ತುಮಕೂರು
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರೈತರನ್ನು ಕೂಡ ರೈತ ಕಾರ್ಮಿಕರು ಎಂದು ಪರಿಗಣಿಸಿ ಅವರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದರು. ಅಂತಹ ಮಹಾನ್ ನಾಯಕರು ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿರುವುದು ನಮ್ಮ ಸೌಭಾಗ್ಯ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಮಾ.ನ.ಗುರುದತ್ ತಿಳಿಸಿದರು.
ನಗರದ ಮೈತ್ರಿ ಪಕ್ಷಗಳ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗ, ಜಿಲ್ಲಾ ಕಾಂಗ್ರೆಸ್, ತುಮಕೂರು ಜಿಲ್ಲಾ ಕಾರ್ಮಿಕ ವಿಭಾಗ, ಜಾತ್ಯಾತೀಯ ಜನತಾದಳ ಪಕ್ಷದ ಕಾರ್ಮಿಕ ಘಟಕದಿಂದ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರನ್ನು ಕೂಡ ಕಾರ್ಮಿಕರನ್ನಾಗಿ ಪರಿಗಣಿಸಿ ಅವರಿಗೂ ಅನೇಕ ಸೌಲಭ್ಯಗಳು ದೊರೆಯುವಂತೆ ಮಾಡಿದ ಮಾಜಿ ಪ್ರಧಾನಿ ದೇವೇಗೌಡರನ್ನ ಅತಿ ಹೆಚ್ಚು ಮತಗಳಿಂದ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಾಯಕತ್ವದ ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ 25 ಯೋಜನೆಗಳನ್ನು ಮೊಟ್ಟಮೊದಲ ಬಾರಿಗೆ ರೂಪಿಸಿತು. ಈ ಯೋಜನೆಗಳನ್ನೇ ಅಲ್ಪ ಮಾರ್ಪಾಡಿನೊಂದಿಗೆ ಬಿಜೆಪಿ ಸರ್ಕಾವು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಅದು ಕೂಡ ಚುನಾವಣೆಗೆ ಎರಡು ತಿಂಗಳು ಬಾಕಿ ಇದೆ ಎಂದಾಗ ಈ ಪ್ರಚಾರಗಳನ್ನು ಮಾಡುತ್ತಾ ಬಂದಿದೆ. ಆದರೆ ನಿಜವಾದ ಕಾರ್ಮಿಕ ಪರ ಸರ್ಕಾರ ಯಾವುದು ಎಂದು ಜನರಿಗೆ ಅರ್ಥವಾಗಿದ್ದು ಈ ಬಾರಿ ದೇವೇಗೌಡರನ್ನು ಜಯಶೀಲರನ್ನಾಗಿಸಲಿದ್ದೇವೆ ಎಂದರು.
ಕರ್ನಾಟಕ ರಾಜ್ಯವು ಸುಮಾರು 20,60,000 ಸಂಘಟಿತ ಹಗೂ 1,29,71,000 ಅಸಂಘಟಿತ ಕಾರ್ಮಿಕರನ್ನು ಹೊಂದಿದೆ. ರಾಜ್ಯದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಹೋರಾಡುತ್ತಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಕೂಡ ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ ಕಾರ್ಮಿಕ ವಿಭಾಗಗಳನ್ನು ರಚಿಸಿ ರಾಜ್ಯದ ಕಾರ್ಮಿಕರ ಪರವಾದ ಕೆಲಸಗಳಲ್ಲಿ ತೊಡಗಿದೆ. ಜಾತ್ಯಾತೀತ ಜನತಾದಳವೂ ಕಾರ್ಮಿಕ ಘಟಕಗಳನ್ನು ಹೊಂದಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯು 3ಕ್ಕೂ ಹೆಚ್ಚು ಬೃಹತ್ ಕೈಗಾರಿಕಾ ಪ್ರದೇಶವನ್ನು ಹೊಂದಿದೆ. ಸುಮಾರು 1275 ಮಧ್ಯಮಾ ಕೈಗಾರಿಕಾ ಕೇಂದ್ರಗಳನ್ನು ಹೊಂದಿದೆ. ವಿವಿಧ ಕಾರ್ಖಾನೆಗಳಲ್ಲಿ ಸುಮಾರು 5 ಲಕ್ಷದ 73 ಸಾವಿರದ 971 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಮಿಕ ವಿರೋಧಿ ನೀತಿಗಳಿಂದ ಸುಮಾರು ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಅನೇಕ ಬಡವರು ಬೀದಿ ಪಾಲಾಗುತ್ತಿದ್ದಾರೆ ಎಂದು ಆರೋಪಿಸಿದರು.
ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣದಿಂದ ಹಲವು ಸಣ್ಣ, ಅತಿಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ. ಉದ್ಯಮಗಳಲ್ಲಿ ಉದ್ಯೋಗ ಕಡಿತ ಉಂಟಾದವು. ಹೊಸ ಕೈಗಾರಿಕೆಗಳು ಆರಂಭವಾಗದೆ, ಉದ್ಯೋಗ ಸೃಷ್ಠಿಯಾಗದೆ ಯುವಕರು ನಿರುದ್ಯೋಗಿಗಳಾ ಗುತ್ತಿದ್ದಾರೆ. ಎಚ್‍ಎಎಲ್, ಬಿಎಸ್‍ಎನ್‍ಎಲ್, ಎಂಟಿಎನ್‍ಎಲ್, ಏರ್ ಇಂಡಿಯಾ ಸೇರಿದಂತೆ ಬೃಹತ್ ನಿಗಮಗಳು ದಿವಾಳಿಯಾಗಿದ್ದು, ಮುಚ್ಚುವ ಸ್ಥಿತಿಗೆ ತಂದಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಅದರ ಮೂಲಕ ಇರುವ ಉದ್ಯೋಗಗಳನ್ನು, ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿಗೆ ಒಳಪಡಿಸುತ್ತಿದೆ ಎಂದು ಆರೋಪ ಮಾಡಿದರು.
ಇಷ್ಟೇ ಅಲ್ಲದೆ ಇನ್ನೂ ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ಕಾರ್ಮಿಕ ವರ್ಗದವರು, ತೀವ್ರತರವಾಗಿ ಹೋರಾಟ ಮಾಡದೆ ತಾವು ದುಡಿಯುತ್ತಿರುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಲು ಪ್ರಯತ್ನ ಮಾಡುತ್ತಿದ್ದಾರೆ. ಕಾರ್ಮಿಕ ವಿರೋಧಿಯಾಗಿರುವ ಬಿಜೆಪಿ ಸರ್ಕಾವರನ್ನು ಅಧಿಕಾರದಿಂದ ಕಿತ್ತೊಗೆಯಲು ತೀರ್ಮಾನ ಮಾಡಿದ್ದು, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ. ಅದರಂತೆಯೇ ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರಿಗೆ ಮತ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀರಾಮಯ್ಯ ಮಾತನಾಡಿ, ದೇವೇಗೌಡರು ಪ್ರಧಾನಿಗಳಾಗಿದ್ದಾಗ ಕಟ್ಟಡ ಕಾರ್ಮಿಕರ ಬಿಲ್ ಪಾಸ್ ಮಾಡುವ ಮೂಲಕ ಕಾರ್ಮಿಕರ ಹಿತ ಕಾಪಾಡುವಲ್ಲಿ ಶ್ರಮಿಸಿದ್ದರು. ನಂತರ ಕುಮಾರಸ್ವಾಮಿಯವರು ಸಿಎಂ ಆಗಿದ್ದಾರೆ ಅದನ್ನು ರಾಜ್ಯದಲ್ಲಿಯೂ ಜಾರಿಗೆ ತಂದರು. ಇದರಿಂದ ರೈತರ ಮೇಲೆ ಹಾಗೂ ಕಾರ್ಮಿಕರ ಮೇಲಿನ ಹಿತಾಸಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಈ ನಿಟ್ಟಿನಲ್ಲಿ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿರುವ ದೇವೇಗೌಡರಿಗೆ ಮತ ನೀಡಿ ಅವರನ್ನು ಜಯಶೀಲರನ್ನಾಗಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ, ಕಾಂಗ್ರೆಸ್ ಮುಖಂಡರಾದ ಸಿಡಿ ಚಂದ್ರಶೇಖರ್, ಜೆಡಿಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ತುಮಕೂರು ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸಯ್ಯದ್ ದಾದಾಪೀರ್, ಜನತಾದಳದ ಕಾರ್ಮಿಕ ವಿಭಾಗದ ಅಧ್ಯಕ್ಷ ರಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.