ಬೆಂಗಳೂರು: 
ಮೈತ್ರಿ ಸರ್ಕಾರ ಪತನವಾಗಿ ಹೊಸ ಸರ್ಕಾರ ಬಂದ ತಕ್ಷಣ ಕೆದಕಿಕೊಂಡ ಟೆಲಿಫೋನ್ ಕದ್ದಾಲಿಕೆ ಪ್ರಕರಣ ರಾಜ್ಯ ರಾಜಕೀಯ ಮಾತ್ರವಲ್ಲದೆ ಧಾರ್ಮಿಕ ಸಂಸ್ಥೆಗಳಿಗೂ ಹಬ್ಬಿ ಸುದ್ದಿ ಮಾಡಿದೆ ಇನ್ನು ಈ ಪ್ರಕರಣದ ಪ್ರಮುಖ ಸಾಕ್ಷ್ಯವಾದ ಕದ್ದಾಲಿಕೆ ಧ್ವನಿಗಳುಳ್ಳ ಪೆನ್ ಡ್ರೈವ್ ಎಲ್ಲಿದೆ ಎಂಬದು ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.
ಪೆನ್ ಡ್ರೈವ್ ನಲ್ಲಿರುವ ಮಾಹಿತಿಯನ್ನು ಡೌನ್ ಲೋಡ್ ಮಾಡಿ ಅದನ್ನು ಬಳಸಿಕೊಳ್ಳಲು ಸಿಸಿಬಿ ಅಧಿಕಾರಿಗಳಿಗೆ ಯಾರು ನಿರ್ದೇಶನ ನೀಡಿದ್ದರು ಎಂಬ ಪ್ರಶ್ನೆ ಸಿಬಿಐ ಅಧಿಕಾರಿಗಳ ನಿದ್ದೆ ಕೆಡಿಸಿದೆ.
ಮಾಜಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಈ ಬಗ್ಗೆ ಪ್ರಶ್ನಿಸಿದರೇ, ನನಗೆಯಾವ ಪೆನ್ ಡ್ರೈವ್ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೆನ್ ಡ್ರೈವ್ ನಲ್ಲಿ ಮೂರು ಆಡಿಯೋ ಕ್ಲಿಪ್ ನಲ್ಲಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಬ್ರೋಕರ್ ಪರಾಜ್ ಅಹ್ಮದ್ ಎಂಬುವರ ನಡುವೆ ನಡೆದಿರುವ ಸಂಭಾಷಣೆಯನ್ನು ಡೌನ್ ಲೋಡ್ ಮಾಡಲು ಅಲೋಕ್ ಕುಮಾರ್ ಹೇಳಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಅಲೋಕ್ ಕುಮಾರ್ ತಮಗೆ .ಯಾವ ಪೆನ್ ಡ್ರೈವ್ ಬಗ್ಗೆಯೂ ತಿಳಿದಿಲ್ಲವೆಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಅಲೋಕ್ ಕುಮಾರ್ ಅವರು ಪೆನ್ ಡ್ರೈವ್ ನಲ್ಲಿದ್ದ ಆಡಿಯೋ ಫೈಲ್ ಗಳನ್ನು ಡೌನ್ ಲೋಡ್ ಮಾಡುವಂತೆ ಹೇಳಿದ್ದರು, ಅದರಂತೆ ನಾವು ಡೌನ್ ಲೋಡ್ ಮಾಡಿದ್ದೆವು ಎಂದು ಸಿಸಿಬಿ ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಮಾಲ್ತೇಶ್ ಮತ್ತು ಮಿರ್ಜಾ ಅಲಿ ಅವರು ಸಿಬಿಐ ಅಧಿಕಾರಿಗಳ ಮುಂದೆ ಸತ್ಯ ಒಪ್ಪಿಕೊಂಡಿದ್ದರು.
ಈ ಫೈಲ್‌ಗಳನ್ನು ಕೆಲವು ದೃಶ್ಯ ಮಾಧ್ಯಮ ವ್ಯಕ್ತಿಗಳಿಗೆ ತಮ್ಮ ವಾಟ್ಸಾಪ್ ಸಂಖ್ಯೆಯಲ್ಲಿ ಇನ್ನೊಬ್ಬ ಐಪಿಎಸ್ ಅಧಿಕಾರಿ ಕಳುಹಿಸಿದ್ದಾರೆ, ಅವರು ಅಲೋಕ್ ಕುಮಾರ್‌ಗೆ ಹತ್ತಿರವಾಗಿದ್ದಾರೆ ಎಂದು ವರದಿಯಾಗಿತ್ತು. ಹಾಗಿದ್ದರೂ ಅಲೋಕ್ ಕುಮಾರ್ ತಮ್ಮ ಇದ್ಯಾವುದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








