲೆಯ ಮೇಲೆ ಹೋಗಿ ಪ್ರತಿಭಟನೆಗೆ ಮುಂದಾದರೆ ಕೇಸ್ ದಾಖಲು ಮಾಡುತ್ತಾರೆ ಈಗಾಗಲೆ ಸಾಕಷ್ಟು ಜನರು ಕೋರ್ಟ ಮೆಟ್ಟಿಲು ಹತ್ತುವಂತಾಗಿದೆ ರಾಜಕೀಯವನ್ನು ಬಿಟ್ಟು ನಮಗೆ ನೀರು ಕೊಡುವ ಕೆಲಸವನ್ನು ನಮ್ಮ ನಾಯಕರುಗಳು ಮಾಡಲಿ ಎಂದು ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಹಾಲು ಉತ್ಪಾದಕರ ನಿರ್ಧೇಶಕ ನಕುಲಯ್ಯ, ಮುಖಂಡರಾದ ರಾಜು, ಮಂಜುನಾಥ್, ನಟರಾಜು, ಗೋವಿಂದಪ್ಪ, ವಿಜಯ್ ಕುಮಾರ್, ಯಶ್ವಂತ್, ಬಾಬು, ಜಯಣ್ಣ, ನಾರಾಯಣ್, ಚಂದ್ರು ಮುಂತಾದವರು ಉಪಸ್ಥಿತರಿದ್ದರು.