ನಗರದಲ್ಲಿ ಸಂಚಾರ ಅಸ್ತವ್ಯಸ್ತ, ಪರದಾಟ

0
14

ತುಮಕೂರು

      ತುಮಕೂರು ನಗರದಲ್ಲಿ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ರಾಜಕೀಯ ಜಿದ್ದಾಜಿದ್ದಿನ ಶಕ್ತಿಪ್ರದರ್ಶನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ, ಮಧ್ಯಾಹ್ನದ ಬಿರುಬಿಸಿಲಿನಲ್ಲಿ ವಾಹನ ಸವಾರರು/ಚಾಲಕರು/ಪ್ರಯಾಣಿಕರು ಮತ್ತು ಪಾದಚಾರಿಗಳು ಪರದಾಡಿದ ಪ್ರಸಂಗ ಸೋಮವಾರ ಜರುಗಿತು.

       ಒಂದೆಡೆ ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿಯಾಗಿ ಎಸ್.ಪಿ. ಮುದ್ದಹನುಮೇಗೌಡ ಅವರು ತಮ್ಮ ಬೆಂಬಲಿಗರೊಡನೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ್ದು, ಮತ್ತೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮೆರವಣೆಗೆ ಮೂಲಕ ನಾಮಪತ್ರ ಸಲ್ಲಿಸುವಾಗ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

       ಮುದ್ದಹನುಮೇಗೌಡ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ಗುಂಪು ನಗರದ ಟೌನ್‍ಹಾಲ್ ವೃತ್ತದ ಬಳಿ ಬೆಳಗ್ಗೆ 10-30 ರಿಂದ ಮಧ್ಯಾಹ್ನ 12-45 ರವರೆಗೂ ಜಮಾಯಿಸಿದ ಪರಿಣಾಮ ಟೌನ್‍ಹಾಲ್ ವೃತ್ತದ ಬಳಿ ಮಹಾನಗರ ಪಾಲಿಕೆ ಕಚೇರಿಗೆ ಬಂದು-ಹೋಗುವ ಸಾರ್ವಜನಿಕರಿಗೆ ಅಡಚಣೆ ಉಂಟಾಯಿತು. ವಾಹನ ಸವಾರರು ಮತ್ತು ವಾಹನ ಚಾಲಕರು ಪರದಾಡಿದರು. ಬಳಿಕ ಮುದ್ದಹನುಮೇಗೌಡ ಅವರು ತೆರೆದ ವಾಹನದಲ್ಲಿ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದು, ಇದರಿಂದ ಆ ಮಾರ್ಗದ ಉದ್ದಕ್ಕೂ ಮತ್ತೆ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ತೊಂದರೆಗೆ ಸಿಲುಕಿದರು.

       ಇತ್ತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಧ್ಯಾಹ್ನ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಿ, ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10-30 ರಿಂದಲೇ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಭಿಮಾನಿಗಳು, ಎರಡೂ ಪಕ್ಷಗಳ ಕಾರ್ಯಕರ್ತರು ಸೇರತೊಡಗಿದರು. ಬಳಿಕ ಮೆರವಣಿಗೆಯಲ್ಲೂ ಸಾವಿರಾರು ಜನರು ಜಮಾವಣೆಗೊಂಡ ಹಿನ್ನೆಲೆಯಲ್ಲಿ ಆ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರ ಸ್ಥಗಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತು.

        ನಗರದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಕೆ.ಆರ್.ಬಡಾವಣೆಯ ಕಾರಿಯಪ್ಪ ರಸ್ತೆ ಹಾಗೂ ಇತರೆ ತಿರುವು ರಸ್ತೆಗಳು, ಜೆ.ಸಿ.ರಸ್ತೆ, ಡಿ.ಸಿ. ಕಚೇರಿ ಸುತ್ತಮುತ್ತಲಿನ ರಸ್ತೆಗಳು, ಇತ್ತ ರೈಲ್ವೆ ನಿಲ್ದಾಣದ ರಸ್ತೆ, ಗೂಡ್ಸ್‍ಶೆಡ್ ಕಾಲೋನಿ ರಸ್ತೆ, ಡಾ.ರಾಧಾಕೃಷ್ಣನ್ ರಸ್ತೆ, ಸೋಮೇಶ್ವರಪುರಂ ಮುಖ್ಯರಸ್ತೆ ಮೊದಲಾದೆಡೆ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು.

       ಬಿ.ಎಚ್.ರಸ್ತೆ ಮತ್ತು ಅಶೋಕ ರಸ್ತೆಗೆ ಪರ್ಯಾಯವಾಗಿ ಅಕ್ಕಪಕ್ಕದ ಈ ಎಲ್ಲ ರಸ್ತೆಗಳಲ್ಲಿ ವಾಹನಗಳು ಸಂಚಾರಿಸಬೇಕಾಯಿತಾದ್ದರಿಂದ ಇಲ್ಲೆಲ್ಲ ಟ್ರಾಫಿಕ್ ಜಾಮ್ ಉಂಟಾಗಿ, ಸುಡು ಬಿಸಿಲಿನಲ್ಲಿ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಯಿತು. ಜೊತೆಗೆ ರಸ್ತೆಗಳ ಅಗೆತವೂ ವಾಹನ ಸವಾರರು/ಚಾಲಕರ ಪರದಾಟವನ್ನು ದುಪ್ಪಟ್ಟುಗೊಳಿಸಿತು.

.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here