ಬೆಂಗಳೂರು:
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಸುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಎಸ್‍ಒಪಿಗಳ ಕರಡು ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಬಿಡುಗಡೆಗೊಳಿಸಿದೆ.
ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಪ್ರತಿಯೊಬ್ಬರೂ ಫಾಸ್ ಮಾಸ್ಕ್ ಧರಿಸುವದು ಕಡ್ಡಾಯ. ಸ್ಯಾನಿಟೈಸರ್ ಬಳಕೆ ಮತ್ತು ಥರ್ಮಲ್ ಸ್ಕ್ಯಾನರ್‍ನಿಂದ ಪರೀಕ್ಷೆಗೊಳ್ಳಬೇಕು. ದೈಹಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ, ಚುನಾವಣಾ ಕಾರ್ಯಗಳನ್ನು ಸಾಧ್ಯವಾದಷ್ಟು ವಿಶಾಲವಾದ ಕೊಠಡಿಗಳನ್ನು ನಡೆಸಬೇಕು ಎಂದು ಆದೇಶ ತಿಳಿಸಿದೆ.
ಚುನಾವಣೆಗೆ ಸಂಬಂಧಿಸಿದ ಅರ್ಜಿಗಳು, ಕವರ್ ಮತ್ತಿತರರ ಚುನಾವಣಾ ಸಾಮಾಗ್ರಿಗಳನ್ನು ಸೋಂಕು ನಿವಾರಕ ಸಿಂಪಡಿಸಿದ ಕೊಠಡಿಯಲ್ಲಿ ಇಡಬೇಕು. ನಾಮಪತ್ರಗಳನ್ನು ಸ್ವೀಕರಿಸುವಾಗ ಚುನಾವಣಾಧಿಕಾರಿಗಳು ಮಾಸ್ಕ್ ಧರಿಸಿ, ಕೈಗಳಿಗೆ ಗ್ಲೌಸ್‍ಗಳನ್ನು ಧರಿಸಬೇಕು. ಕೊಠಡಿಯಲ್ಲಿ ಅಧಿಕಾರಿಗಳು ಆರು ಅಡಿ ಅಂತರದಲ್ಲಿ ಕುಳಿತುಕೊಳ್ಳಬೇಕು. ಅಭ್ಯರ್ಥಿಗಳಿಗೆ ಟೋಕನ್ ಆಧಾರದ ಮೇಲೆ ಪ್ರವೇಶ ನೀಡಬೇಕು. ಕೋವಿಡ್ ಸೋಂಕು ಇಲ್ಲದಿರುವುದು ದೃಢಪಟ್ಟ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ. ನಾಮಪತ್ರ ಸಲ್ಲಿಸುವ ಮತ್ತು ನಾಮಪತ್ರ ಹಿಂಪಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳು ಕೈಗಳಿಗೆ ಸ್ಯಾನಿಟೈಸರ್ ಬಳಸುವುದು ಕಡ್ಡಾಯ.
ಚುನಾವಣಾ ಪ್ರಚಾರ:
ಅಭ್ಯರ್ಥಿಗಳು ಪ್ರಚಾರದ ವೇಳೆ ಗರಿಷ್ಠ 5 ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆ ಮನೆ ಪ್ರಚಾರ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಫೇಸ್‍ಮಾಸ್ಕ್ ಕಡ್ಡಾಯ. ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದು. ಗುಂಪುಗುಂಪಾಗಿ ಪ್ರಚಾರ ಮಾಡುವುದು, ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ.
ಮತದಾನ;
ಮತದಾನದ ವೇಳೆ ಗರಿಷ್ಠ 1000 ಮತದಾರರು ಮಾತ್ರ ಇರುವ ಮತಗಟ್ಟೆ ಗುರುತಿಸಬೇಕು. ಮತದಾನಕ್ಕೆ ನಿಗದಿಯಾಗಿರುವ ಕೊಠಡಿಗಳನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಿ ಸಿದ್ಧಪಡಿಸಬೇಕು. ಮತದಾರರಿಗೆ ಗುರುತಿನ ಚೀಟಿ ನೀಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಆದೇಶ ತಿಳಿಸಿದೆ.
ಮತಗಟ್ಟೆ ಪ್ರವೇಶಿಸುವ ಮತದಾರರಿಗೆ ಥರ್ಮಲ್ ಪರೀಕ್ಷೆ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಬೇಕು ಎಂದು ಆದೇಶ ಸ್ಪಷ್ಟಪಡಿಸಿದೆ. ಸೋಂಕಿತರ ವ್ಯಕ್ತಿಗಳಿಗೆ ಮತ ಚಲಾಯಿಸಲು ಅವಕಾಶವಿದೆ. ಅವರು ಆಸ್ಪತ್ರೆ ಅಥವಾ ಹೋಂ ಕ್ವಾರಂಟೈನ್‍ನಲ್ಲಿದ್ದವರಿಗೆ ಅಂಚೆ ಮೂಲಕ ಮತ ಚಲಾಯಿಸಲು ರಾಜ್ಯ ಚುನಾವನಾ ಆಯೋಗದಿಂದ ಪ್ರತ್ಯೇಕ ಆದೇಶ ಹೊರಡಿ ಸಲಾಗುವುದು . ಮತದಾರರಿಗೆ ಶಾಹಿ ಹಾಕಿರುವವರು ಗ್ಲೌಸ್ ಧರಿಸಬೇಕು ಮತ್ತು ಅಳಿಸಲಾಗದ ಶಾಯಿ ಹಾಕಬೇಕು. ಮತದಾನದ ವೇಳೆ ಮತದಾರರು ಮತಗಟ್ಟೆ ಮುಟ್ಟದಂತೆ ಎಚ್ಚರವಹಿಸಬೇಕು.
ಮತ ಎಣಿಕೆ ವೇಳೆ ಕೂಡ ಸಿಬ್ಬಂದಿ ಹ್ಯಾಂಡ್ ಗ್ಲೌಸ್ ಧರಿಸಬೇಕು. ಮತ ಪತ್ರಗಳನ್ನು ಕೈಯಿಂದ ಮುಟ್ಟುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ