ಹಾವೇರಿ
ಮಾಯದಂತಹ ಜಾನಪದ ಹಾಡು, ಕುಣಿತಗಳ, ವಾದ್ಯಗಳ ಮಳೆಯಲ್ಲಿ ಹಾವೇರಿ ಜನತೆ ಮಿಂದೆದ್ದರು.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜರುಗಿದ ರಾಜ್ಯಮಟ್ಟದ ಜಾನಪದ ಜಾತ್ರೆಯಲ್ಲಿ ವೈವಿಧ್ಯಮಯ ಜಾನಪದ ಕಲಾಪ್ರದರ್ಶನಗಳು ನೋಡುಗರನ್ನು ರೋಮಾಂಚನಗೊಳಿಸಿದವು.
ಮಾಯದಂತಾ ಮಳೆ ಬಂತಣ್ಣಾ ಗೀತೆಗೆ ಸಂಯೋಜಿಸಿದ ನೃತ್ಯ, ಚೆಲ್ಲಿದರೂ ಮಲ್ಲಿಗೆಯಾ, ಲಂಬಾಣಿ ನೃತ್ಯ, ಪೂಜಾಕುಣಿತ, ನಂದಿಕೋಲು, ಮಹಿಳಾ ವೀರಗಾಸೆ, ಹಲಗೆ ವಾದನ, ಜನತೆ ಮಧ್ಯರಾತ್ರಿಯ ಚಳಿಯಲ್ಲಿನ್ನು ಲೆಕ್ಕಿಸದೆ ಕಾರ್ಯಕ್ರಮಗಳಲ್ಲಿ ತಲ್ಲಿನರಾಗಿ ಆಸ್ವಾದಿಸುತ್ತಿದ್ದರು.
ರಾಮನಗರದ ಶಿವಶಂಕರನಾಯ್ಕ್ ತಂಡ ಹಾಗೂ ಮಂಡ್ಯದ ಸತೀಶ ತಂಡದ ಪೂಜಾ ಕುಣಿತ ಜನತೆಯ ಕಣ್ಮನಸೆಳೆಯಿತು. ಕಾರವಾರದ ಜ್ಯುಲಿಯಾನಾ ಸಿದ್ದಿ ತಂಡದವರ ಡಮಾಮಿ ನೃತ್ಯ , ವಿದ್ಯಾನರಗುಂದ ಹಾಗೂ ವಿದ್ಯಾಮಸಾನೆ ತಂಡದಿಂದ ಬೆಳಗೆದ್ದು ನಾನು ಯಾರಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಎಂಬ ಜಾನಪದ ನೃತ್ಯ ಮನಸೆಳೆದವು.
ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದ ಸ.ರಿ.ಗ.ಮ.ಪ ಸ್ಪರ್ಧಿ ರುಬೀನಾ ನದಾಫ ಹಾಡಿದ ಉಧೋ,ಉಧೋ, ಎಲ್ಲಿ ಕಾಣೆ ಎಲ್ಲಿ ಕಾಣೆನೋ ಎಂಬ ಯಲ್ಲಮ್ಮನ ಜಾನಪದ ಶೈಲಿಯ ಹಾಡು, ಎಂಥ ಚಂದ ಐತೆ ಎಂಥ ಅಂದ ಐತೆ ನಮ್ಮೂರ ಶಾಲೆ ಹಾಡುಗಳು ಕೇಳುಗರಿಗೆ ಖುಷಿ ನೀಡಿದವು.
ಜಾನಪದ ಜಾತ್ರೆಯಲ್ಲಿ ರಾಣೇಬೆನ್ನೂರಿನ ಕೆ.ಸಿ.ನಾಗರಜ್ಜಿ, ಸವಣೂರು ತಾಲೂಕಿನ ಡಂಬರಮತ್ತೂರಿನ ಕೆ.ಸಿ.ಪರಶುರಾಮ, ರಾಣೆಬೆನ್ನೂರಿನ ಯಕಲಾಸಪುರದ ಪರಶುರಾಮ ಬಣಕಾರ, ಶಿಗ್ಗಾಂವ ತಾಲೂಕಿನ ಕ್ಯಾಲಕೊಂಡದ ಬಸವರಾಜ ಶಿಗ್ಗಾಂವ, ಮುಗಳಿಯ ಬಸವರಾಜ ಗುಬ್ಬಿ ಹಾಗೂ ವೀರಯ್ಯ ಸಂಕೀನಮಠ, ಬ್ಯಾಡಗಿಯ ವೀರಭದ್ರಗೌಡ ಹೊಮ್ಮರಡಿ, ಶಿಗ್ಗಾಂವಿಯ ಶರೀಪ್ ಮಾಕಪ್ಪನವರ, ಹೆಚ್.ವೈ.ಪೂಜಾರ, ಗುರು ಚಲವಾವಾಧಿ ಅವರಿಂದ ಶಿಶುನಾಳ ಶರೀಫರ ತತ್ವಪದಗಳಾದ ತರವಲ್ಲ ತಂಗಿ ನಿನ್ನ ತಂಬೂರೀಶ್ವರ, ಸೊರುತಿಹುದು ಮನೆಯ ಮಾಳಿಗೆ ಹಾಗೂ ಜಾನಪದ ಹಾಡುಗಳು ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡವು.
ಚಿಕ್ಕಲಿಂಗದಳ್ಳಿಯ ಹನುಮಂತಪ್ಪ ಅವರಿಂದ ಲಾವಣಿ ಪದ, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಅಡಿವೆಪ್ಪ ಕುರಿಯವರ ಅವರಿಂದ ತತ್ವಪದ, ಹಾನಗಲ್ಲ ತಾಲೂಕಿನ ತಿಳವಳ್ಳಿಯ ನಾಗರಾಜ ಜೋಗಿ ಜೋಗಿಪದ ಹಾಡಿದರು.ಶಿಗ್ಗಾಂವಿಯ ಗುಡ್ಡದಚನ್ನಾಪುರದ ಅಶೋಕ ಮಾವೂರ, ಹಾವೇರಿಯ ಹತ್ತಿಮತ್ತೂರಿನ ರಾಜು ಲಮಾಣಿ, ಹಾನಗಲ್ಲಿನ ಶೇಷಗಿರಿಯ ಶಿವಮೂರ್ತಿ ಹುಣಶೀಹಳ್ಳಿ, ಇನಾಂಯಲ್ಲಾಪೂರದ ಬಡಿವೆಪ್ಪ ಅನವಟ್ಟಿ, ಸವಣೂರಿನ ಹೂವಿನಶಿಗ್ಲಿಯ ಯಲ್ಲಪ್ಪ ಕಂಬಳಿ ಅವರಿಂದ ಡೊಳ್ಳು, ಹಾನಗಲ್ಲಿನ ದತ್ತಾತ್ರೆಯ ಸುಗಂಧಿ ಅವರಿಂದ ಬೇಡರ ವೇಷ, ಹಾನಗಲ್ಲಿನ ನಿಟ್ಟೂರಿನ ಮಹೇಶಪ್ಪ ಕಾಯಕದ ಅವರಿಂಧ ನಂದಿಕೋಲು, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ರೇವಣಪ್ಪ ಬೇವಿನಮರದ ಅವರಿಂದ ಹಲಗೆ ವಾದನ ಎಲ್ಲರನ್ನು ಕುಣಿಸಿದವು. ಚರ್ಮದ ವಾದ್ಯಗಳಾದ ಜಗ್ಗಲಿಗೆ, ನಗಾರಿ, ಡಕ್ಕೆ, ಹಲಗೆವಾದನ, ತಮಟೆ, ಡೊಳ್ಳುಗಳಿಂದ ಹೊರಹೊಮ್ಮದ ನಾದಕ್ಕೆ ಕುಳಿತಿದ್ದ ಜನರು ಹೆಜ್ಜೆಹಾಕಿದರು.
ಸವಣೂರು ತಾಲೂಕಿನ ಹತ್ತಿಮತ್ತೂರಿನ ಶಶಿಕಲಾ ಲಮಾಣಿ ಅವರಿಂದ ಲಂಬಾಣಿನೃತ್ಯ, ರಾಣೇಬೆನ್ನೂರಿನ ಬಸವರಾಜ ಸಾವಕ್ಕನವರ್, ಆಡೂರಿನ ಪ್ರವೀಣ ಕಡೆರ್ ಅವರಿಂದ ಜಾಂಝ, ಶಿಗ್ಗಾಂವಿಯ ಅಂದಲಗಿ ಗ್ರಾಮದ ಯಲ್ಲಪ್ಪ ಗಾಳೆಪ್ಪನವರ ಅವರಿಂದ ಗೋರವ ಕುಣಿತ, ರಾಮನಗರದ ಸುದೀಪ ತಂಡದವರಿಂದ ಪಟಕುಣಿತ, ಮೈಸೂರಿನ ದಿಲೀಪ್ ತಂಡದಿಂದ ತಮಟೆ, ಮಂಡ್ಯದ ವೆಂಕಟಸ್ವಾಮಿ ತಂಡದವರಿಂದ ನಗಾರಿ, ಚಿತ್ರದುರ್ಗದ ನರಸಿಂಹಯ್ಯ ತಂಡದವರಿಂದ ಕಹಳೆ, ಧಾರವಾಡದ ಮಂಜುನಾಥ್ ಮಾದರ ತಂಡದವರಿಂದ ಜಗ್ಗಲಿಗೆ, ಬೆಂಗಳೂರಿನ ಕವಿತಾ ತಂಡದವರಿಂದ ಮಹಿಳಾ ತಮಟೆ, ಮಾರಣ್ಣ ತಂಡದವರಿಂದ ಚಿಲಿ-ಪಿಲಿ, ಮೈಸೂರಿನ ದೇವಯ್ಯ ತಂಡದವರಿಂದ ಕಂಸಾಳೆ, ಚಿಕ್ಕಮಗಳೂರಿನ ಶಾರದಾ ತಂಡದವರಿಂದ ಮಹಿಳಾ ವೀರಗಾಸೆ, ಶಿಗ್ಗಾಂವಿಯ ಗೋವಿಂದಪ್ಪ ತಳವಾರ ತಂಡದವರಿಂದ ರಂಗ ಗೀತೆಗಳು, ಭಟ್ಕಳ ನಾಗಪ್ಪಗೊಂಡ ತಂಡದವರಿಂಧ ಡಕ್ಕೆ ಕುಣಿತ, ಉಡುಪಿಯ ಸಂತೋಷ ತಂಡದವರಿಂದ ಕಂಗೀಲು, ಮೈಸೂರಿನ ಶ್ರೀನಿವಾಸ ತಂಡದವರಿಂದ ನೀಲಗಾರ ಪದಗಳು ಜಾತ್ರೆಯಲ್ಲಿ ಮನಸೊರೆಗೊಂಡವು.
ಜಾನಪದ ಜಾತ್ರೆಯಲ್ಲಿ ಮಕ್ಕಳಾದಿಯಾಗಿ, ವಯೋವೃದ್ಧರು ಜನಪದದ ಮೋಡಿಗೆ ಒಳಗಾದವರಂತೆ ಕಾರ್ಯಕ್ರಮ ಮುಗಿಯುವವರೆಗೂ ವಿಕ್ಷೀಸಿದ್ದು ವಿಶೇಷವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಜನತೆ ಜಾನಪದ ಜಾತ್ರೆಯು ಅತ್ಯದ್ಭುತವಾದ ಕಾರ್ಯಕ್ರಮ ಎಂಬ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ