ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗುರುವಂದನಾ ಕಾರ್ಯಕ್ರಮ

0
17

ಚಿಕ್ಕನಾಯಕನಹಳ್ಳಿ

      ಪ್ರತಿ ವರ್ಷ ಚಿತ್ರದುರ್ಗ ಯಾದವ ಮಠದಲ್ಲಿ ಗುರುವಂದನಾ ಸಮಾವೇಶ ನಡೆಯುತ್ತಿತ್ತು. ಜನಾಂಗದವರನ್ನು ಸಂಘಟಿಸಲು ಇನ್ನು ಮುಂದೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಯಾದವ ಸಮಾಜದ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರದುರ್ಗದ ಮಠದ ಶ್ರೀಕೃಷ್ಣಯಾದವಾನಂದಸ್ವಾಮೀಜಿ ಹೇಳಿದರು.

     ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳ ದಿನಾಂಕವನ್ನು ತೆಗೆದುಕೊಂಡು ತುಮಕೂರು ಜಿಲ್ಲೆಯಲ್ಲಿ ಯಾದವ ಸಮಾಜದ ಗುರುವಂದನಾ ಕಾರ್ಯಕ್ರಮವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ 30 ರಿಂದ 35 ಲಕ್ಷ ಗೊಲ್ಲ ಜನಸಂಖ್ಯೆಯಿದೆ. ಆದರೂ ಜನಾಂಗದ ಅಭಿವೃದ್ಧಿಗೆ ಸರ್ಕಾರಗಳು ಗಮನ ಹರಿಸಿಲ್ಲ. ಯಾದವ ಜನಾಂಗ ವಾಸಿಸುವ ಹಟ್ಟಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದೆ.

        ಆದ್ದರಿಂದ ಸಮಾವೇಶದ ಮೂಲಕ ಸರ್ಕಾರವನ್ನು ಎಚ್ಚರಿಸಲು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ತುಮಕೂರು ಜಿಲ್ಲೆಯಲ್ಲಿ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಸಮಾಜವನ್ನು ಸಂಘಟಿಸಲು ರಾಜ್ಯ ಯಾದವ ಸಮಾಜದ ನಿರ್ಧರಿಸಿದೆ ಎಂದರು.

        ರಾಜ್ಯ ಯಾದವ ಜನಾಂಗದ ಮುಖಂಡ ಡಿ.ಟಿ.ಶ್ರೀನಿವಾಸ್ ಮಾತನಾಡಿ, 10ವರ್ಷಗಳ ಹಿಂದೆ ಎ.ಕೃಷ್ಣಪ್ಪನವರು ಜನಾಂಗದ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಅವರ ನಿಧನದ ನಂತರ ಯಾದವ ಸಮಾಜದ ಸಮಸ್ಯೆಗಳ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ ಎಂದ ಅವರು, ಸರ್ಕಾರ ಕೂಡಲೇ ಯಾದವ ಜನಾಂಗದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಒತ್ತಾಯಿಸಲು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶಗಳನ್ನು ನಡೆಸುವುದು ಎಂದರು.

        ತುಮಕೂರು ಜಿಲ್ಲೆ ಯಾದವ ಸಮಾಜದ ಅಧ್ಯಕ್ಷ ಚಂದ್ರಶೇಖರ್‍ಗೌಡ ಮಾತನಾಡಿ, ಯಾದವ ಸಮಾಜ ಹಾಗೂ ಮಠ ಮುಂದುವರೆಯುತ್ತಿಲ್ಲ ಎಂದು ಸ್ವಾಮೀಜಿಗಳು ರಾಜ್ಯಾದ್ಯಂತ ಸಂಚರಿಸಿ ಸಮಾಜವನ್ನು ಸಂಘಟಿಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಸಮಾಜದವರು ಸಮಾವೇಶ ನಡೆಸಲು ಸಹಕರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನಾವುಗಳು ತೆರಳಿ ಸರ್ಕಾರವನ್ನು ಯಾದವ ಸಮಾಜದ ಬಗ್ಗೆ ಜಾಗೃತಗೊಳಿಸಬೇಕು ಎಂದರು.

      ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಸದಸ್ಯ ಕೇಶವಮೂರ್ತಿ, ತೀರ್ಥಪುರವಾಸು, ಡಿ.ಎಂ.ಸತೀಶ್, ವೀರಣ್ಣಗೌಡ, ಬಾಬು, ಗೋವಿಂದಪ್ಪ, ಕದರೇಗೌಡ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here