ಕೊರಟಗೆರೆ
ಅಲೆಮಾರಿ ಕೂಲಿಕಾರ್ಮಿಕ, ನಿರಾಶ್ರಿತರ ಕುಟುಂಬ ಮತ್ತು ಹಕ್ಕಿಪಿಕ್ಕಿ ಸಮುದಾಯಕ್ಕೆ ಆಹಾರ ಭದ್ರತೆ ನೀಡುವ ಉದ್ದೇಶದಿಂದ ಗ್ರಾಪಂವಾರು ಅಂಕಿಅಂಶ ಕಲೆಹಾಕುವಂತೆ ಪಿಡಿಓಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಟರಾಜು ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೊರಟಗೆರೆ ತುರ್ತು ಪರಿಸ್ಥಿತಿಗೆ ನೇಮಕವಾಗಿರುವ ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಗಳ ವತಿಯಿಂದ ನಡೆದ ಗ್ರಾಪಂ ಪಿಡಿಓಗಳ ತುರ್ತುಸಭೆಯಲ್ಲಿ ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆಯಂತೆ ಕೊರೊನಾ ವೈರೇಸ್ ಹರಡುವಿಕೆ ತಡೆಗಟ್ಟಲು ಲಾಕ್‍ಡೌನ್‍ನಿಂದ ಆಹಾರ ಅಭದ್ರತೆ ಸೃಷ್ಟಿಯಾಗಿರುವ ಕೊರಟಗೆರೆಯ 24 ಗ್ರಾಪಂ ವ್ಯಾಪ್ತಿಯಲ್ಲಿ 604 ಜನ ಅಲೆಮಾರಿ ಕೂಲಿಕಾರ್ಮಿಕರ ಪಟ್ಟಿಯ ವಿವರವನ್ನು ಪಡೆಯಲಾಗಿದೆ. ಗ್ರಾಪಂವಾರು ವಾಸಿಸುತ್ತಿರುವ ಕೂಲಿ ಮತ್ತು ಕಟ್ಟಡ ಕಾರ್ಮಿಕರ ಜವಾಬ್ದಾರಿ ಗುತ್ತಿಗೆದಾರ ವಹಿಸಿಕೊಂಡು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ಗ್ರಾಪಂ ಪಿಡಿಓ ಮತ್ತು ಕಾರ್ಯದರ್ಶಿ ತಮ್ಮ ಗ್ರಾಪಂ ವ್ಯಾಪ್ತಿಯ ಕೆರೆ, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕ, ಅಲೆಮಾರಿ ಕುಟುಂಬ, ನಿರಾಶ್ರಿತರು, ಭಿಕ್ಷುಕರ ಸಂಪೂರ್ಣ ವಿವರವನ್ನು ರಾಜ್ಯ ಸರಕಾರಕ್ಕೆ ತ್ವರಿತವಾಗಿ ಸಲ್ಲಿಸಬೇಕಾಗಿದೆ. ಸರಕಾರದಿಂದ ಬರುವಂತಹ ಸೌಲಭ್ಯವನ್ನು ಕೊರಟಗೆರೆ ತಹಶೀಲ್ದಾರ್ ಮತ್ತು ತಾಪಂ ಇಓ ನೇತೃತ್ವದಲ್ಲಿ ವಿತರಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕೊರಟಗೆರೆ ತಾಪಂ ಇಓ ಶಿವಪ್ರಕಾಶ್ ಮಾತನಾಡಿ, ತುಮಕೂರು ಜಿಪಂ ಸೂಚನೆಯಂತೆ ಕೊರಟಗೆರೆಯ 24 ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಸೃಷ್ಟಿಸುವ ಕೆಲಸ ನೀಡಬೇಕಾಗಿದೆ. ತುರ್ತು ಪರಿಸ್ಥಿತಿ ಇರುವುದರಿಂದ ಗ್ರಾಪಂ ಪಿಡಿಓ ಮತ್ತು ಕಾರ್ಯದರ್ಶಿ ಕುಡಿಯುವ ನೀರಿನ ಪೂರೈಕೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ಜಿಪಂ ಆದೇಶವನ್ನು ಪಾಲನೆ ಮಾಡುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು.ಸಭೆಯಲ್ಲಿ ಪಿಡಿಓ ರಾಮಚಂದ್ರರಾವ್, ರಂಗಶಾಮಯ್ಯ, ಮಂಜುನಾಥ, ಉಮೇಶ್, ಸತ್ಯನಾರಾಯಣ್, ಯಶೋಧ, ಕದರಪ್ಪ, ಅಶ್ವತ್ಥಪ್ಪ, ಸೇರಿದಂತೆ 24 ಗ್ರಾಪಂಗಳ ಪಿಡಿಓಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
