ಬೆಂಗಳೂರು
ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ ಸುಮಾರು 3500 ವಸತಿ ನಿಲಯಗಳನ್ನು ನಡೆಸುತ್ತಿದ್ದು, ಇವುಗಳ ಸಮಗ್ರ ಸ್ವರೂಪವನ್ನು ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ವಸತಿ ನಿಲಯಗಳನ್ನು ಸಮಗ್ರವಾಗಿ ಸುಧಾರಣೆ ಮಾಡಲಾಗುವುದು. ವಸತಿನಿಲಯಗಳ ಸುಧಾರಣೆಗಾಗಿ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ತನ್ನ ವರದಿ ನೀಡಿದ ನಂತರ ಸುಧಾರಣೆ ಪರ್ವ ಆರಂಭವಾಗಲಿದೆ ಎಂದರು.
ವಸತಿನಿಲಯಗಳ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಮೌಢ್ಯತೆಗೆ ಅವಕಾಶ ನೀಡದಂತೆ ಮಕ್ಕಳ ಮನಸ್ಸನ್ನು ಬೆಳೆಸುವಲ್ಲಿ ಪೂರಕವಾಗಬೇಕು. ಕುತೂಹಲ ಮೂಡುವಂತಹ ವಾತಾವರಣವನ್ನು ಮಕ್ಕಳಲ್ಲಿ ಸೃಷ್ಟಿಸುವದರೊಂದಿಗೆ ಅವರಲ್ಲಿ ಪ್ರಶ್ನೆ ಮಾಡುವಂತಹ ಮನಸ್ಥಿತಿಯನ್ನು ತರಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ರಾಜ್ಯಾದಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್ನುಗಳ ಸೇವಾ ವಿಷಯದಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಶಿಫಾರಸುಗಳನ್ನು ಮಾಡುವಂತೆ ಈಗಾಗಲೆ ರಚಿಸಲಾಗಿರುವ ಸಮಿತಿಗೆ ಮನವಿ ಮಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ