ಬೆಂಗಳೂರು:
ಇಡೀ ರಾಜ್ಯದ ನಿದ್ದೆಕೆಡಿಸಿದ್ದ ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದ ಹಿನ್ನಲೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಚಾರ್ಜ್ ಶೀಟ್ ನಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟಿಸಬೇಕು ಎಂಬ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಯಾರನ್ನು ಉಚ್ಚಾಟಿಸಬೇಕು ಎಂದು ಮಾಧ್ಯಮಗಳ ಎದುರು, ಬಿಜೆಪಿಯವರ ಎದುರು ಮಾತನಾಡುವುದಲ್ಲ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ನೋವಿದ್ದರೆ ನನ್ನ ಬಳಿ ಬಂದು ಮಾತನಾಡಲಿ, ಮಾಧ್ಯಮದ ಎದುರು ಮಾತನಾಡೋದು ಶಿಸ್ತಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ನಾನು ಯಾರ ಜತೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಸ್ಪಷ್ಟವಾಗಿ ಹೇಳಿದ್ದಾರೆ. ಪೊಲೀಸ್ ಮಾಹಿತಿ ಆಧರಿಸಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದರು.
ನಾನು ಒಕ್ಕಲಿಗರು, ಬೇರೆ ಜಾತಿ ಇನ್ನೊಂದು ಜಾತಿ ಅಂತ ಹೋಗುವುದಿಲ್ಲ. ಆದರೆ ನಾನು ಹುಟ್ಟಿನಿಂದ ಒಕ್ಕಲಿಗ, ನನ್ನ ತಂದೆ ತಾಯಿ ಒಕ್ಕಲಿಗರು. ಶಾಲೆಗೆ ಸೇರುವಾಗ ಒಕ್ಕಲಿಗ ಅಂತ ಕೊಟ್ಟಿದ್ದೇನೆ. ನಾನು ಹುಟ್ಡಿನಿಂದ ಒಕ್ಕಲುತನ ಮಾಡುವವನು. ನಾನೊಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ನನಗೊಂದು ಜಾತಿ ಅದು ಕಾಂಗ್ರೆಸ್ ಜಾತಿ. ಜಾತಿ ವಿಚಾರದಲ್ಲಿ ಮಾತನಾಡಲು ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ ಎಂದರು.
ನಮಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯ, ಅದಕ್ಕಾಗಿ ನಾವು ಬಿಜೆಪಿಯವರ ಮತವನ್ನೂ ಸೆಳೆಯುತ್ತೇವೆ, ಜೆಡಿಎಸ್ ನ ಮತವನ್ನೂ ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ