ತುಮಕೂರು
ಬೇಗನೆ ಕಾಮಗಾರಿ ಮುಗಿಸುವ ಭರದಲ್ಲಿ ಮಾನದಂಡಗಳನ್ನೆ ಸಡಿಲಗೊಳಿಸಿ ಕಳಪೆ ಕಾಮಗಾರಿಗೆ ಅನುವು ಮಾಡಿಕೊಡಲಾಗುತ್ತಿದೆಯೆ ಎಂಬ ಪ್ರಶ್ನೆಗಳು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಷಯದಲ್ಲಿ ಹುಟ್ಟಿಕೊಂಡಿವೆ. ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟಸಿಟಿ ಕಾಮಗಾರಿ ಇಂತಹ ಅನುಮಾನ ಹುಟ್ಟು ಹಾಕಿದೆ. ಅಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳೆ ಇದನ್ನು ಹೇಳುತ್ತಿವೆ.
ಕಾರ್ಯಪ್ಪ ರಸ್ತೆ ಡಾಂಬರೀಕರಣಗೊಳಿಸಲು ಭಾನುವಾರದಿಂದಲೆ ಸಿದ್ದತೆಗಳು ನಡೆದವಾದರೂ ಸೋಮವಾರದಿಂದ ಕಾಮಗಾರಿ ಆರಂಭಗೊಂಡಿವೆ. ಈ ರಸ್ತೆಯಲ್ಲಿ ಇರುವ ಗುಂಡಿ ಗುದ್ದರಗಳನ್ನು ಜೆಲ್ಲಿಯಲ್ಲಿ ಮುಚ್ಚಿ ಅದರ ಮೇಲೆ 30 ಎಂಎಂ ಟಾರ್ ಕೋಟ್ ಹಾಕಲಾಗುತ್ತಿದೆ. ಹಾಲಿ ಇರುವ ರಸ್ತೆಯ ಮೇಲೆ ಬಿಟುಮಿನಸ್ ಮಿಶ್ರಣ[ಮರಳು, ಜೆಲ್ಲಿ ಮಿಶ್ರಿತ ಡಾಂಬರು] ಹಾಕಿ ಅದರ ಮೇಲೆ ವೈಟ್ ಟಾಪ್ ಲೇಯರ್ ಹಾಕಿದರೆ ರಸ್ತೆಯ ಉಬ್ಬು ತಗ್ಗುಗಳು ಮುಚ್ಚಲ್ಪಟ್ಟು ರಸ್ತೆಯೂ ಅಂದವಾಗಿ ಕಾಣುತ್ತದೆ, ಗಟ್ಟಿ ಮುಟ್ಟಾಗಿಯೂ ಇರುತ್ತದೆ. ದೀರ್ಘಾವಧಿ ಬಾಳಿಕೆಯೂ ಬರುತ್ತದೆ.
ಆದರೆ ಇದನ್ನು ಬಿಟ್ಟು ಗುಂಡಿಗಳಿಗೆ ಜೆಲ್ಲಿ ತುಂಬಿ ಅದರ ಮೇಲೆ 30 ಎಂಎಂ ಟಾರ್ ಕೋಟ್ ಹಾಕಿದರೆ ಆ ರಸ್ತೆ ಭವಿಷ್ಯದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವೇ..? ಕಾಮಗಾರಿ ಮುಗಿದರೆ ಸಾಕು ಎಂಬ ಧೋರಣೆಯೇ..?
ಈಗ ಮಾಡಲಾಗುತ್ತಿರುವ ಕಾಮಗಾರಿ ಅಸಂಬದ್ದ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸ್ಮಾರ್ಟ ಸಿಟಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಸವರಾಜ್ ಗೌಡ ಅವರನ್ನು ಪ್ರಶ್ನಿಸಿದರೆ sಸ್ಮಾರ್ಟ ಸಿಟಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್[ಪಿಎಂಸಿ] ವರದಿ ಮೇರೆಗೆ ಅನುಮತಿ ಪಡೆದೇ ಈ ಕಾಮಗಾರಿ ಮಾಡಲಾಗುತ್ತಿದೆ ಎನ್ನುತ್ತಾರೆ.ವರು ಹೇಳುವ ಪ್ರಕಾರ ಹೀಗೆ ಅನುಮತಿ ಕೊಟ್ಟಿರುವುದು ಸರಿ ಎನ್ನುವುದಾದರೆ ಪಿಎಂಸಿ ಆಗಲಿ, ಎಂಜಿನಿಯರ್ ಗಳಿಗಾಗಲಿ ಕಾಮಗಾರಿ ಗುಣಮಟ್ಟದ ವಾಸ್ತವದ ಅರಿವಿಲ್ಲವೇ? ವೈಜ್ಞಾನಿಕ, ಸಮರ್ಪಕ
ಮಾನದಂಡಗಳನ್ನು ಬಿಟ್ಟು ಹೀಗೆ ಬೇಕಾಬಿಟ್ಟಿ ಅನುಮತಿ ಕೊಡಬಹುದೇ? ಇದಕ್ಕೆ ಉತ್ತರ ಸಿಗಬೇಕಿದೆ.ಎಂ.ಜಿ. ರಸ್ತೆಗೆ ನೀಡಿರುವ ಕಾಳಜಿಯನ್ನೂ ಈ ರಸ್ತೆಗೆ ನೀಡಿಲ್ಲ. ಸ್ಮಾರ್ಟ ಸಿಟಿ ಯೋಜನೆಯಲ್ಲಿ ಕಾರ್ಯಪ್ಪ ರಸ್ತೆಯನ್ನು ಒಂದು ಮಾದರಿ ರಸ್ತೆಯನ್ನಾಗಿ ರೂಪಿಸಿ, ಈ ಮಾದರಿಯನ್ನು ಇತರೆ ರಸ್ತೆಗಳಿಗೆ ಅಳವಡಿಸಲು ಯೋಜನೆ ತಯಾರಿಸಲಾಗಿತ್ತು. ಅಂದುಕೊಂಡಂತೆ ನಿರೀಕ್ಷಿತ ಮಾದರಿಯಲ್ಲಿ ಇದರ ಕಾಮಗಾರಿಯಾಗುತ್ತಿಲ್ಲ.
ನಗರಕ್ಕೆ ಮಾದರಿ ಎನಿಸಬೇಕಿದ್ದ ಈ ರಸ್ತೆಯ ಸ್ಥಿತಿಯೇ ಹೀಗಾದರೆ ಇನ್ನುಳಿದ ರಸ್ತೆಗಳ ಸ್ಥಿತಿ ಆ ದೇವರಿಗೇ ಪ್ರೀತಿಯಾಗಬೇಕು. ಎಂ.ಜಿ. ರಸ್ತೆಯನ್ನೇ ಒಂದು ಉದಾಹರಣೆಯನ್ನಾಗಿ ತೆಗೆದುಕೊಂಡರೆ ಆ ರಸ್ತೆಯಲ್ಲಿ ಯಾವುದೇ ವಿಧವಾದ ಭಾರಿ ವಾಹನಗಳ ಓಡಾಟವಿಲ್ಲ, ಸಾಲದ್ದಕ್ಕೆ ಒನ್ ವೇ ರಸ್ತೆ. ವಾಹನಗಳಿಗಿಂತ ಹೆಚ್ಚಾಗಿ ಜನ ಸಾಂದ್ರತೆಯಿಂದ ಕೂಡಿರುವ ರಸ್ತೆ ಅದು. ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ನಿತ್ಯವೂ ಭರ್ಜರಿ ವಾಹನಗಳು ಓಡಾಡುತ್ತವೆ. ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್ ಇರುವುದರಿಂದ ಭಾರಿ ಗಾತ್ರದ ವಾಹನಗಳೂ ಇಲ್ಲಿ ನಿತ್ಯ ಸಂಚರಿಸುತ್ತವೆ. ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುವ ವಾಹನಗಳ ಜೊತೆಗೆ ತೈಲ ತುಂಬಿಸಲು ಆಗಮಿಸುವ ವಾಹನಗಳು ಇಲ್ಲಿ ಸಾಮಾನ್ಯ. ಇದರ ಜೊತೆಗೆ ಸಾರ್ವಜನಿಕ ವಾಹನಗಳು ನಿರಂತರ, ಎಂಜಿ ರಸ್ತೆ ಒನ್ ವೇ ಇರುವ ಕಾರಣ ಬಹುತೇಕ ವಾಹನಗಳು ಕಾರ್ಯಪ್ಪ ರಸ್ತೆಯ ಮೂಲಕವೇ ಸಾಗುತ್ತವೆ. ಇದೇ ರಸ್ತೆಯಲ್ಲಿ ಪೊಲೀಸ್ ಠಾಣೆಗಳು ಇವೆ. ಬ್ಯಾಂಕುಗಳು, ಸಮದಾಯ ಭವನ ಸೇರಿದಂತೆ ಇನ್ನೂ ಅನೇಕ ಕಚೇರಿ ಕಟ್ಟಡಗಳಿವೆ.
ಹೀಗಿರುವಾಗ ಎಂ.ಜಿ. ರಸ್ತೆಗೆ ವೈಟ್ ಟಾಪಿಂಗ್[ ಕಾಂಕ್ರೀಟ್ ರಸ್ತೆ] ಅನುಮತಿ ನೀಡಿ ಹೆಚ್ಚು ಮತ್ತು ಭಾರಿ ವಾಹನಗಳು ಓಡಾಡುವ ದ್ವಿಪಥ ಇರುವ ಕಾರ್ಯಪ್ಪ ರಸ್ತೆಗೆ ತೇಪೆ ರೀತಿಯ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಎಷ್ಟು ಸರಿ? ಎಂಜಿನಿಯರ್ ಗಳಾದಿಯಾಗಿ ಸಂಬಂಧಿಸಿದವರಿಗೆ ಎಷ್ಟರ ಮಟ್ಟಿಗೆ ಕಾಳಜಿ ಮತ್ತು ವಾಸ್ತವತೆಯ ಅರಿವು ಇದೆ ಎಂಬುದು ಇದರಲ್ಲೇ ಅರ್ಥವಾಗುತ್ತದೆ.
ಭಾನುವಾರವೇ ಈ ರಸ್ತೆಯ ಕಾಮಗಾರಿ ಆರಂಭವಾಗಬೇಕಿತ್ತು. ಎಲ್ಲ ಸಿದ್ದತೆಗಳು ನಡೆದಿದ್ದವು. ಆದರೆ ತೇವಾಂಶ ಇದೆ ಎಂದು ಹೇಳಿ ಸೋಮವಾರಕ್ಕೆ ಮುಂದೂಡುವ ಪ್ರಯತ್ನ ಮಾಡಿದರು. ಆದರೆ ಭಾನುವಾರ ಸಂಜೆ ಮಳೆಯಾಯಿತು. ತೇವಾಂಶ ಮತ್ತೂ ಹೆಚ್ಚಾಯಿತು. ಮಳೆ ಬಂದು ತೇವಾಂಶ ಹೆಚ್ಚಿರುವಾಗಲೇ ತರಾತುರಿಯಲ್ಲಿ ಡಾಂಬರೀಕರಣ ಮಾಡಿ ಮುಗಿಸುವ ಪ್ರಯತ್ನಗಳು ನಡೆದಿವೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು 3.63 ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ.. 2018 ರ ಡಿಸೆಂಬರ್ 5 ರಂದು ಕಾಮಗಾರಿ ಆರಂಭವಾಗಿ 12 ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ನಿಗದಿತ ವಾಯಿದೆಯೊಳಗೆ ಮುಗಿಯಲಿಲ್ಲ. ಕುಂಟುತ್ತಾ ತೆವಳುತ್ತಾ ಸಾಗಿದ ಈ ರಸ್ತೆ ಕಾಮಗಾರಿಯ ಅದ್ವಾನ ಹಲವರ ಕೆಂಗಣ್ಣಿಗೂ ಗುರಿಯಾಯಿತು.
ವಿರೋಧಾಭಾಸಗಳ ನಡುವೆ ಅಂತೂ ಕಾಮಗಾರಿ ಮುಗಿಸಲು ಕಸರತ್ತುಗಳು ತೀವ್ರಗೊಂಡವು. ಈ ನಡುವೆ ಮಾರ್ಚ್ ಕೊನೆಯಲ್ಲಿ ಕೊರೋನಾ ಲಾಕ್‍ಡೌನ್ ಘೋಷಿಸಿದ ಪರಿಣಾಮ ಕಾಮಗಾರಿ ನೆನೆಗುದಿಗೆ ಬಿದ್ದಿತು. ಅಂದಿನಿಂದ ಸ್ಥಗಿತಗೊಂಡ ಕಾಮಗಾರಿ ಇತ್ತೀಚೆಗೆ ಆರಂಭವಾಗಿದೆ. ಏನಾದರೂ ಮಾಡಿ ಬೇಗ ಮುಗಿಸುವ ತರಾತುರಿಯಲ್ಲ್ಲಿ ಇರುವ ಕಾರ್ಮಿಕರನ್ನೆ ಬಳಸಿಕೊಂಡು ಕಾಮಗಾರಿ ಕೆಲಸ ಮಾಡಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಫಲ್ಯ ಹೊಂದುತ್ತದೆ ಎಂಬುದೇ ಈಗ ಎದುರಾಗಿರುವ ಪ್ರಶ್ನೆ.
ಬಿ.ಎಚ್.ರಸ್ತೆಯಿಂದ ಗ್ರಾಮಾಂತರ ಪೋಲೀಸ್ ಠಾಣೆಯ ಅಂತ್ಯದವರೆಗೆ 0.53 ಕಿ.ಮೀ. ಉದ್ದದ ಈ ರಸ್ತೆಯನ್ನು 7.4 ಮೀಟರ್ ಅಗಲದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವು ಕಾಮಗಾರಿಗಳು ಮುಗಿದಿವೆ. ಫುಟ್‍ಪಾತ್‍ಗೆ ಟೈಲ್ಸ್ ಹಾಕುವ ಕಾಮಗಾರಿ ಆರಂಭವಾಗಿತ್ತು. ಅದೂ ಸಹ ಸಮರ್ಪಕವಾಗಿಲ್ಲ. ಅಲ್ಲಲ್ಲಿ ಟೈಲ್ಸಗಳನ್ನು ಕಿತ್ತು ಹಾಕಲಾಗಿದೆ. ಮರು ಜೋಡಣೆ ಮಾಡುವ ಕೆಲಸ ನಡೆಯುತ್ತಿದೆ. ಪೂರ್ವ ಯೋಜಿತ ಕಾರ್ಯ ಇಲ್ಲದೆ ಹೀಗೆ ಕಾಮಗಾರಿ ಮಾಡಿದರೆ ಇಂತಹ ಎಡವಟ್ಟುಗಳು ಎದುರಾಗುತ್ತವೆ ಎಂಬುದಕ್ಕೆ ಇದು ಸಾಕ್ಷಿ. ಹಾಕುವುದು, ಮತ್ತೆ ಕೀಳುವುದು ಇಂತಹ ಪ್ರಕ್ರಿಯೆಗಳು ನಡೆದರೆ ಎಷ್ಟು ನಷ್ಟ ಆದೀತು? ಈ ರಸ್ತೆಯ ಇಕ್ಕೆಲಗಳಲ್ಲಿ, ಮಸೀದಿ ಮುಂಭಾಗದ ರಸ್ತೆಯಲ್ಲಿ ಟೈಲ್ಸ್‍ಗಳನ್ನು ಕಿತ್ತು ಹಾಕಲಾಗಿ ಅವೆಲ್ಲವೂ ಅನಾಮಧೇಯವಾಗಿ ಬಿದ್ದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








