ಮನೆಯಲ್ಲೆ ಕೋವಿಡ್ ಚಿಕಿತ್ಸೆ : ಐಸಿಎಂಆರ್ ಅನುಮೋದನೆ..!

ಬೆಂಗಳೂರು

      ಕೊರೋನಾ ಸೋಂಕಿನ ಲಕ್ಷಣಗಳು ಗೋಚರಿಸದ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಒದಗಿಸುವ ಸರ್ಕಾರದ ಪ್ರಸ್ತಾವನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅನುಮೋದನೆ ನೀಡಿದೆ.

     ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಸೋಂಕಿನ ಲಕ್ಷಣಗಳಿಲ್ಲದವರಿಗೆ ಮನೆಯಲ್ಲಿ ಚಿಕಿತ್ಸೆ ನೀಡುವುದಾಗಿ ಸರ್ಕಾರ ಐಸಿಎಂಆರ್ ಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಐಸಿಎಂಆರ್ ಅನುಮೋದನೆ ನೀಡಿದೆ.

     ಹೋಂ ಐಸೋಲೇಷನ್ ಮತ್ತು ಚಿಕಿತ್ಸೆ ಬಗ್ಗೆ ಮಾರ್ಗಸೂಚಿ ಬಿಡುಗಡೆಗೊಳಿಸಿರುವ ಆರೋಗ್ಯ ಇಲಾಖೆ, ಕೊರೊನಾ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ಆರಂಭಿಸುವ ಮುನ್ನ ಜಿಲ್ಲಾ ಆರೋಗ್ಯ ಪ್ರಾಧಿಕಾರ ಅಥವಾ ಬಿಬಿಎಂಪಿಯ ಆರೋಗ್ಯ ತಂಡವು ಮನೆಗೆ ಭೇಟಿ ನೀಡಿ, ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಅಗತ್ಯ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಬೇಕು. ರೋಗಿಗಳ ಕೈಗೆ ಟ್ಯಾಗ್ ಅಳವಡಿಸಲಾಗುವುದು. ಮನೆಯ ಪ್ರವೇಶ ದ್ವಾರಕ್ಕೆ ಭಿತ್ತಿ ಪತ್ರ ಅಂಟಿಸಲಾಗುತ್ತದೆ ಎಂದು ತಿಳಿಸಿದೆ.

    ಉತ್ತಮವಾಗಿ ಗಾಳಿ, ಬೆಳಕು ಇರುವ ಕೊಠಡಿ ಹಾಗೂ ಪ್ರತ್ಯೇಕ ಶೌಚಾಲಯ ಇರಬೇಕು. ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಹಾಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಹೊಂದಿರಬೇಕು. ರೋಗಿಗಳು ಟೆಲಿ ಕನ್‍ಸಲ್ಟೇಶನ್ ಮೂಲಕ ಚಿಕಿತ್ಸೆಯ ಮಾಹಿತಿ ಪಡೆದುಕೊಳ್ಳಬೇಕು. ಆರೋಗ್ಯದ ಸ್ಥಿತಿಗತಿಯ ಬಗ್ಗೆ ಪ್ರತಿನಿತ್ಯ ವೈದ್ಯರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೋಂ ಐಸೋಲೇಷನ್ ನಿಯಮಗಳನ್ನು ಕುಟುಂಬದ ಸದಸ್ಯರು ಕೂಡ ತಿಳಿದಿರಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

      ಆದರೆ, 50 ವರ್ಷ ಮೇಲ್ಪಟ್ಟವರು, ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‍ಐವಿ, ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಮಾರ್ಗಸೂಚಿ ತಿಳಿಸಿದೆ.
ಆರೈಕೆಗೆ ಒಳಗಾದವರಿಗೆ ಕೊರೊನಾ ಸೋಂಕು ಲಕ್ಷಣಗಳು 17 ದಿನಗಳವರೆಗೆ ಗೋಚರಿಸದಿದ್ದಲ್ಲಿ ಹಾಗೂ 10 ದಿನಗಳಿಂದ ಜ್ವರ ರಹಿತರಾಗಿದ್ದಲ್ಲಿ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಿ, ಆರೈಕೆಯನ್ನು ಮುಕ್ತಾಯಗೊಳಿಸಬಹುದು. ಈ ರೀತಿ ಆರೈಕೆಗೆ ಒಳಗಾದವರಿಗೆ ಕೋವಿಡ್ ಪರೀಕ್ಷೆಯ ಅಗತ್ಯ ಇಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap