ಬರಗೂರು :
ದಿಢೀರ್ ನಿರ್ಧಾರದಿಂದ ಬರಗೂರು ಪೋಲೀಸ್ ಸಿಬ್ಬಂದಿ ಗುರುವಾರ ಮಧ್ಯಾಹ್ನದ ನಂತರ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿ, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಬರಗೂರು ಪಟ್ಟಣ ಸಂಪೂರ್ಣವಾಗಿ ಸ್ತಬ್ಧಗೊಂಡು ಮುಖ್ಯ ರಸ್ತೆಗಳು ಜನರಿಲ್ಲದೆ ಬಿಕೋ ಎನಿಸುತ್ತಿದ್ದವು.
ಶಿರಾ ತಾಲ್ಲೂಕು ಬರಗೂರಿನಲ್ಲಿ ಕಳೆದ ವರ್ಷದ ಏಪ್ರಿಲ್‍ನಲ್ಲಿ ಒಂದನೇ ಅಲೆಯ ಕೊರೊನಾಗೆ ಜನತೆ ಬೆಚ್ಚಿ ಬಿದ್ದಿದ್ದರು. ಅತ್ಯಂತ ಜಾಗರೂಕರಾಗಿ ಕೊರೊನಾ ನಿಯಮಗಳನ್ನು ಪಾಲಿಸಿ, ಲಾಕ್‍ಡೌನ್‍ಗೆ ಸ್ಪಂದಿಸಿ, ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾ ತಡೆಗೆ ಅಂಗಡಿ ಮಾಲೀಕರೂ ಸಹ ಸಹಕರಿಸಿದ್ದರು. ಇತ್ತೀಚಿನ ಏಪ್ರಿಲ್ ತಿಂಗಳಲ್ಲಿ ಕೊರೊನಾ ರಣಕೇಕೆ ಹಾಕುತಿದ್ದರೂ, ಜನ ಬೇಜವಾಬ್ದಾರಿಯಿಂದ ಮೈಮರೆತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಕೊರೋನಾ ಹೊಸರೂಪದಲ್ಲಿ ಮಿತಿ ಮೀರುತ್ತಿದ್ದರೂ ಸರ್ಕಾರ ಕೈಗೊಳ್ಳುತ್ತಿರುವ ಲಾಕ್‍ಡೌನ್‍ಗೆ ಜನತೆ ನಿರ್ಲಕ್ಷ್ಯ ವಹಿಸಿದ್ದರು. ಗುರುವಾರದ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಮುಕ್ತರಾಗಿ ಹಿಂತಿರುಗಿ ರಾಜ್ಯಾದ್ಯಂತ ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿರುವ ಹಿನ್ನೆಲೆಯಲ್ಲಿ, ಬರಗೂರು ಪೋಲೀಸ್ ಠಾಣಾ ಎ.ಎಸ್.ಐ. ಮುದ್ದರಂಗಪ್ಪ, ಮುಖ್ಯ ಪೇದೆ ಪಾತರಾಜು, ಸಿಬ್ಬಂದಿ ಪೇದೆ ಸಂಜು, ಹೋಂಗಾರ್ಡ್ ಶ್ರೀನಿವಾಸ್ ಬರಗೂರು ಗ್ರಾಮದಲ್ಲಿ ಕೊರೊನಾ ನಿಯಂತ್ರಣಕ್ಕೆ ಬ್ರೇಕ್ ಹಾಕಲು ದಿಢೀರ್ ಸಜ್ಜಾದರು. ಮುಂದಿನ 13 ದಿನಗಳಲ್ಲಿ ಎಷ್ಟರ ಮಟ್ಟಿಗೆ ಲಾಕ್‍ಡೌನ್ ಯಶಸ್ವಿಯಾಗಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸರ್ಕಾರದ ಆದೇಶದಂತೆ ಮೇ.4ರವರೆಗೆ ಕೊರೊನಾ ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಅಗತ್ಯವಸ್ತುಗಳಾದ ದಿನಸಿ, ಅಂಗಡಿಗಳು, ಔಷಧಿ ಅಂಗಡಿಗಳು, ಹಾಲು, ಹಣ್ಣು, ಹೂವು, ತರಕಾರಿ, ಕೃಷಿ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಅಂಗಡಿಗಳು, ಸಿಮೆಂಟ್, ಕಬ್ಬಿಣದ ಅಂಗಡಿ, ಹೋಟೆಲ್‍ಗಳಲ್ಲಿ ಪಾರ್ಸಲ್, ವೈನ್ಸ್ ಪಾರ್ಸಲ್‍ಗೆ ಮಾತ್ರ ಅವಕಾಶವಿದೆ. 144 ಸೆಕ್ಷನ್ ಜಾರಿ ಇರುವುದರಿಂದ ಹೆಚ್ಚು ಮಂದಿ ಸೇರುವುದನ್ನು ನಿಷೇಧಿಸಿದ್ದು, ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು.
– ಮುದ್ದರಂಗಪ್ಪ, ಎಎಸ್‍ಐ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
