ತುಮಕೂರು
ಕಡಿಮೆ ರೇಟಿಗೆ ತರಕಾರಿ ಕೊಳ್ಳಬಹುದು ಎಂದು ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಗೆ ಬ್ಯಾಗ್ ಹಿಡಿದು ಹೋದವರು ತರಕಾರಿ ಬೆಲೆ ಕೇಳಿ ದಂಗಾಗಬಹುದು. ಯಾವ ತರಕಾರಿ ಬೆಲೆಯೂ ಕಮ್ಮಿ ಇಲ್ಲ. ಹೋದ ತಿಂಗಳಿಗೆ ಹೋಲಿಸಿದರೆ ಎಲ್ಲವುಗಳ ಧಾರಣೆ ದುಪ್ಪಟ್ಟಾಗಿದೆ. ಅಲ್ಲಿ ತೂಕದ(ಎರಡೂವರೆ ಕೇಜಿ) ಲೆಕ್ಕದಲ್ಲಿ ಖರೀದಿಸಿದರೆ, ಬೆಲೆ sಸ್ವಲ್ಪ ಕಡಿಮೆಯಾಗಬಹುದು. ಕೇಜಿ, ಅರ್ಧ ಕೇಜಿ ಲೆಕ್ಕದಲ್ಲಿ ಕೊಂಡರೆ ದುಬಾರಿಯೇ.
ಹುರುಳಿಕಾಯಿ ಕೇಜಿಗೆ 150ರಿಂದ 170, ಬೆಂಡೆಕಾಯಿ, ಬದನೆಕಾಯಿ, ಹೀರೇಕಾಯಿ, ಮೂಲಂಗಿ, ಕ್ಯಾರೇಟು, ಬೀಟ್‍ರೂಟ್, ಆಲೂಗಡ್ಡೆ, ಟೊಮೇಟೊ ಹೀಗೆ, ಯಾವುದು ಕೇಳಿದರೂ ಕೇಜಿಗೆ 50 ರೂ.ಗೆ ಕಡಿಮೆ ಇಲ್ಲ. ಕೊತ್ತಂಬರಿ ಸೊಪ್ಪು ಕಂತೆಗೆ 50 ರೂ. ಅದರಲ್ಲೂ ಫ್ರೆಷ್ ಮಾಲು, ನಿನ್ನೆ ಉಳಿದ ಮಾಲಿಗೆ ರೇಟ್ ಹೆಚ್ಚು ಕಮ್ಮಿ ಇರುತ್ತದೆ. ಕಡಿಮೆ ಮಾಡಿಕೊಳ್ಳಿ ಅಂತ ಕೊಸರಾಡಿದರೆ, ನಾವೇ ಜಾಸ್ತಿ ರೇಟ್ ಕೊಟ್ಟು ತಂದಿದ್ದೀವಿ, ಕಮ್ಮಿ ಕೊಡಲ್ಲ ಎಂದು ಇನ್ನೊಬ್ಬ ಗ್ರಾಹಕರ ಕಡೆ ಗಮನ ಹರಿಸುತ್ತಾರೆ ವ್ಯಾಪಾರಿಗಳು.
ತರಕಾರಿಗೆ ಈಗ ಸೀಸನ್ ಇಲ್ಲ. ಮಾರ್ಕೇಟಿಗೆ ಮಾಲು ಬರ್ತಿಲ್ಲ, ನೀರಿಲ್ಲದೆ ಬೇಸಿಗೆ ಬೆಳೆ ಆಗಿಲ್ಲ, ಈಗ ಮಳೆಗಾಲ ಆರಂಭವಾಗಿದೆ ಇನ್ನೇಲೆ ರೈತರು ಬೆಳೆದು ಮಾಲು ಬಂದರೆ ಬೆಲೆ ಕಡಿಮೆಯಾಗಬಹುದು ಎನ್ನುತ್ತಾರೆ. ಈಗ ತರಕಾರಿ ಬೆಳೆಯವವರೂ ಕಮ್ಮಿಯಾಗಿದ್ದಾರೆ. ವ್ಯವಸಾಯ ಈಗ ಮೊದಲಿನಷ್ಟು ಸುಲಭ ಅಲ್ಲ. ನೀರಿಲ್ಲ, ಬೋರ್‍ವೆಲ್ ಬತ್ತಿ ಹೋಗಿವೆ. ಕೂಲಿ ಆಳುಗಳು ಸಿಗುತ್ತಿಲ್ಲ. ಬೆಳೆದ ಪದಾರ್ಥಕ್ಕೆ ಒಳ್ಳೆ ಬೆಲೆ ಸಿಗುವುದಿಲ್ಲ. ಬೆಳೆದ ಖರ್ಚೂ ಹುಟ್ಟುವುದಿಲ್ಲ ಎಂಬುದು ರೈತರ ಸ್ಥಿತಿ. ದಿನ ದಿನಕ್ಕೂ ಬೆಳೆಯುವವರು ಕಮ್ಮಿಯಾಗಿ, ತಿನ್ನುವವರು ಹೆಚ್ಚಾದಾಗ ಯಾವ ಬೆಲೆ ತಾನೆ ಕಮ್ಮಿ ಇರುತ್ತದೆ ಹೇಳಿ ಎನ್ನುತ್ತಾರೆ ವ್ಯಾಪಾರಿಗಳು.
ಹಬ್ಬಹರಿದಿನಗಳಲ್ಲಿ ತರಕಾರಿ, ಹಣ್ಣು, ಹೂವಿನ ಬೆಲೆಗಳು ನಿನ್ನೆ ಮೊನ್ನೆ ಇದ್ದ ಬೆಲೆಗಿಂತಾ ಎರಡು ಮೂರರಷ್ಟು ಹೆಚ್ಚಾಗಿರುತ್ತದೆ. ಯಾಕೆ ಹೀಗೆ ದಿಢೀರ್ ಬೆಲೆ ಏರಿಕೆಯಾಯಿತು, ನಿಯಂತ್ರಣ ಮಾಡುವವರಿಲ್ಲವೆ ಎಂದು ಗ್ರಾಹಕರು ಗೊಣಗಿಕೊಂಡು, ಎಷ್ಟೇ ಹೆಚ್ಚಾದರೂ ಕೊಳ್ಳಲೇಬೇಕು, ಹಬ್ಬ ಮಾಡಲೇಬೇಕು ಎನ್ನುವ ಅನಿವಾರ್ಯತೆ ಬಲಿಬೀಳುತ್ತಾರೆ. ಪ್ರತಿ ಹಬ್ಬಗಳಲ್ಲೂ ಇಂತಹ ಅನುಭವ ನಗರದ ಎಲ್ಲರಿಗೂ ಆಗಿರುತ್ತದೆ.
ತಿನ್ನುವವನಿಗೆ ಒಂದು ರೂಪಾಯಿ ಖರ್ಚಾದರೆ, ಬೆಳೆದವನಿಗೆ ಸಿಗುವುದೇ ನಾಲ್ಕಾಣೆ ಎಂಬುದು ತರಕಾರಿ ವ್ಯವಹಾರದ ಲೆಕ್ಕಾಚಾರ. ಮಧ್ಯದ ಹನ್ನೆರಡಾಣೆ ಹೋಲ್ ಸೇಲು, ರೀಟೇಲು ಎಂಬ ಮಧ್ಯವರ್ತಿ ವ್ಯಾಪಾರಿಗಳ ಪಾಲು. ರೈತರಿಂದ ಗ್ರಾಹಕರಿಗೆ ನೇರ ಮಾರಾಟ ವ್ಯವಸ್ಥೆ ನಮ್ಮಲ್ಲಿಲ್ಲವಾದ್ದರಿಂದ ಈ ಪರಿಸ್ಥಿತಿ. ಆದರೆ, ಮಧ್ಯವರ್ತಿ ವ್ಯಾಪಾರಿಗಳಿಗೆ ಇದೇ ವ್ಯವಹಾರ, ಇದೇ ಬದುಕು. ರೈತರಿಂದ ಕೊಂಡ ತರಕಾರಿಯನ್ನು ಅಂದೇ ಮಾರಿದರೆ ಅವರಿಗೆ ಲಾಭ, ಒಂದು ದಿನ ಉಳಿದರೂ ಬಾಡುವ ಅವುಗಳಿಗೆ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾ ತ್ತದೆ. ನಮ್ಮಲ್ಲಿ ತರಕಾರಿ ಸಂಗ್ರಹಿಸಿಡುವ ಶೈತ್ಯಾಗಾರ ವ್ಯವಸ್ಥೆ ಇಲ್ಲ ಎನ್ನುತ್ತಾರೆ.
ಮಾರುಕಟ್ಟೆಯಲ್ಲಿ ಹೋಲ್ ಸೇಲ್ ದರದಲ್ಲಿ ತರಕಾರಿ ಕೊಂಡು ತಂದು ವಿವಿಧ ಬಡಾವಣೆಗಳ ಅಂಗಡಿಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುವವರು, ಮಂಕರಿ ಹೊತ್ತು, ತಳ್ಳುವ ಗಾಡಿಗಳಲ್ಲಿ ಮನೆ ಬಾಗಿಲಿಗೆ ತರಕಾರಿ ತಂದು ಮಾರುವ ಚಿಲ್ಲರೆ ವ್ಯಾಪಾರಿಗಳಿಗೆ ತರಕಾರಿ ವ್ಯವಹಾರವೇ ಜೀವನಾಧಾರ. ಮಾರುಕಟ್ಟೆ ದರಕ್ಕಿಂತಾ ಇಂತಹ ವ್ಯಾಪಾರಿಗಳಲ್ಲಿ ತರಕಾರಿಗಳ ಬೆಲೆ ಕೇಜಿಗೆ 10-20 ರೂ ಜಾಸ್ತಿ ಇರುತ್ತದೆ. ಮಾರುವವರಿಗೂ ಲಾಭ ಬೇಕಲ್ಲ. ಇದರ ಜೊತೆಗೆ ನಗರದ ರಿಲಯನ್ಸ್, ಮೋರ್‍ನಂತಹ ವ್ಯಾಪಾರ ಸಂಸ್ಥೆಗಳು ಸ್ಪರ್ಧಾತ್ಮಕ ದರ ನಿಗದಿ ಮಾಡಿ ತರಕಾರಿ ಮಾರಾಟ ಮಾಡುತ್ತಿವೆ. ಒಮ್ಮೊಮ್ಮೆ ಈ ಸಂಸ್ಥೆಗಳ ತರಕಾರಿ ಬೆಲೆ ಮಾರುಕಟ್ಟೆ ಬೆಲೆಗಿಂತಾ ಕಡಿಮೆ ಇರುತ್ತದೆ. ಇದರ ಹೊರತಾಗಿ, ತುಮಕೂರಿನಲ್ಲಿ ತರಕಾರಿ ಮಾರಾಟಕ್ಕೆ ಬೇರೆ ವ್ಯವಸ್ಥೆ ಇಲ್ಲ.
ರೈತರು ಬೆಳೆದು ಮಾರುಕಟ್ಟೆಗೆ ತರುವ ತರಕಾರಿಗೆ ಬೆಲೆ ಕಟ್ಟುವುದು ವ್ಯಾಪಾರಿಗಳು. ಆ ತರಕಾರಿಯ ಅಂದಿನ ಬೇಡಿಕೆ, ಮಾರುಕಟ್ಟೆಗೆ ಬಂದಿರುವ ಮಾಲಿನ ಪ್ರಮಾಣದ ಮೇಲೆ ಬೆಲೆ ನಿಗಧಿ ಮಾಡುತ್ತಾರೆ. ರೈತ ತನಗೆ ಸಮಾಧಾನವಾದರೆ ಮಾರಬಹುದು, ಇಲ್ಲವೆ ತೆಗೆದುಕೊಂಡು ಹೋಗಬಹುದು. ಆದರೆ, ತೆಗೆದುಕೊಂಡು ಇನ್ನೇಲ್ಲಿಗೆ ಹೋಗುವುದು, ಚೌಕಾಸಿ ಮಾಡಿ, ಕೊಸರಾಡಿ ಒಂದು ಬೆಲೆಗೆ ಮಾರಿಯೇ ಹೋಗಬೇಕು, ಅದರಿಂದ ಆತನಿಗೆ ಲಾಭವಾಗುವುದೊ, ನಷ್ಟವಾಗುವುದೊ ಅವನ ಹಣೆಬರಹ ಎನ್ನುವ ಪರಿಸ್ಥಿತಿ.
ರೈತ ತನ್ನ ಉತ್ಪನ್ನಗಳಿಗೆ ತಾನು ಬೆಲೆ ನಿಗಧಿ ಮಾಡುವ ಪರಿಸ್ಥಿತಿ ಇಲ್ಲ. ನೇರವಾಗಿ ಗ್ರಾಹಕರಿಗೆ ಮಾರುವ ಅನುಕೂಲವೂ ತುಮಕೂರಿನಲ್ಲಿ ಇಲ್ಲ. ಹೀಗಾಗಿ ತರಕಾರಿ ವ್ಯವಹಾರ ತಿನ್ನುವವರಿಗೆ ಹೊರೆ, ಬೆಳೆಯುವವರಿಗೆ ಬರೆ ಎನ್ನುವಂತಾಗಿದೆ. ನಮ್ಮಲ್ಲಿ ರೈತರು ತರುವ ತರಕಾರಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡುವ ವ್ಯವಸ್ಥೆ ಆಗಬೇಕು. ಹಾಪ್‍ಕಾಮ್ಸ್ ರೀತಿಯ ಸರ್ಕಾರ ಅಧೀನ ಸಂಸ್ಥೆಗಳು ನ್ಯಾಯಯುತ ಬೆಲೆ ನೀಡಿ ರೈತರಿಂದ ತರಕಾರಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಆಗಬೇಕು.
ರೈತರಿಂದ ಹಣ್ಣು, ತರಕಾರಿ ಖರೀದಿಸಿ ನೇರ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದಲೇ ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದೆ. ಆದರೆ, ಈ ವ್ಯವಸ್ಥೆ ಸಮರ್ಪಕವಾಗಿಲ್ಲ. ನಗರದಲ್ಲಿರುವ ಬೆರಳೆಣಿಕೆಯ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಹಣ್ಣು ಮಾರಾಟ ಮಾಡಲಾಗುತ್ತಿದೆ. ತರಕಾರಿ ಮಾರಾಟ ಕೈಬಿಟ್ಟಿದ್ದಾರೆ.
ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ನಿರ್ವಹಣೆ ಮಾಡುತ್ತದೆಯಾದರೂ ಅಲ್ಲಿ ತರಕಾರಿಗಳ ಬೆಲೆ ನಿಗದಿ, ಖರೀದಿ, ಮಾರಾಟ ಮಾಡುವ ವ್ಯವಸ್ಥೆ ಸಂಸ್ಥೆ ವಹಿಸಿಕೊಂಡಿಲ್ಲ. ಇಲ್ಲಿ ವ್ಯಾಪಾರಿಗಳೇ ರೈತರು ತರುವ ತರಕಾರಿಯ ಬೆಲೆ ನಿರ್ಧಾರ ಮಾಡುತ್ತಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ಮಿನಿ ಮಾರುಕಟ್ಟೆ ಸ್ಥಾಪನೆ ಮಾಡಬೇಕು ಎಂದು ಈ ಹಿಂದೆ ನಗರಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳ:ಲಾಗಿತ್ತು. ಆದರೆ, ಈವರೆಗೂ ಅಂತಹ ಪ್ರಯತ್ನ ಆಗಿಲ್ಲ. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನವರು ನಿರುಪಯೋಗಿಯಾಗಿರುವ ಸಾರ್ವಜನಿಕ ಸ್ಥಳಗಳಲ್ಲಿ ಕಿರು ವ್ಯಾಪಾರ ಮಳಿಗೆಗಳನ್ನು(ವೆಂಡಿಂಗ್ ಜೋನ್) ಸ್ಥಾಪನೆ ಮಾಡುವ ಯೋಜನೆ ರೂಪಿಸಿದ್ದಾರೆ. ಅಂತಹ ಕಡೆ ಆ ಮಳಿಗೆಗಳಲ್ಲಿ ತರಕಾರಿ ಮಾರಾಟ ಮಾಡಲು ಹಾಪ್ ಕಾಮ್ಸ್‍ಗೆ ಅವಕಾಶ ಮಾಡಬಹುದು.
ತುಮಕೂರು ನಗರ ವೇಗವಾಗಿ ಬೆಳವಣಿಗೆಯಾಗುತ್ತಿದೆ, ಜನಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ನಾಗರೀಕರಿಗೆ ದಿನ ಬಳಕೆ ವಸ್ತಗಳಲ್ಲಿ ಮುಖ್ಯವಾದ ತರಕಾರಿ ಪೂರೈಕೆ ವ್ಯವಸ್ಥೆ ಕೂಡಾ ಸ್ಥಳೀಯ ಆಡಳಿತ ಕಾಳಜಿವಹಿಸಬೇಕು. ಎಲ್ಲಾ ಬಡಾವಣೆ ನಾಗರೀಜರಿಗೂ ಏಕ ರೂಪದ ದರದಲ್ಲಿ ತರಕಾರಿ ದೊರೆಯವಂತಹ ಅನುಕೂಲ ಮಾಡಬೇಕು. ಎಪಿಎಂಸಿ ಅಥವಾ ಹಾಪ್ ಕಾಮ್ಸ್‍ನಂತಹ ಸರ್ಕಾರಿ ಅಧೀನದ ಸಂಸ್ಥೆಗಳು ತರಕಾರಿ ವ್ಯವಹಾರವನ್ನು ವಹಿಸಿಕೊಂಡು ರೈತರಿಗೆ, ಗ್ರಾಹಕರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
