ಹೊಸಪೇಟೆ:
ಹೊಸಪೇಟೆ-ಕೊಟ್ಟೂರು ನಡುವಿನ ಮಾರ್ಗದಲ್ಲಿ ಪ್ಯಾಸೆಂಜರ್ ರೈಲನ್ನು ಆ. 31ರೊಳಗೆ ಓಡಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ರೈಲ್ವೆ ಸಲಹಾ ಸಮಿತಿ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ್ದ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಪ್ರಯಾಣಿಕರ, ಜನರ ಬೇಡಿಕೆಯಾಗಿರುವ ಹೊಸಪೇಟೆ-ಕೊಟ್ಟೂರು ನಡುವಿನ ರೈಲು ಸಂಚಾರ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೇ ಮನವಿ ಸಲ್ಲಿಸಿದ ಪ್ರತಿ ಸಂದರ್ಭದಲ್ಲಿಯೂ ರೈಲು ಆರಂಭಿಸುವ ಬಗ್ಗೆ ಭರವಸೆ ನೀಡಲಾಗುತ್ತಿದೆಯಾದರೂ ಈವರೆಗೂ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯಿಸಲಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ ವ್ಯವಸ್ಥಾಪಕ ಅಜಯ್‍ಕುಮಾರ್ ಸಿಂಗ್, ಈ ಮಾರ್ಗದಲ್ಲಿ ಕೆಲವು ಚಿಕ್ಕಪುಟ್ಟ ಕಾಮಗಾರಿಗಳು ಬಾಕಿ ಉಳದಿದೆ. ತ್ವರಿತವಾಗಿ ಕಾಮಗಾರಿಗಳನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಮುಗಿಯಲಿದೆ ಎಂದರು.
ಜಿಲ್ಲೆಯ ಟಿ.ಬಿ.ಡ್ಯಾಂ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲ ಸೌಲಭ್ಯಗಳ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ದೂಪದಹಳ್ಳಿ, ಪಿಂಜಾರ್‍ಹೆಗ್ಡಾಳ್, ಕ್ಯಾತ್ಯಾಯನಮರಡಿ, 3 ರೈಲ್ವೆ ಗೇಟುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದ್ದು ಈ ಎಲ್ಲಾ ಕಾಮಗಾರಿಗಳನ್ನು ಆ.15ರೊಳಗೆ ಪೂರ್ಣಗೊಳಿಸುವಂತೆ ಆದೇಶಿಸಿಲಾಗಿದೆ ಎಂದರು.
ನಿಗದಿತ ಸಮಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸಪೇಟೆ-ಕೊಟ್ಟೂರು ನಡುವೆ ರೈಲು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ನಗರದ ಅನಂತಶಯನಗುಡಿ ರೈಲ್ವೆ ಗೇಟ್ ನಂ:85 ಮೇಲ್ಸೇತುವೆ ನಿರ್ಮಾಣಕ್ಕೆ ಈಗಾಗಲೇ ರೈಲ್ವೆ ಬಜೆಟ್‍ನಲ್ಲೆ ಹಣ ಮಂಜೂ ರಾಗಿದೆ. ರಾಜ್ಯ ಸರಕಾರ ಸಹ ತನ್ನ ಪಾಲಿನ ಶೇ. 50%ರಷ್ಟು ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಎಂ. ಶ್ಯಾಮಪ್ಪ ಅಗೋಲಿ, ಟಿ. ತಿಪ್ಪೇಸ್ವಾಮಿ, ಡಾ. ಜೋಗಳೇಕರ್, ವಿಶ್ವನಾಥ ಕೌತಾಳ್, ದೀಪಕ್ ಉಳ್ಳಿ, ಕಾಶಿನಾಥ ಕುಲಕರ್ಣಿ, ಎಚ್. ಪೀರಾನ್‍ಸಾಬ್, ಶ್ರೀನಿವಾಸ್, ಪ್ರಭಾಕರ್, ದೇವರೆಡ್ಡಿ, ಕೆ. ಮಹೇಶ್ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
