ಬಳ್ಳಾರಿ
ಸಮಾಜಕಲ್ಯಾಣ ಇಲಾಖೆಗಳ ವಸತಿ ನಿಲಯಗಳಲ್ಲಿ ಸರಕಾರ ಅನುಮೋದನೆ ನೀಡಿರುವುದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಮತ್ತು ಇತ್ತೀಚೆಗೆ ಹೊರಡಿಸಿದ ಹೆಚ್ಚುವರಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ತೆಗೆದುಹಾಕಿ ಎನ್ನುವುದಕ್ಕೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವಗುಪ್ತಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಸಾರ ಹಾಸ್ಟೆಲ್‍ಗಳಲ್ಲಿ ಅನುಮೋದನೆಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು 2013ರಲ್ಲಿ ಹೊರಡಿಸಿದ ಆದೇಶದ ಅನುಸಾರ ತೆಗೆದುಕೊಳ್ಳಲಾಗುತ್ತಿತ್ತು.ಹೆಚ್ಚುವರಿ ವಿದ್ಯಾರ್ಥಿಗಳಿಗೆ ಆಹಾರ ಭತ್ಯೆ ಹಾಗೂ ಇನ್ನೀತರ ಖರ್ಚುಗಳಿಗೆ ಅನುದಾನ ನೀಡಲಾಗುತ್ತಿತ್ತು. ಆದರೇ ಆಗಸ್ಟ್ ತಿಂಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ತೆಗೆದುಹಾಕಿ ಅಂತ ಆದೇಶ ಹೊರಡಿಸಲಾಗಿದೆ.
ಈಗಾಗಲೇ ಜೂನ್-ಜುಲೈನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿರುವುದರಿಂದ ಸಮಸ್ಯೆ ಉದ್ಬವಿಸಿದೆ. ಮೆಟ್ರಿಕ್ ಪೂರ್ವ 5220 ಅನುಮೋದನೆಯಾದ ಸೀಟುಗಳಿದ್ದರೇ 6197 ವಿದ್ಯಾರ್ಥಿಗಳು, ಮೆಟ್ರಿಕ್ ನಂತರ 3330 ಅನುಮೋದನೆಯಾದ ಸೀಟುಗಳಿದ್ದರೇ 3811 ವಿದ್ಯಾರ್ಥಿಗಳನ್ನು ಪ್ರವೇಶ ಪಡೆದುಕೊಳ್ಳಲಾಗಿದೆ ಎಂದು ಸಭೆಗೆ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ ಅವರು ವಿವರಿಸಿದರು.
ಇದಕ್ಕುತ್ತರಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವಗುಪ್ತಾ ಅವರು ಇದು ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲಾಗುವುದು ಎಂದು ಅವರು ಹೇಳಿದರು.
ಪರಿಶಿಷ್ಟ ವರ್ಗಗಳ ಜನರು ಬಳ್ಳಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಳ್ಳಾರಿ ತಾಲೂಕಿನಲ್ಲಿ ಅವರ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ವಸತಿ ನಿಲಯಗಳಿಲ್ಲ. ತಾವು ಮುತುವರ್ಜಿ ವಹಿಸಿ ಮಾಡಿಸಬೇಕು ಮತ್ತು ಸಮಾಜಕಲ್ಯಾಣ ಇಲಾಖೆಯಂತೆ ಪರಿಶಿಷ್ಟ ವರ್ಗಗಳ ವಸತಿನಿಲಯಗಳಲ್ಲಿಯೂ ಹೆಚ್ಚುವರಿ ವಿದ್ಯಾರ್ಥಿಗಳ ಸಮಸ್ಯೆ ಇದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶುಭಾ ಅವರು ಸಭೆಗೆ ವಿವರಿಸಿದರು. ಇದನ್ನು ಉಸ್ತುವಾರಿ ಕಾರ್ಯದರ್ಶಿಗಳು ಪಟ್ಟಿ ಮಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ