ಹೊಸಪೇಟೆ :
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನಗೆ ನಿರಾಸೆಯೂ ಆಗಿಲ್ಲ. ನನ್ನ ಗುರಿ ವಿಜಯನಗರ ಜಿಲ್ಲೆಯಾಗಬೇಕು ಅಷ್ಟೇ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಹೇಳಿದರು.
ಇಲ್ಲಿನ ಪಟೇಲನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಹಲವಾರು ನಾಯಕರು ದುಡಿದಿದ್ದಾರೆ. ಕಾಂಗ್ರೆಸ್ ಪಕ್ಷವು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ್ ಹಾಗು ಇ.ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಿ ಸೂಕ್ತವಾದ ನಿರ್ಧಾರ ಮಾಡಿದೆ ಎಂದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ಆನಂದಸಿಂಗ್ ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆಯಲ್ಲಾ ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ “ ಇದೊಂದು ಸುಳ್ಳು ಸುದ್ದಿ. ನಾನು ಖಂಡಿತಾ ಪಕ್ಷ ಬಿಡುವುದಿಲ್ಲ. 2 ವರ್ಷದ ನಂತರ ಸಂಪುಟ ಪುನಾರಚನೆ ಮಾಡಿ ಉಳಿದವರಿಗೆ ಅವಕಾಶ ನೀಡಲಾಗುವುದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಹೇಳಿದ್ದಾರೆ. ಹೀಗಾಗಿ ನಾವು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ತಿಳಿಸಿದರು.
ಎಲ್ಲರೂ ಸಚಿವ ಸ್ಥಾನ ಬಯಸುವುದು ತಪ್ಪೇನು ಅಲ್ಲ. ಆದರೆ ಸಿಗದಿದ್ದಾಗ ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ. ನಮ್ಮ ಅಭಿಪ್ರಾಯ ಏನೇ ಇದ್ದರು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಮಾಧ್ಯಮಗಳ ಮುಂದೆ ಹೋಗಬಾರದು ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಜಿ.ಪಂ, ತಾ.ಪಂ, ಹಾಗು ಗ್ರಾ.ಪಂ. ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲಾಗುವುದು. 2 ವರ್ಷದ ನಂತರ ಸಚಿವ ಸ್ಥಾನದ ಬೇಡಿಕೆ ಮಂಡಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.ಮಾಜಿ ಶಾಸಕ ರತನ್ಸಿಂಗ್, ಮುಖಂಡರಾದ ಧರ್ಮೇದ್ರಸಿಂಗ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
