ಹೊಸದುರ್ಗ
ಜನರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ಕಚೇರಿಗಳನ್ನು ಅಲೆಬೇಕಾದ ಸ್ಥಿತಿ ಇದ್ದು ಅಧಿಕಾರಿಗಳೇ ಗ್ರಾಮಕ್ಕೆ ಬಂದು ಜನಸಂಪರ್ಕ ಸಭೆಗಳನ್ನು ಮಾಡುವುದರಿಂದ ಜನರಿಗೆ ಸಮಯ, ವ್ಯರ್ಥ ಖರ್ಚು ಉಳಿತಾಯವಾಗಿ ಮನೆ ಬಾಗಿಲಲ್ಲೆ ಸೌಲಭ್ಯ ಸಿಗಲಿದೆ ಎಂದು ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ಹೊಸದುರ್ಗ ತಾಲ್ಲೂಕಿನ ತಂಡಗ ಗ್ರಾಮದಲ್ಲಿ ಜಿಲ್ಲಾ ಆಡಳಿತದ ನಡಿಗೆ ಗ್ರಾಮದ ಕಡೆಗೆ ಜನಸಂಪರ್ಕ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಸೌಲಭ್ಯಗಳನ್ನು ಜನರಿಗೆ ವಿತರಣೆ ಮಾಡಿ ಮಾತನಾಡಿದರು.
ಜನರು ವಿವಿಧ ಸೌಲಬ್ಯಗಳಿಗಾಗಿ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲ್ಲೂಕು ಪಂಚಾಯತ್ ಸದಸ್ಯರ ಬಳಿ ಬಂದು ತಮ್ಮ ಅಹವಾಲು ಹೇಳಿಕೊಳ್ಳುತ್ತಾರೆ. ಆದರೆ ಅಧಿಕಾರಿಗಳ ಮೂಲಕವೇ ಜನರ ಕೆಲಸವನ್ನು ಮಾಡಿಸಬೇಕಾಗಿದ್ದರಿಂದ ಇಂತಹ ಜನಸಂಪರ್ಕ ಸಭೆಗಳು ಜನರಿಗೆ ಸಹಕಾರಿಯಾಗಲಿವೆ.
ಕಂದಾಯ ಇಲಾಖೆಯಿಂದ ಪಹಣಿ ತಿದ್ದುಪಡಿ, ಪೋಡಿ ದುರಸ್ಥಿ, ಸೇರಿದಂತೆ ಖಾತಾ ಬದಲಾವಣೆಗೆ ಅರಿವಿನ ಕೊರತೆಯಿಂದ ಅದನ್ನು ಜನರು ಮುಂದೂಡುತ್ತಾ ಬರುತ್ತಾರೆ. ಜನರ ಬಳಿಯೇ ಬಂದು ಇಂತಹ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಜನರ ಸಮಸ್ಯೆಗಳನ್ನು ನಿವಾರಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಹೊಸದುರ್ಗ ತಾಲ್ಲೂಕ ಬರಪೀಡಿತ ತಾಲ್ಲೂಕು ಆಗಿರುವುದರಿಂದ ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವರು. ಆದರೆ ಇಲ್ಲಿಯೇ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನು ಆರಂಭಿಸುವುದರಿಂದ ತಾಲ್ಲೂಕಿನ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಜಿಲ್ಲಾಧಿಕಾರಿಯವರು ಈ ಹಿಂದೆ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರಾಗಿ ಕೆಲಸ ಮಾಡಿ ಬಂದಿರುವುದರಿಂದ ಅನುಭವ ಇದೆ. ಇವರು ಪಕ್ಕದ ಜಿಲ್ಲೆ ಹಾಗೂ ನಮ್ಮವರೇ ಆಗಿರುವುದರಿಂದ ಸ್ಥಳೀಯ ಸಮಸ್ಯೆಗಳು ಸಹ ಗೊತ್ತಿರುವುದರಿಂದ ಗಾರ್ಮೇಟ್ಸ್ ಫ್ಯಾಕ್ಟರಿ ಆರಂಭಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಅರಸೀಕೆರೆಯಲ್ಲಿ ಗಾರ್ಮೇಟ್ಸ್ ಫ್ಯಾಕ್ಟರಿ ಆರಂಭಿಸಲಾಗಿರುವುದರಿಂದ ತಾಲ್ಲೂಕಿನಿಂದಲೂ ಸಾವಿರಾರು ಜನರು ನಿತ್ಯ ಅರಸೀಕೆರೆಗೆ ಉದ್ಯೋಗಕ್ಕಾಗಿ ಹೋಗುತ್ತಿರುವುದರಿಂದ ಬಸ್‍ನ ಸಮಸ್ಯೆ ಇದೆ. ಇಲ್ಲಿಂದ ಅರಸೀಕೆರೆಗೆ ಬಸ್ ಸೇವೆಯನ್ನು ಆರಂಭಿಸಬೇಕೆಂದು ತಿಳಿಸಿದರು.
ಜನರಿಗೆ ಅನುಕೂಲವಾಗಲು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದು ಹೋಬಳಿಯಲ್ಲಾದರೂ ಜನಸಂಪರ್ಕ ಸಭೆಗಳನ್ನು ಆಯೋಜಿಸುವ ಮೂಲಕ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಮನವಿ ಮಾಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಹಳ್ಳಿಗಳಲ್ಲಿಯು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಗ್ರಾಮಗಳಲ್ಲಿನ ಮಹಿಳೆಯರು ಇದನ್ನು ತಡೆಗಟ್ಟಬೇಕೆಂದು ಮನವಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಮುಂದಾಗಲು ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ರವರು ಮಾತನಾಡಿ ಜನರು ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ನೂರಾರು ಕಿ.ಮೀ ದೂರದ ಬೆಂಗಳೂರಿನವರೆಗೆ ತೆರಳುವರು. ಇಂತಹ ಸಮಸ್ಯೆಗಳು ಜಿಲ್ಲಾ ಮಟ್ಟ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಸಮಸ್ಯೆಗಳಾಗಿರುತ್ತವೆ. ಈ ಸಮಸ್ಯೆಗಳು ಸ್ಥಳೀಯ ಮಟ್ಟದ್ದಾಗಿರುವುದರಿಂದ ಇಲ್ಲಿಯೇ ಪರಿಹರಿಸಿಕೊಳ್ಳಲು ಅವಕಾಶ ಇರುತ್ತದೆ. ಆದ್ದರಿಂದಲೇ ಜನರ ಮನೆ ಬಾಗಿಲಿನಲ್ಲಿಯೇ ಸೌಲಬ್ಯಗಳನ್ನು ಕಲ್ಪಿಸಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ.
ಜನರು ಕಂದಾಯ, ವಸತಿ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕವಾದ ಹಾಗೂ ವೈಯಕ್ತಿಕವಾದ ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಂತಹ ಸಮಸ್ಯೆಗಳ ನಿವಾರಣೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಆದ್ಯತೆ ಮೇಲೆ ಕೆಲಸ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಕ್ರಮ ಕೈಗೊಳ್ಳುವರು.
ಸರ್ಕಾರದ ವಿವಿಧ ಯೋಜನೆಗಳಿಗೆ ಹಾಗೂ ಸವಲತ್ತುಗಳ ವಿತರಣೆಗೆ ಆಧಾರ್ ಸಂಖ್ಯೆಯನ್ನು ನೀಡಬೇಕಿರುವುದರಿಂದ ತಿದ್ದುಪಡಿ ಕೇಂದ್ರವಿಲ್ಲದೆ ಜನರಿಗೆ ತೊಂದರೆಯಾಗಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಎಲ್ಲಾ ಹೋಬಳಿಗಳಲ್ಲಿ ಆಧಾರ್ ತಿದ್ದುಪಡಿಗಾಗಿ ಮೊಬೈಲ್ ಘಟಕವನ್ನು ಕಳುಹಿಸಿ ತಿದ್ದುಪಡಿ ಮಾಡಲು ಅಕ್ಟೋಬರ್ 6 ರಿಂದಲೇ ಚಾಲನೆ ಮಾಡಲಾಗುತ್ತದೆ ಎಂದರು.
ಶ್ರೀರಾಂಪುರ ಹಾಗೂ ಹೊಸದುರ್ಗ ತಾಲ್ಲೂಕು ಕೇಂದ್ರಕ್ಕೆ ಹೋಗಲು ಬಸ್‍ಗಳ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದು ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದರು.
ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಣೆ ಮಾಡಲಾಗಿದ್ದು ಭಾಗ್ಯಲಕ್ಷ್ಮಿ ಬಾಂಡ್, ಕೃಷಿ ಇಲಾಖೆಯಿಂದ ಕೃಷಿಭಾಗ್ಯದಡಿ ಪರಿಕರಗಳು, ಮಣ್ಣು ಆರೋಗ್ಯ ಚೀಟಿ, ಉದ್ಯೋಗ ಖಾತರಿಯಡಿ ಜಾಬ್‍ಕಾರ್ಡ್ ವಿತರಣೆ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಮಂಜೂರಾತಿ ಆದೇಶ, 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಪಶುಸಂಗೋಪನಾ ಇಲಾಖೆಯಿಂದ ಮೇವಿನ ಕಿಟ್‍ಗಳ ವಿತರಣೆ ಸೇರಿದಂತೆ 150 ಕ್ಕೂ ಹೆಚ್ಚಿನ ಜನರಿಗೆ ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಅನಂತ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚೇತನಾ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾರ ಪ್ರೇಮಾರವಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಕವಿರಾಜ್, ಕಾರ್ಯನಿರ್ವಾಹಕ ಅಧಿಕಾರಿ ಮುಬಿನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ