ಬಾಗಿನದ ಮೊರದ ವ್ಯಾಪಾರಿಗಳಿಗೆ ಶುಕ್ರ ದೆಸೆ..!

ಹುಳಿಯಾರು:

      ಪ್ಲಾಸ್ಟಿಕ್ ಹಾವಳಿಗೆ ತತ್ತರಿಸಿ ಹೋಗಿರುವ ಬಿದಿರು ಉತ್ಪನ್ನಗಳಿಗೆ ಮದುವೆ ಮತ್ತು ಗೌರಿ ಹಬ್ಬದಲ್ಲಿ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಮದುವೆ ಸಂದರ್ಭದಲ್ಲಿ ಬುಟ್ಟಿಗಳನ್ನು ಮೇದರ ಜನಾಂಗದ ಮನೆಗಳಿಗೆ ಹೋಗಿ ಖರೀಧಿಸಿದರೆ, ಗೌರಿ ಹಬ್ಬದಲ್ಲಿ ಬಾಗಿನ ಕೊಡಲು ಬಿದಿರಿನ ಮೊರ ಕೊಳ್ಳಲು ಸಂತೆಯಲ್ಲಿ ಮುಗಿ ಬೀಳುತ್ತಾರೆ.

      ಹೌದು, ಪ್ರತಿ ವಾರದ ಸಂತೆಯಲ್ಲೂ ಬುಟ್ಟಿ, ತೊಟ್ಟಿಲು, ಮೊರ ಹೀಗೆ ವಿವಿಧ ಬಗೆಯ ಬಿದಿರಿನ ಉತ್ಪನ್ನಗಳು ಲಭ್ಯವಿರುತ್ತವಾದರೂ ಜನ ಅತ್ತ ತಿರುಗುಯೂ ಸಹ ನೋಡುವುದಿಲ್ಲ. ಆದರೆ ಗೌರಿ ಹಬ್ಬ ಬಂತೆಂದರೆ ಸಾಕು ಸಂತೆಯಲ್ಲಿ ಏನು ಕೊಳ್ಳದಿದ್ದರೂ ಪರ್ವಾಗಿಲ್ಲ ಬಿದಿರಿನ ಮೊರ ಕೊಳ್ಳದೆ ಹಿಂದಿರುಗಲ್ಲ. ಅಷ್ಟರ ಮಟ್ಟಿಗೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಗೌರಿ ಬಾಗಿನಕ್ಕೆ ಬಿದಿರಿನ ಮೊರಕ್ಕೆ ಬೇಡಿಕೆಯಿದೆ. ಹಾಗಾಗಿಯೇ ಮೊರ ಮಾರಲು ತಾಯಿ, ಮಗ, ಸೊಸೆ ಹೀಗೆ ಮನೆಮಂದಿಯೆಲ್ಲ ಸಂತೆಗೆ ಬರುತ್ತಾರೆ.

      ತುಂಬಿದ ಮೊರದ ಬಾಗಿನ ಬಲು ಶ್ರೇಷ್ಠ ಎಂಬುದು ಹಿಂದೂ ಸಂಪ್ರದಾಯ. ಆದ್ದರಿಂದ ಮುತ್ತೈದೆ ಬಾಗಿನ ಎಂದು ಬಿದಿರಿನ ಮೊರದಲ್ಲಿ ವಿವಿಧ ಸಾಮಗ್ರಿಗಳು, ಫಲ–ತಾಂಬೂಲವನ್ನು ಇಟ್ಟು, ಅದರಲ್ಲಿ ಏನಿದೆ ಎಂಬುದು ಮತ್ತೊಬ್ಬರಿಗೆ ಕಾಣದಂತೆ ಮತ್ತೊಂದು ಮರವನ್ನು ಮುಚ್ಚಿ ಕೊಡುತ್ತಾರೆ. ಹಾಗಾಗಿ ಜೋಡಿ ಮೊರ ಕೊಳ್ಳುವುದು ವಾಡಿಕೆಯಾಗಿದ್ದು ಒಂದು ಜೊತೆ ಮೊರಕ್ಕೆ ಸಾಮಾನ್ಯ ದಿನಗಳಲ್ಲಿದ್ದ 100 ರೂ ಬೆಲೆ ಈಗ 150 ರೂಗೆ ಏರಿಕೆ ಕಂಡಿದೆ. ಹಬ್ಬದ ಕಾರಣಕ್ಕೆ ಸ್ವಲ್ಪ ಬೆಲೆ ಜಾಸ್ತಿಯಾದರೂ ಮೊರದ ವ್ಯಾಪಾರ ಜೋರಾಗಿ ನಡೆಯುತ್ತಿದೆ.

       ಭದ್ರಾವತಿಯಿಂದ ಬಿದಿರು ತಂದು ಮೊರ, ತೊಟ್ಟಿಲಿ, ಬೀಸಣಿಗೆ, ಬುಟ್ಟಿ ಹೆಣೆಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿದಿರು ಉತ್ಪನ್ನಗಳ ವ್ಯಾಪಾರ ಲುಕ್ಸಾನಿನ ಬಾಬ್ಬತಾಗಿದ್ದರೂ ಸಹ ಕುಲ ಕಸುಬೆಂದು ಮುಂದುವರಿಸಿಕೊಂಡು ಬಂದಿದ್ದೇವೆ. ಹಬ್ಬದ ಸಮಯ ಹೊರತುಪಡಿಸಿದರೆ ಉಳಿದಂತೆ ಬಿದಿರಿನ ತಟ್ಟಿ, ಕುಕ್ಕೆ, ತೊಟ್ಟಿಲು, ಬೀಸಣಿಗೆ ಮುಂತಾದವು ಮಾಡಿಕೊಂಡು ಬರುತ್ತಿರುವುದರಿಂದ ಹೇಗೋ ಜೀವನ ಸಾಗುತ್ತಿದೆ. ಗೌರಿ ಹಬ್ಬದಲ್ಲಿ ಮೊರಕ್ಕೆ ಬರುವ ಬೇಡಿಕೆಯಿಂದ ಕುಲ ಕಸುಬು ಮುಂದುವರಿಸಿದಕ್ಕೂ ಸಾರ್ತಕ ಭಾವ ಮೂಡುತ್ತದೆ ಎನ್ನುತ್ತಾರೆ ಹುಳಿಯಾರಿನ ಅಲಮೇಲಮ್ಮ.

    ಪ್ಲಾಸ್ಟಿಕ್‍ನಲ್ಲಿ ಬಣ್ಣಬಣ್ಣದ ವಿವಿಧ ಶೈಲಿಯ ಮೊರಗಳು ಮಾರುಕಟ್ಟೆಗೆ ಬಂದಿದ್ದರೂ ಬಾಗಿನವನ್ನು ಬಿದಿರಿನ ಮೊರದಲ್ಲಿ ಕೊಡುವುದು ಶ್ರೇಷ್ಠ ಮತ್ತು ಸಂಪ್ರದಾಯ. ಹಾಗಾಗಿ ಪ್ರತಿ ವರ್ಷ ಸೋದರಿಯರಿಗೆ ಬಾಗಿನ ಕೊಡಲು ಬಿದಿರಿನ ಮೊರವನ್ನು ಖರೀಧಿಸುತ್ತೇನೆ. ಪ್ಲಾಸ್ಟಿಕ್ ಮೊರಗಳಿಗೆ ಓಲಿಸಿದರೆ ಬಿದಿರಿನ ಮೊರ ಸ್ವಲ್ಪ ದುಬಾರಿ. ಬಾಳಿಕೆಯಲ್ಲೂ ಬಿದಿರಿನ ಮೊರ ಕಡಿಮಯೆ. ಆದರೂ ಬಿದಿರಿನ ಮೊರದಲ್ಲಿ ಬಾಗಿನ ಕೊಟ್ಟರೇನೆ ಮನಸಿಗೆ ನೆಮ್ಮದಿ ಹಾಗೂ ಬಾಗಿನ ನೀಡಿದ ತೃಪ್ತಿ ಸಿಗುತ್ತದೆ ಎನ್ನುತ್ತಾರೆ ಯಳನಡು ಸಿದ್ದೇಶ್.

     ಒಟ್ಟಾರೆ ಬಾಗಿನ ಕೊಡುವ ಸಂಪ್ರದಾಯದಿಂದಾಗಿ ಗೌರಿ ಹಬ್ಬದಲ್ಲಿ ಬಿದಿರಿನ ಮೊರಗಳಿಗೆ ಬೇಡಿಕೆ ಬರುತ್ತದೆ. ಜೊತೆಗೆ ಬಾಗಿನ ಕೊಡಲು ಅತ್ಯವಶ್ಯಕವಾದ ಅರಿಶಿನ, ಕುಂಕುಮ, ಸಿಂಧೂರ, ಬಳೆ ಬಿಚ್ಚೋಲೆ, ಕನ್ನಡಿ, ಬಾಚಣಿಗೆ, ಕಾಡಿಗೆ, ಹಣ್ಣು, ಸೌತೆಕಾಯಿ ಸೇರಿದಂತೆ ಬೇಳೆ ಕಾಳು ಹಾಗೂ ರವಿಕೆಯ ವ್ಯಾಪಾರವೂ ಸಹ ಜೋರಾಗಿತ್ತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link