ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದರೆ ತಕ್ಷಣ ಕೆಲಸ- ಸಿಇಓ

ಹಾವೇರಿ

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬುಧವಾರ ಭೇಟಿ ನೀಡಿ ಬರ ಪರಿಹಾರ ಕಾಮಗಾರಿ ಹಾಗೂ ಜಲಾಮೃತ ಯೋಜನೆಯಡಿ ಬೆಳೆಸಲಾದ ಸಸಿಗಳ ಬೆಳವಣಿಗೆ ಕುರಿತಂತೆ ಪರಿಶೀಲನೆ ನಡೆಸಿದರು.

       ಶಿಗ್ಗಾಂವ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮುಗಳಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಹಂಚಿನಮನೆ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿದರು. ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಕೂಲಿಕಾರರ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದ ಕೆ.ಲೀಲಾವತಿ ಅವರು ಬರಗಾಲ ಪರಿಸ್ಥಿತಿಯಲ್ಲಿ ಯಾರೂ ಕೆಲಸ ಹುಡುಕಿ ಗುಳೆಹೋಗುವುದು ಅವಶ್ಯವಿಲ್ಲ.

        ಸ್ಥಳೀಯವಾಗಿಯೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುವುದು. ಸಮಯಕ್ಕೆ ಸರಿಯಾಗಿ ಕೂಲಿ ಹಣ ಸಹ ಪಾವತಿಸಲಾಗುವುದು. ಕೆಲಸದ ಬೇಡಿಕೆಯನ್ನು ಗ್ರಾಮ ಪಂಚಾಯತಿಗಳಿಗೆ ಸಲ್ಲಿಸುವಂತೆ ಸಲಹೆ ನೀಡಿದರು.ಹಳೇ ಬಂಕಾಪುರದಿಂದ ಶಿಶುನಾಳ ದೇವರ ರಸ್ತೆ ಕಮಾಗಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಲಿಕಾರರೊಂದಿಗೆ ಚರ್ಚಿಸಿ ಸ್ವಚ್ಛ ಭಾರತ ಮಿಷನ್‍ನಡಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸಿ ಉದ್ಯೋಗ ಖಾತ್ರಿಯಡಿ ತಮಗೆ ಸ್ಥಳೀಯವಾಗಿಯೇ ಕೆಲಸ ನೀಡಿ ಸಮಯಕ್ಕೆ ಸರಿಯಾಗಿ ಕೂಲಿ ಹಣ ನೀಡುವುದಾಗಿ ಕೆಲಸಗಾರರಿಗೆ ತಿಳಿಸಿದರು.

        ಹಿರೇಕೆರೂರು ತಾಲೂಕಿನ ಯೋಗಿಕೊಪ್ಪ ಗ್ರಾಮಕ್ಕೆ ಭೇಟಿ ಅರಣ್ಯ ಇಲಾಖೆಯಿಂದ ಜಲಾಮೃತ ಯೋಜನೆಯಡಿ ಹಸರೀಕರಣಕ್ಕಾಗಿ ಬೆಳೆಸಲಾದ ಸಸಿಗಳ ಬೆಳವಣಿಗೆ ಕುರಿತಂತೆ ಪರಿಶೀಲನೆ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಇಲಾಖೆಯ ಒಗ್ಗೂಡಿಸುವಿಕೆ ಕಾಮಗಾರಿಯಾದ ರಸ್ತೆ ಬದಿ ಸಸಿ ನಡೆಸುವ ಕಾಮಗಾರಿಯನ್ನು ವೀಕ್ಷಿಸಿದರು. ಮಳೆ ಆರಂಭಗೊಂಡ ತಕ್ಷಣ ಸಸಿ ನೆಡುವ ಕುರಿತಂತೆ ಸಿದ್ಧತೆ ಕೈಗೊಳ್ಳುವಂತೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

       ತಾಲೂಕಿನ ತಾವರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸರೀಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸದಲ್ಲಿ ನಿರತವಾಗಿದ್ದ ಕೂಲಿಕಾರರೊಂದಿಗೆ ಚರ್ಚಿಸಿದರು. ಉದ್ಯೋಗಕ್ಕಾಗಿ ಬೇರೆ ಪ್ರದೇಶಕ್ಕೆ ಗುಳೆಹೋಗದೆ ಸ್ಥಳೀಯವಾಗಿ ಕಾರ್ಯನಿರ್ವಗಿಸಿ. ನಿಮಗೆ ದುಡಿಯುವಷ್ಟು ದಿನ ಕೆಲಸ ಹಾಗೂ ಕೂಲಿ ನೀಡಲಾಗುವುದು ಎಂದು ತಿಳಿಸಿದರು.

       ಇದೇ ಸಂದರ್ಭದಲ್ಲಿ ಕರವಸೂಲಾತಿ, ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದರು. ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap