ಲಾಭ ಗಳಿಕೆಗೆ ಸಮಗ್ರ ಕೃಷಿ ಪದ್ಧತಿ ಸಹಕಾರಿ

0
34

ದಾವಣಗೆರೆ:

       ಸಮಗ್ರ ಕೃಷಿಯಿಂದ ಉತ್ತಮ ಲಾಭಗಳಿಕೆ ಸಾಧ್ಯವಾಗಲಿದೆ ಎಂದು ಕೃಷಿತಜ್ಞ ಡಾ.ಹುಲ್ಲುನಾಚೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ರಾಜ್ಯ ಕೃಷಿ ಅಭಿಯಾನ ಟ್ರಸ್ಟ್, ಸಾವಯವ ಕೃಷಿ ತರಬೇತಿ ಕೇಂದ್ರ, ಹಾಗೂ ಕೋಡಿಹಳ್ಳಿ ಗ್ರಾಮಸ್ಥರ ಸಹಯೋಗದೊಂದಿಗೆ ಏರ್ಪಡಿಸಿದ್ದ ಮಾದರಿ ಸಮಗ್ರ ಸುಸ್ಥಿರ ಕೃಷಿ ಗ್ರಾಮ ಯೋಜಿತ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಕೃಷಿಯಲ್ಲಿ ಯಶಸ್ಸನ್ನು ಪಡೆಯಲು ಜ್ಞಾನವನ್ನು ಪಡೆದುಕೊಂಡು, ನಿಮ್ಮ ಜಮೀನುಗಳಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ, ನಿಮ್ಮ ಊರಿನಲ್ಲಿ ನೀವೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ರೈತರು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಕಿವಿಮಾತು ಹೇಳಿದರು.

     ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಮಾದರಿ ಸುಸ್ಥಿರ ಸಮಗ್ರ ಕೃಷಿ ಗ್ರಾಮಗಳನ್ನು ಆಯ್ಕೆಮಾಡಿ, ಸಮಗ್ರ ಕೃಷಿಯಲ್ಲಿ ಒಂದು ಎಕರೆಯಲ್ಲಿ ಶೇ. 33, 33, 33, 1ರ ಅನುಪಾತದಲ್ಲಿ ಅಂದರೆ 33% ಆಹಾರ ಬೆಳೆಗಳು 33% ವಾಣಿಜ್ಯ ಬೆಳೆಗಳು 33% ಅರಣ್ಯ ಬೆಳೆಗಳು 1% ಉಪಕಸುಬುಗಳು ಈ ರೀತಿಯಾಗಿ ಸಮಗ್ರ ಕೃಷಿ ಚಟುವಟಿಕೆಗಳನ್ನು ಆ ಗ್ರಾಮಗಳಲ್ಲಿ ಕೈಗೊಂಡು ರೈತ ಭಾಂಧವರನ್ನು ಸ್ವಾವಲಂಭಿಗಳನ್ನಾಗಿ ಮಾಡುವುದೇ ಈ ಟ್ರಸ್ಟ್‍ನ ಉದ್ದೇಶವಾಗಿದೆ ಎಂದರು.

       ಕಾರ್ಯಕ್ರಮಕ್ಕೂ ಮುನ್ನ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಮನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ವಿಶ್ವನಾಥ್. ಬಿ. ಸಿ, ಗ್ರಾಮದ ಮುಖಂಡರಾದ ಜಯದೇವಪ್ಪ ಗೌಡ್ರು, ರಂಗನಾಥ್, ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್, ಮಂಜುಳಮ್ಮ, ಕೃಷಿ ಅಭಿಯಾನ ಟ್ರಸ್ಟ್ ಖಜಾಂಚಿ ಭಾಸ್ಕರನ್ ರಾಜು, ಸಿರಿಧಾನ್ಯ ತಜ್ಞ ದಿದ್ದಿಗೆ ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಾಲಾಮಕ್ಕಳು ಪ್ರಾರ್ಥಿಸಿದರು. ರಮೇಶ್ ಸ್ವಾಗತಿಸಿದರು, ಶ್ವೇತಾ ವಂದಿಸಿದರು. ಮಂಗಳಾ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here