ಕೂಡ್ಲಿಗಿ:
ತಾಲ್ಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಲು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ದಿಶೆಯಲ್ಲಿ ಇದೇ 24ರಂದು ಕೂಡ್ಲಿಗಿ ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಶನಿವಾರ ಬಡ ವಿದ್ಯಾರ್ಥಿ ನಿಲಯದಲ್ಲಿ ನಡೆದ ತಾಲ್ಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ನೇತೃತ್ವ ವಹಿಸಿದ್ದ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸ್ವಾಮಿ ಮಾತನಾಡಿ, 15 ವರ್ಷಗಳಿಂದಲೂ ತಾಲ್ಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಬೇಕು ಎಂದು ಅನೇಕ ಹೋರಾಟಗನ್ನು ನಡೆಸುತ್ತ ಬರಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಈಗ ನಡೆಯುತ್ತಿರುವ ಹೋರಾಟಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು ಬೆಂಬಲ ಹಾಗೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಗುರುಸಿದ್ದನಗೌಡ ಮಾತನಾಡಿ, ಭದ ಮೇಲ್ದಂಡೆ ಯೋಜನೆ ಜಾರಿ ವಿಷಯವಾಗಿ ಈಗಾಗಲೇ ನ್ಯಾಯಾಲಯದಲ್ಲಿ ಎರಡು ರಿಟ್ ಅರ್ಜಿಗಳನ್ನು ಹಾಕಲಾಗಿದೆ. ಭದ್ರ ಮೇಲ್ದಂಡೆ ಯೋಜನೆಯಲ್ಲಿ ಸದ್ಯದ ಸ್ಥಿತಿಯಲ್ಲಿ ತಾಲ್ಲೂಕಿಗೆ ನೀರಿನ ಲಭ್ಯತೆ ಇಲ್ಲ ಎಂದು ತಿಳಿದು ಬಂದಿದೆ. ಅದ್ದರಿಂದ ಇದಕ್ಕೆ ಪರ್ಯಾಯವಾಗಿ ಗರ್ಭಗುಡಿ ಯೋಜನೆಯಿಂದಲಾದರೂ ತಾಲ್ಲೂಕಿಗೆ ನೀರಾವರಿ ಕಲ್ಪಿಸಬಹುದಾಗಿದೆ. ಈ ವಿಷಯದಲ್ಲಿ ಸ್ಥಳೀಯ ಶಾಸಕರು ಸರ್ಕಾರ ಮಟ್ಟದಲ್ಲಿ ಒತ್ತಾಯ ಹಾಕಿದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾನಾಮಡುಗು ದಾಸೋಹಮಠದ ಶರಣಾರ್ಯರು ಸಭೆಯ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸೇನೆ ಕರ್ನಾಟಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ. ರಜನಿಕಾಂತ್, ಹೋರಾಟ ಸಮಿತಿಯ ಕಕ್ಕುಪ್ಪಿ ಬಸವರಾಜ, ವಕೀಲ ಡಿ.ಹೆಚ್. ದುರುಗೇಶ, ಸಾಲುಮನಿ ರಾಘವೇಂದ್ರ, ಟಿ.ಜಿ. ಮಲ್ಲಿಕಾರ್ಜುನಗೌಡ, ಕೆ.ಹೆಚ್. ಎಂ.ಸಚಿನ್, ಮಾಳಗಿ ಗುರುರಾಜ, ಕೆ.ಜಿ. ಬಸವರಾಜ, ರೈತ ಸಂಘದ ವಿ. ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.