ತುಮಕೂರು
ಕುಡಿಯುವ ನೀರಿನ ನಾಲೆಗೆ ಲಿಂಕಿಂಗ್ ಕೆನಾಲ್ ಮಾಡುತ್ತಿರುವುದು ಮಾರಕ. ಇದು ಅವೈಜ್ಞಾನಿಕವಾಗಿದೆ. ತುಮಕೂರು ನಾಲೆಯ 70 ಕಿಮೀ ನಿಂದ 165ನೇ ಕಿಮೀನವರೆಗೆ ನೇರವಾಗಿ ಹೇಮಾವತಿ ಲಿಂಕ್ ಪೈಪ್‍ಲೈನ್ ಅಳವಡಿಸುವ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕ್ರ ಖಂಡನೀಯ ಎಂದು ಸಂಸದ ಜಿ.ಎಸ್.ಬಸವರಾಜು ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ಹಾಗೂ ವಿಧಾನಪರಿಷತ್‍ಗಳಲ್ಲಿ ಲಿಂಕಿಂಗ್ ಕೆನಾಲ್ ಬಗ್ಗೆ ಚರ್ಚಿಸಿ ಈ ಯೋಜನೆಯನ್ನು ಕೈ ಬಿಟ್ಟು ಹೇಮಾವತಿ ನಾಲೆಯನ್ನು ಆಧುನೀಕರಣಗೊಳಿಸಿ ಮತ್ತು ಸಾಮಥ್ರ್ಯ ಹೆಚ್ಚಿಸಿ ಆನಂತರ ಮಾಗಡಿಗೆ ನೀರು ಕೊಂಡೊಯ್ಯುವ ಸರ್ಕಾರದ ನಿರ್ಧಾರ ಪ್ರಕಟಿಸಲು ಜು.26ರವರೆಗೆ ಗಡುವು ನೀಡಲಾಗಿದೆ ಎಂದರು.
ಸದನಗಳಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ಜನತೆಯ ಮುಂದೆ ಹೋಗಿ ವಿಚಾರ ಮಂಡಿಸಿ, ಪ್ರತಿಭಟನೆ ಸಭೆ, ರಸ್ತೆ ತಡೆ, ರೈಲು ತಡೆ, ಬಂದ್ ಹಈಗೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಲೋಕಸಭಾ ಅಧಿವೇಶನ ಮುಗಿದ ನಂತರ ತೀವ್ರತರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದೇಶದಲ್ಲಿರುವ ಎಲ್ಲಾ ಕೆನಾಲ್‍ಗಳಲ್ಲಿಯೂ ಟೈಲ್ ಎಂಡ್ ಇರುತ್ತದೆ. ಎಲ್ಲಾ ಕೆನಾಲ್‍ಗಳಿಗೂ ಈ ರೀತಿ ಲಿಂಕ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದೊಂದು ತುಘಲಕ್ ನಿರ್ಧಾರವಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಲು ಸಹ ಚಿಂತನೆ ನಡೆಸಿದ್ದೇವೆ. ಜಿಲ್ಲೆಯ ಸರ್ವ ಪಕ್ಷಗಳು ಸೇರಿದಂತೆ ಎಲ್ಲಾ ವರ್ಗದ ಸಂಘ ಸಂಸ್ಥೆಗಳು ಸಹ ಧ್ವನಿಯೆತ್ತಿ ಪ್ರತಿಭಟಿಸಲು ಮನವಿ ಮಾಡಲಾಗಿದ್ದು, ಈ ಹೋರಾಟವನ್ನು ಪಕ್ಷಾತೀತವಾಗಿ ಮಾಡುವ ಅಗತ್ಯವಿದೆ. ಜಿಲ್ಲೆಗೆ ಅತಿ ದೊಡ್ಡ ಹೊಡೆತ ಬೀಳುವಾಗ ಮೌನವಾಗಿರುವುದು ಸರಿಯಲ್ಲ ಎಂದು ತಿಳಿಸಿದರು.
ಹೇಮಾವತಿ ಇಲಾಖೆ ಮುಖ್ಯ ಎಂಜಿನಿಯರ್ ಬಾಲಕೃಷ್ಣ ಸಾಧು ಮನುಷ್ಯ. ಸಚಿವ ರೇವಣ್ಣನ ಒತ್ತಡಕ್ಕೆ ಮಣಿದು ತುಮಕೂರು ಜಿಲ್ಲೆಗೆ 23 ಟಿಎಂಸಿ ನೀರು ಬಿಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಹೇಮಾವತಿ ಇಲಾಖೆ ಮುಖ್ಯ ಎಂಜಿನಿಯರ್ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೂ ಅವನ ಕೈಯಲ್ಲಿ ಏನೂ ಆಗಿಲ್ಲ. ಅವನ ಸಾಧುತನ, ಒಳ್ಳೆಯ ತನ ಹಾಸನ ಜಿಲ್ಲೆಗೆ ಮಾತ್ರ ಅನುಕೂಲವಾಗುತ್ತಿದೆ. ಹೇಮಾವತಿ ನೀರು ಹಂಚಿಕೆ ವಿಷಯದಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯವಾಗುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಗೆ 23 ಟಿಎಂಸಿ ನೀರು ಹರಿದಿದೆ ಎಂಬ ಸುಳ್ಳು ಮಾಹಿತಿ ನೀಡಿರುವ ಮುಖ್ಯ ಎಂಜಿನಿಯರ್ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಶಾಸಕರು ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಧ್ವನಿ ಎತ್ತಲಿದ್ದಾರೆ. ಜು.26 ರವರೆಗೆ ಕಾಲಾವಕಾಶ ಕೊಡಿ. ಬಳಿಕ ಎಂಜಿನಿಯರ್ ಮೇಲೆ ಚೀಟಿಂಗ್ ಪ್ರಕರಣ ದಾಖಲು ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು .ಪತ್ರಿಕಾ ಗೋಷ್ಠಿಯಲ್ಲಿ ಅಭಿವೃದ್ಧಿ ರೆವ್ಯೂಲೂಷನ್ ಪೋರಂನ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಬಿಜೆಪಿ ಮುಖಂಡ ಬೆಟ್ಟಸ್ವಾಮಿ, ಪಾಲಸಂದ್ರ ಗ್ರಾಪಂ ಸದಸ್ಯ ಹರೀಶ್ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
